ಹೊಸದಿಲ್ಲಿ : ಕೇರಳದ ಶಬರಿಮಲೆಯಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯೋವರ್ಗದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ನೀಡಿರುವ ಐತಿಹಾಸಿಕ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ತಾನು ಮುಂದಿನ ವಾರದಿಂದ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಇಂದು ಗುರುವಾರ ಹೇಳಿದೆ.
ಈ ರೀತಿಯ ಎಲ್ಲ ಅರ್ಜಿಗಳ ವಿಚಾರಣೆಯನ್ನು ತಾನು ಫೆ.6ರಿಂದ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಪುನರ್ ಪರಿಶೀಲನೆ ಕೋರಿರುವ ಸುಮಾರು 48 ಅರ್ಜಿಗಳು ಈಗ ಸವೋಚ್ಚ ನ್ಯಾಯಾಲಯದ ಮುಂದಿವೆ. ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಫೆ.6ರಿಂದ ಆರಂಭಿಸಲಿದೆ.
ಈ ಮೊದಲು ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 22ಕ್ಕೆ ನಿಗದಿಸಿತ್ತು. ಆದರೆ ಜಸ್ಟಿಸ್ ಇಂದೂ ಮಲ್ಹೋತ್ರಾ ಅವರು ವೈದ್ಯಕೀಯ ರಜೆಯಲ್ಲಿದ್ದುದರಿಂದ ಅಂದಿನ ವಿಚಾರಣೆಯನ್ನು ರದ್ದುಪಡಿಸಲಾಗಿತ್ತು.
ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಯಲ್ಲಿನ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದ ಮಹಿಳೆಯರು ಪ್ರವೇಶಿಸುವುದನ್ನು ಉಗ್ರವಾಗಿ ಪ್ರತಿಭಟಸಿದ್ದರು. ಇದರ ಹೊರತಾಗಿಯೂ ಅಯ್ಯಪ್ಪ ದೇಗುಲ ಪ್ರವೇಶಿಸಲು ಶಕ್ತರಾದ ಕೆಲವು ಮಹಿಳೆಯರು ತೀವ್ರ ತಿರುಗೇಟು ಎದುರಿಸಬೇಕಾಯಿತು. ಇಂತಹ ಮಹಿಳೆಯರ ಪೈಕಿ ಒಬ್ಟಾಕೆಯನ್ನು ಆಕೆಯೇ ಅತ್ತೆಯೇ ಹೊಡೆದಿದ್ದರು.