ತಿರುವನಂತಪುರ/ಕೊಚ್ಚಿ: ಈ ತಿಂಗಳ 16ರಿಂದ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲಿರುವಂತೆಯೇ ಭದ್ರತೆಯ ವಿಚಾರವೂ ತಲೆನೋವಾಗಿ ಪರಿಣಮಿಸಿದೆ. ಕೇರಳ ಗುಪ್ತಚರ ವಿಭಾಗ ನೀಡಿದ ಮಾಹಿತಿ ಪ್ರಕಾರ ತೀವ್ರಗಾಮಿಗಳು ಮತ್ತು ರಾಷ್ಟ್ರ ವಿರೋಧಿ ಗುಂಪುಗಳು ತೊಂದರೆ ನೀಡುವ ಸಾಧ್ಯತೆ ಇದೆ. ಹೀಗಾಗಿ, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹಾರ ಸೂಚನೆ ನೀಡಿದ್ದಾರೆ. ದೇಗುಲಕ್ಕೆ ದಟ್ಟಡವಿಯ ಮೂಲಕ ತೆರಳಿ ಕಿಡಿಗೇಡಿಗಳು ಅನಾಹುತ ಮಾಡುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಾಲ್ಕು ವಲಯಗಳು: ಭದ್ರತಾ ವ್ಯವಸ್ಥೆಗಾಗಿ 15 ಸಾವಿರ ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಪಂಪಾ, ನಿಳಕ್ಕಲ್-ವಡಸ್ಸೆರಿಕ್ಕರ-ಮರಕ್ಕೋಟ್ಟಂ, ಸನ್ನಿಧಾನ (ದೇಗುಲ ಮುಖ್ಯ ಆವರಣ), ಆಕಾಶದಿಂದ ವೀಕ್ಷಣೆ ಎಂಬ ನಾಲ್ಕು ವಲಯಗಳನ್ನೂ ರಚಿಸಲಾಗಿದೆ. ಪ್ರತಿ ವಲಯದಲ್ಲಿ 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಜತೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನೂ ನಿಯೋಜಿಸಲಾಗುತ್ತದೆ.
ಹೈಕೋರ್ಟ್‌ಗೆ ಮನವಿ: ಶಬರಿಮಲೆ ದೇಗುಲಕ್ಕಾಗಿ ವಿಶೇಷ ಆಯುಕ್ತ ಎಂ.ಮನೋಜ್ ಅವರು ಭಕ್ತರಿಗೆ ತೊಂದರೆ ನೀಡಬಾರದು ಎಂದು ರಾಜಕೀಯ ಪಕ್ಷಗಳ ಪ್ರೇರಿತ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಎರ್ನಾಕುಳಂನಲ್ಲಿರುವ ಕೇರಳ ಹೈಕೋರ್ಟ್‌ಗೆ ವರದಿ ಸಲ್ಲಿಸಿರುವ ಮನೋಜ್, ನಿಳಕ್ಕಲ್, ಪಂಪಾ ಮತ್ತು ಶಬರಿಮಲೆಯಲ್ಲಿ ಪ್ರತಿಭಟನೆ ನಡೆಸದಂತೆ ಆದೇಶ ಹೊರಡಿಸಬೇಕು ಎಂದು ಅರಿಕೆ ಮಾಡಿಕೊಂಡಿದ್ದಾರೆ. ನ.16ರಿಂದ ದೇಗುಲ ತೆರೆಯಲಿರುವಂತೆಯೇ ಸಮಾಜ ಹಿತ ಬಯಸದ ಶಕ್ತಿಗಳು ಹಾಲಿ ಸ್ಥಿತಿಯನ್ನು ದುರುಪಯೋಗ ಮಾಡುವ ಸಾಧ್ಯತೆ ಇದೆ. ನ.5ರಂದು ನಡೆದ ಘಟನೆಗಳ ವಿವರಗಳನ್ನು ನೀಡಿದ್ದಾರೆ.
ನ.13ಕ್ಕೆ ವಿಚಾರಣೆ: ಈ ನಡುವೆ ಸೆ.28ರಂದು ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೋರಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಗಳ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ (ನ.13) ನಡೆಸಲಿದೆ.