Advertisement

ಸಚ್ಚೇರಿಪೇಟೆ: ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್‌

01:00 AM Mar 06, 2019 | Harsha Rao |

ಬೆಳ್ಮಣ್‌: ಸಚ್ಚೇರಿಪೇಟೆಯ ಹೃದಯ ಭಾಗದಲ್ಲಿ ಗ್ರಾಮಸ್ಥರಿಗೆ ನೀರು ಪೂರೈಕೆಯ ಮಾಡುವ 50 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ ಕುಸಿಯುವ ಹಂತದಲ್ಲಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ.

Advertisement

20 ವರ್ಷಗಳ ಹಿಂದೆ ಮುಂಡ್ಕೂರು ಗ್ರಾಮ ಪಂಚಾಯತ್‌ ಮನೆಗಳಿಗೆ ನಳ್ಳಿ ನೀರಿನ‌ ಯೋಜನೆ ಜಾರಿಗೆ ತಂದಾಗ ಉಡುಪಿ ಜಿ.ಪಂ ಇಂಜಿನಿಯರ್‌ ವಿಭಾಗ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯಡಿಯಲ್ಲಿ ಕಟ್ಟಿದ ನೀರಿನ ಟ್ಯಾಂಕ್‌ ಇದಾಗಿದ್ದು ಶಿಥಿಲವಾಗಿದೆ.  

ಅಪಾಯಕಾರಿ 
ಈ ಟ್ಯಾಂಕ್‌ನ ನಾಲ್ಕು ಪಿಲ್ಲರ್‌ಗಳಲ್ಲಿ ಮೇಲಿಂದ  ಕೆಳಗಿನವರೆಗೆ ಬಿರುಕು ಕಾಣಿಸಿಕೊಂಡಿದ್ದು ಕಂಬಗಳ ಬುಡದಲ್ಲೆ ಸಿಮೆಂಟ್‌ಗಳು ಕಿತ್ತು ಹೋಗಿ ಒಳಭಾಗದ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಹೊರಗೆ ಕಾಣಿಸುತ್ತಿವೆ. ಟ್ಯಾಂಕ್‌ನ ತಳಭಾಗದಲ್ಲಿ ದೊಡ್ಡ ಮಟ್ಟದ ಬಿರುಕು ಬಿಟ್ಟಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಟ್ಯಾಂಕ್‌ ಇರುವುದರಿಂದ ಸಂಚಾರಿಗಳಿಗೆ ಅಪಾಯದ ಭೀತಿ ಕಾಡಿದೆ. ಇದೇ ಟ್ಯಾಂಕ್‌ಗೆ ನೀರು ತುಂಬಿಸಿ ಸಚ್ಚೇರಿಪೇಟೆ ಪರಿಸರದ ಮನೆಗಳಿಗೆ ನೀರು ಪೂರೈಸಲಾಗುತ್ತದೆ. ಟ್ಯಾಂಕ್‌ ಬಹಳ ಹಳೆಯದಲ್ಲದಿದ್ದರೂ, ಶಿಥಿಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ.  
ಪಕ್ಕದಲ್ಲೇ ಮೈದಾನ, ರಿಕ್ಷಾ ಪಾರ್ಕಿಂಗ್‌  
ಟ್ಯಾಂಕ್‌ ಪಕ್ಕದಲ್ಲಿ ಮೈದಾನವಿದ್ದು, ಮಕ್ಕಳು ನಿತ್ಯವೂ ಇಲ್ಲೇ ಆಟ ಆಡುತ್ತಾರೆ. ರಿಕ್ಷಾ ಪಾರ್ಕಿಂಗ್‌ನಲ್ಲಿ ಜಾಗವಿಲ್ಲದಿದ್ದರೆ, ರಿಕ್ಷಾ ಚಾಲಕರೂ ಟ್ಯಾಂಕ್‌ ಪಕ್ಕ ನಿಲುಗಡೆ ಮಾಡುತ್ತಾರೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಅಪಾಯಕಾರಿ ಟ್ಯಾಂಕ್‌ನ್ನು ಪರಿಶೀಲಿಸಿ ಕ್ರಮಕೈಗೊಳ್ಳ ಬೇಕೆಂದು ಸ್ಥಳೀಯರ ಆಗ್ರಹ.

ಇಲಾಖೆಗೆ ಮನವರಿಕೆ
ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ಶುಭಾ ಪಿ. ಶೆಟ್ಟಿ, ಮುಂಡ್ಕೂರು ಗ್ರಾ. ಪಂ. ಅಧ್ಯಕ್ಷೆ

ಸೂಕ್ತ ಕ್ರಮ
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶಶಿಧರ ಆಚಾರ್ಯ,  ಮುಂಡ್ಕೂರು ಪಿಡಿಒ 

Advertisement
Advertisement

Udayavani is now on Telegram. Click here to join our channel and stay updated with the latest news.

Next