ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದ ನೀಲಕ್ಕಲ್ ಬಳಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಪೊಲೀಸರು ಮತ್ತು ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಶಬರಿಮಲೆ ಸಮೀಪದ ನೀಲಕ್ಕಲ್, ಪಂಪ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಸಂಜೆ 5ಗಂಟೆಗೆ ದೇಗುಲದ ಬಾಗಿಲು ತೆರೆಯಲಿದ್ದು, ಈ ವೇಳೆ ದೇವಾಲಯದ ಒಳಪ್ರವೇಶಿಸಲು ಮಹಿಳೆಯರು ಸಜ್ಜಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮಹಿಳೆಯರು ಗರ್ಭಗುಡಿ ಒಳಪ್ರವೇಶಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆ ಇಬ್ಬರು ಮಹಿಳೆಯರು ಶಬರಿಮಲೆ ಸಮೀಪ ತೆರಳಿದ್ದು, ಪಂಪದಲ್ಲಿ ಅವರನ್ನು ಬಲವಂತವಾಗಿ ವಾಪಸ್ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರತಿಭಟನಾಕಾರರ ಮುಖಂಡ ರಾಹುಲ್ ಈಶ್ವರ್ ಅವರನ್ನು ಪಂಪದ ಬಳಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಎಸ್ ಆರ್ ಟಿಸಿ ಹಾಗೂ ಪತ್ರಕರ್ತರ ವಾಹನದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಟಿವಿ ಚಾನೆಲ್ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.