ತಿರುವನಂತಪುರಂ:ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧವಿದ್ದ ಹೊರತಾಗಿಯೂ ನಲವತ್ತು ಆಸುಪಾಸು ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ಬೆಳಗಿನ ಜಾವ ದೇಗುಲ ಪ್ರವೇಶಿಸಿದ್ದನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ನೀಡಿರುವ ಹರತಾಳಕ್ಕೆ ಕೇರಳ ಭಾರೀ ಪ್ರತಿಭಟನೆ, ಹಿಂಸಾಚಾರಕ್ಕೆ ಗುರುವಾರ ತತ್ತರಿಸಿ ಹೋಗಿದೆ.
ಪ್ರತಿಭಟನೆ ವೇಳೆ ಹಲವಾರು ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆದಿದೆ. ಪಾಲಕ್ಕಾಡ್ ನಲ್ಲಿ ಟಿವಿ ಚಾನೆಲ್ ವೊಂದರ ಹಿರಿಯ ವರದಿಗಾರನ ಮೇಲೆ ದಾಳಿ ನಡೆಸಿದ್ದಾರೆ. ಮತ್ತೊಂದೆಡೆ ಹಲ್ಲೆಗೊಳಗಾದರೂ ಕಣ್ಣೀರು ಹಾಕುತ್ತಲೇ ಕರ್ತವ್ಯ ನಿರ್ವಹಿಸಿದ ಚಾನೆಲ್ ವೊಂದರ ಕ್ಯಾಮೆರಾಮನ್ ಫೋಟೋ ವೈರಲ್ ಆಗಿದೆ.
ಪಟ್ಟಣತಿಟ್ಟಂನಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ತ್ರಿಶ್ಶೂರ್ ನಲ್ಲಿ ಬಿಜೆಪಿ-ಎಸ್ ಡಿಪಿಐ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ. ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭದ್ರತಾ ವಾಹನವನ್ನು ತಡೆಯಲು ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಮುಖ್ಯಮಂತ್ರಿಗಳ ಭದ್ರತಾ ವಾಹನ ಹೋಗುತ್ತಿದ್ದಾಗ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದಾಗ ವಾಹನ ಹೊಡೆದ ಪರಿಣಾಮ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು ಜಿಲ್ಲೆಯ ತಲಶ್ಶೇರಿಯಲ್ಲಿ ಸಿಪಿಐ(ಎಂ)ನ ಕಚೇರಿ ಮೇಲೆ ಕಚ್ಛಾ ಬಾಂಬ್ ಎಸೆದ ಘಟನೆ ನಡೆದಿದ್ದು, ಅದು ಸ್ಫೋಟಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ನೆಡುಮಂಗಾಡು ಪೊಲೀಸ್ ಠಾಣೆಯ ಮೇಲೆ ಕಚ್ಛಾ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಪೊಲೀಸರು ಸುಮಾರು 10 ಮಂದಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.