ಕಾಸರಗೋಡು: ನವೆಂಬರ್ 15ರಿಂದ ಡಿ.15ರ ಅವಧಿಯಲ್ಲಿ ಶಬರಿಮಲೆಗೆ (Sabarimala) 23,44,490 ಭಕ್ತರು ಭೇಟಿ ನೀಡಿದ್ದಾರೆ. ಭಕ್ತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ 19,03,321 ಭಕ್ತರು ದರ್ಶನ ಪಡೆದಿದ್ದರು. ಭಕ್ತರು ವರ್ಚುವಲ್ ಸರತಿಯಲ್ಲಿ ನಿಗದಿತ ಸಮಯಕ್ಕೆ ಬದ್ಧರಾಗದೇ ಇರುವುದರಿಂದ ಜನಸಂದಣಿ ನಿರ್ವಹಿಸಲು ತೊಂದರೆಯಾಗುತ್ತಿದೆ.
ವರ್ಚುವಲ್ ಸರತಿ ಬುಕ್ಕಿಂಗ್ ಒತ್ತು
ಡಿ.25 ಮತ್ತು 26ರಂದು ಜನಸಂದಣಿ ಕಡಿಮೆ ಮಾಡಲು ವರ್ಚುವಲ್ ಕ್ಯೂಗೆ ಒತ್ತು ನೀಡಲಾಗಿದೆ. ಶಬರಿಮಲೆ ಯಾತ್ರೆಗೆ ಸಂಬಂಧಿ ಸಿ ಜಿಲ್ಲಾ ಪೊಲೀಸರು ಕ್ಯೂಆರ್ ಕೋಡ್ ರೂಪದಲ್ಲಿ ಶಬರಿಮಲ ಪೊಲೀಸ್ ಗೈಡ್ ಎಂಬ ಆನ್ ಲೈನ್ ಪೋರ್ಟಲ್ ಸಿದ್ಧಪಡಿಸಿದ್ದಾರೆ. ತೀರ್ಥ ಯಾತ್ರೆಯ ಪ್ರಮುಖ ಸ್ಥಳಗಳಲ್ಲಿ ಈ ಪೋರ್ಟಲ್‌ನ ಕ್ಯೂಆರ್ ಕೋಡ್ ಲಭ್ಯವಾಗುವಂತೆ ಮಾಡಲಾಗಿದೆ.
ಹೆಚ್ಚುವರಿಯಾಗಿ, ಜಿಲ್ಲಾಡಳಿತವು ಚಾಟ್‌ಬಾಟ್ ಸೇವೆಯನ್ನು ಪ್ರಾರಂಭಿಸಿದ್ದು, 6238008000ಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಬಹುದು. ಇದು ಭಕ್ತರಿಗೆ ತುರ್ತು ವೈದ್ಯಕೀಯ ಸಹಾಯ, ದೇವಾಲಯದ ಪೂಜಾ ಸಮಯಗಳು, ಕೆಎಸ್‌ಆರ್‌ಟಿಸಿ ಬಸ್ ಗಳ ವೇಳಾಪಟ್ಟಿ ಮತ್ತು ಇತರ ಉಪಯುಕ್ತ ಮಾಹಿತಿಗಳನ್ನು ಒದಗಿಸಲಾಗಿದೆ.
ಯಾತ್ರಿಕರು ಅನುಸರಿಸಬೇಕಾದ ನಿಯಮಗಳು
ಬೆಟ್ಟ ಹತ್ತುವಾಗ 10 ನಿಮಿಷಗಳ ನಡಿಗೆ ಬಳಿಕ 5 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವುದು.
ಸನ್ನಿಧಾನ ತಲುಪಲು ಮರಕೂಟಂ, ಸಾರಂಕುತಿ, ನಡಪಂದಲ್ ಸಾಂಪ್ರದಾಯಿಕ ಮಾರ್ಗವನ್ನು ಬಳಸಿ, ಹದಿನೆಂಟು ಮೆಟ್ಟಿಲುಗಳಲ್ಲಿ ಸರತಿ ಸಾಲನ್ನು ಅನುಸರಿಸುವುದು.
ಮಕ್ಕಳು, ವಯೋವೃದ್ಧರು ಮತ್ತು ವ್ರತಧಾರಿಗಳಾಗಿರುವ ಬಾಲಕಿಯರ ಕುತ್ತಿಗೆಗೆ ನೇತುಹಾಕಬೇಕಾದ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳೊಂದಿಗೆ ಗುರುತಿನ ಚೀಟಿಗಳು ಪಡೆಯುವುದು.
ಪವಿತ್ರ ಮೆಟ್ಟಿಲುಗಳನ್ನು ಹತ್ತುವಾಗ ಮಂಡಿಯೂರಿ ಕುಳಿತುಕೊಳ್ಳಬಾರದು.
ಹಿಂದಿರುಗಲು ನಡಪಂದಲ್ ಫ್ಲೈಓವರ್ ಹೊರತುಪಡಿಸಿ ಯಾವುದೇ ಮಾರ್ಗವನ್ನು ಬಳಸಬಾರದು.
ಮೇಲಿನ ತಿರುಮಟ್ಟಂ ಅಥವಾ ತಂತ್ರಿನಾಡದಲ್ಲಿ ವಿಶ್ರಾಂತಿ ಪಡೆಯಬಾರದು.