ತಿರುವನಂತಪುರಂ: 40 ವರ್ಷದ ಇಬ್ಬರು ಮಹಿಳೆಯರು ಬುಧವಾರ ಬೆಳಗ್ಗೆ ಶಬರಿ ಮಲೆ ದೇಗುಲವನ್ನು ಪ್ರವೇಶಿಸಿದ ಹಿನ್ನಲೆಯಲ್ಲಿ ದೇವಾಲಯದ ಬಾಗಿಲನ್ನು ಕೆಲ ಹೊತ್ತು ಮುಚ್ಚಿ ಪ್ರಾಂಗಣವನ್ನು ಅರ್ಚಕರು ಶುದ್ಧೀಕರಣ ನಡೆಸಿದ್ದಾರೆ.
ಮಹಿಳೆಯರು ದೇಗುಲ ಪ್ರವೇಶಿಸಿರುವುದು ಖಚಿತವಾದೊಡನೆಯೇ ಅರ್ಚಕರು ದೇಗುಲವನ್ನು ಶುದ್ಧೀಕರಿಸಿ ಬಾಗಿಲನ್ನು ಮುಚ್ಚಿದ್ದಾರೆ. 3 ಗಂಟೆಗಳ ಕಾಲ ಮುಚ್ಚಲಾಗಿದ್ದ ಬಾಗಿಲನ್ನು 11.30 ರ ವೇಳೆಗೆ ಮತ್ತೆ ತೆರೆದು ಭಕ್ತರಿಗೆ ಅನುಕೂಲ ಮಾಡಿ ಕೊಡಲಾಗಿದೆ.
ಮಹಿಳೆಯರು ದೇಗುಲ ಪ್ರವೇಶಿಸಿದ ಬೆನ್ನಲ್ಲೇ ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು , ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಭಾರೀ ಪ್ರತಿಭಟನೆಗೆ ಸಜ್ಜಾದ ಬಿಜೆಪಿ
ಶಬರಿ ಮಲೆ ದೇಗುಲದೊಳಗೆ ಮಹಿಳೆಯರು ಪ್ರವೇಶಿಸಿದುದನ್ನು ಖಂಡಿಸಿ ಬಿಜೆಪಿ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ„ ಅವರು ರಾಜ್ಯಾಧ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಕಮ್ಯೂನಿಷ್ಟ್ ಸರಕಾರದ ಪಿತೂರಿಯಿಂದ ಈ ಘಟನೆ ನಡೆದಿದೆ ಎಂದು ಕಿಡಿ ಕಾರಿದ್ದಾರೆ.
40 ವರ್ಷ ಪ್ರಾಯದ ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಾಲಾಧಾರಿ ಮಹಿಳೆಯರು ನಸುಕಿನ 4 ಗಂಟೆಯ ಒಳಗೆ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗಿದ್ದಾರೆ. ಮಹಿಳೆಯರಿಗೆ ಪೊಲೀಸ್ ತಂಡವೊಂದು ರಕ್ಷಣೆ ನೀಡಿದೆ.
ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಧೃಡಪಡಿಸಿದ್ದಾರೆ.
ಇದೇ ಮಹಿಳೆಯರು ಡಿಸೆಂಬರ್ ತಿಂಗಳಿನಲ್ಲಿ ದೇವಾಲಯ ಪ್ರವೇಶಿಸಲು ಪ್ರಯತ್ನಿಸಿ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಾಪಾಸಾಗಿದ್ದರು ಎಂದು ತಿಳಿದು ಬಂದಿದೆ.