Advertisement

Sabarimala; ಶಬರಿಮಲೆ ಯಾತ್ರಾರ್ಥಿಗಳಿಗೆ ಉಚಿತ ವಿಮಾ ರಕ್ಷಣೆ

09:26 PM Nov 02, 2024 | Team Udayavani |

ಕೊಟ್ಟಾಯಂ: ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಶಬರಿಮಲೆ (ಮಂಡಲಂ-ಮಕರವಿಳಕ್ಕು) ಯಾತ್ರೆಯ ಅವಧಿಯಲ್ಲಿ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಐದು ಲಕ್ಷ ರೂಪಾಯಿಗಳ ಉಚಿತ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ.

Advertisement

ಈ ವರ್ಷ ಶಬರಿಮಲೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ದೇಗುಲವನ್ನು ನಿರ್ವಹಿಸುವ ಅಪೆಕ್ಸ್ ದೇವಸ್ಥಾನದ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ವಿಮಾ ಸೌಲಭ್ಯವನ್ನು ಒದಗಿಸಲಿದೆ ಎಂದು ರಾಜ್ಯ ದೇವಸ್ವಂ ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ.

ಎಲ್ಲಾ ಯಾತ್ರಾರ್ಥಿಗಳಿಗೆ ಸುಗಮ ದರ್ಶನವಾಗಲು ಬೆಟ್ಟದ ದೇಗುಲದಲ್ಲಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಐದು ಲಕ್ಷ ರೂ.ಗಳ ವಿಮಾ ರಕ್ಷಣೆಯಡಿ ಒಂದು ವೇಳೆ ಯಾತ್ರಾರ್ಥಿಗಳು ಸಾವನ್ನಪ್ಪಿದರೆ, ಮೃತದೇಹವನ್ನು ಮನೆಗೆ ತರಲು ದೇವಸ್ವಂ ಮಂಡಳಿಯು ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದೆ ಎಂದು ವಾಸವನ್ ಸುದ್ದಿಗಾರರಿಗೆ ತಿಳಿಸಿದರು.

ವಾರ್ಷಿಕ ಯಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಅಂತಿಮ ಹಂತದ ವ್ಯವಸ್ಥೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಯಾತ್ರಾ ಕಾಲದಲ್ಲಿ ಶಬರಿಮಲೆಯಲ್ಲಿ 13,600 ಪೊಲೀಸ್ ಸಿಬಂದಿಗಳು, 2,500 ಅಗ್ನಿಶಾಮಕ ಮತ್ತು ರಕ್ಷಣಾ ಸಿಬಂದಿ ಮತ್ತು 1,000 ನೈರ್ಮಲ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

Advertisement

ಯಾತ್ರಾರ್ಥಿಗಳು ತಲುಪುವ ಎಲ್ಲಾ ಸ್ಥಳಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಜಲ ಪ್ರಾಧಿಕಾರವು ವಿಸ್ತಾರವಾದ ವ್ಯವಸ್ಥೆಯನ್ನು ಮಾಡಿದೆ ಎಂದು ತಿಳಿಸಿದರು.

ಕಳೆದ ವರ್ಷ 15 ಲಕ್ಷ ಜನರಿಗೆ ಅನ್ನದಾನ (ಉಚಿತ ಊಟ) ನೀಡಲಾಗಿತ್ತು. ಈ ವರ್ಷ 20 ಲಕ್ಷ ಅಯ್ಯಪ್ಪ ಭಕ್ತರಿಗೆ ಸನ್ನಿಧಾನದಲ್ಲಿ ಅನ್ನದಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next