Advertisement

ಶಬರಿಮಲೆ: ಡಿಸೆಂಬರ್‌ನೊಳಗೆ ಸಂಪರ್ಕ ಸಾಧ್ಯ?

06:00 AM Aug 26, 2018 | Team Udayavani |

ಶಬರಿಮಲೆ: ಎಲ್ಲವೂ ಅಂದು ಕೊಂಡಂತೆ ಸುಸೂತ್ರವಾಗಿ ನಡೆದರೆ ಭಕ್ತಾದಿ ಗಳಿಗೆ ಡಿಸೆಂಬರ್‌ನ ಮಂಡಲ ಪೂಜೆಗೆ ಶಬರಿಮಲೆಗೆ ಹೋಗಲು ಅವಕಾಶ ಸಿಗಬಹುದು. ಪ್ರಸ್ತುತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎರಡೂ ಸೇತುವೆಗಳು ಭಾರೀ ಮಳೆಯಿಂದ ಉಂಟಾದ ನೆರೆಯಲ್ಲಿ ಕೊಚ್ಚಿಹೋಗಿವೆ. ಈ ನಿಟ್ಟಿನಲ್ಲೇ ಆದಷ್ಟು ಬೇಗ ಪಂಪಾ ನದಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲು ಟ್ರಾವೆಂಕೂರ್‌ ದೇವಸ್ವಂ ಬೋರ್ಡ್‌ (ಟಿಡಿಬಿ) ಸೇನಾ ಯೋಧರ ನೆರವನ್ನು ಕೋರಿದೆ. ಈಗಾಗಲೇ ಯೋಧರು ಸೇತುವೆ ನಿರ್ಮಿಸುವ ಸ್ಥಳವನ್ನೂ ಪರಿಶೀಲಿಸಿದ್ದು, ಎರಡು ದಿನಗಳಲ್ಲಿ ಕಾಮಗಾರಿ ಆರಂಭ ವಾಗುವ ಸಂಭವವಿದೆ. ಇವೆಲ್ಲ ನಿಗದಿತ ವೇಳೆಯಲ್ಲಿ ನಡೆದರೂ ಮುಂದಿನ ನವೆಂಬರ್‌ವರೆಗೆ ಭಕ್ತರಿಗೆ ಹೋಗಲು ಅವಕಾಶವಿರದು. 

Advertisement

ಹಾಗೆಂದು ದೇವಸ್ಥಾನದಲ್ಲಿ ನಡೆಯ ಬೇಕಾದ ಧಾರ್ಮಿಕ ಕಾರ್ಯಕ್ರಮಗಳು, ತಿಂಗಳ ವಿಶೇಷ ಪೂಜೆಗಳು ಎಂದಿನಂತೆ ನಡೆಯುತ್ತವೆ. ಪಂಪಾ ನದಿಯ ಮತ್ತೂಂದು ಬದಿಯಲ್ಲಿರುವ ದೇವಸ್ಥಾನ ದಲ್ಲಿ ಅರ್ಚಕರು, ಕಾವಲುಗಾರರು ಹಾಗೂ ಕೆಲವು ಪೊಲೀಸ್‌ ಸಿಬಂದಿ ನೆಲೆಸಿದ್ದಾರೆ. ಆದರೆ ಭಕ್ತರಿಗೆ ನದಿ ದಾಟಿ ದೇವಸ್ಥಾನಕ್ಕೆ ಹೋಗಲಾಗದು.

ಕಾಮಗಾರಿ ಆರಂಭವನ್ನು ಉದಯವಾಣಿಗೆ ದೂರವಾಣಿ ಕರೆ ಮೂಲಕ ಖಚಿತಪಡಿಸಿದ ದೇವಸ್ವಂ ಇಲಾಖಾ ಸಚಿವ ಕಡಕಂಪಳ್ಳಿ ಸುರೇಂದ್ರನ್‌, “ನಾವು ಬೇಗ ತಾತ್ಕಾಲಿಕ ಸೇತುವೆ ನಿರ್ಮಿಸಲು ಕ್ರಮ ವಹಿಸಿದ್ದೇವೆ. ಯೋಧರೊಂದಿಗೆ ಮಾತುಕತೆ ನಡೆಸಿದ್ದು, ಕೂಡಲೇ ಕಾಮಗಾರಿ ಆರಂಭವಾಗಲಿದೆ. ಆದರೆ, ನಾವು ಅಂದುಕೊಂಡಷ್ಟು ಸುಲಭವಲ್ಲ. ನೆರೆ ನೀರು ನುಗ್ಗಿದ್ದಲ್ಲದೆ ಸೇತುವೆ ಕೊಚ್ಚಿ ಹೋಗಿ ಪಂಪ ನದಿಯ ಹರಿವೇ ಬದಲಾಗಿದೆ. ತಾತ್ಕಾಲಿಕ ಸೇತುವೆ ನಿರ್ಮಾಣ ಸಹಿ ತ ಎಲ್ಲವನ್ನೂ ಸರಿಪಡಿಸಲು ಕನಿಷ್ಠ 2-3 ತಿಂಗಳು ಬೇಕು’ ಎಂದು ತಿಳಿಸಿದರು.

ದೇವಸ್ಥಾನ ಮಂಡಳಿ ಮನವಿ
ಆಗಸ್ಟ್‌ 14ರಿಂದ ದೇವಸ್ಥಾನದ ರಸ್ತೆ ಸಂಪರ್ಕ ಕಡಿದುಕೊಂಡಿತ್ತು. ಆ. 15ರಂದು ಶಬರಿಮಲೆಗೆ ಸಾಗುವ ಹಾದಿಯ ಪ್ಲಾಂತೋಡಿನಿಂದ ಪಂಪಾ ಮಧ್ಯೆ ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಗುಡ್ಡ ಜರಿದಿದ್ದು, ಮರಗಳುರುಳಿ ರಸ್ತೆಗೆ ಹಾನಿ ಯಾಗಿತ್ತು.  ಪಂಪಾ ನದಿಯಲ್ಲೂ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದ ಕಾರಣ ದೇವಸ್ಥಾನದ ಮಂಡಳಿ ಭಕ್ತರಿಗೆ ಬಾರದಂತೆ ಮನವಿ ಮಾಡಿತ್ತು. ಚಿಂಗಂ ಪೂಜೆ ಹಾಗೂ ಓಣಂ ಪೂಜೆಗೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ವಾಡಿಕೆ ಇತ್ತು. 

ಯೋಧರ ಜತೆ ಸಭೆ
ಕಳೆದೆರಡು ದಿನದಿಂದ ಜೆ.ಸಿ.ಬಿ. ಮೂಲಕ ರಸ್ತೆ ಕಾಮಗಾರಿ ನಡೆಸಿ ಬಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ಇದಲ್ಲದೆ ಆ. 24 ರಂದು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಯೋಧರು ಸೇತುವೆ ನಿರ್ಮಿಸುವ ಕುರಿತು ಸಭೆ ನಡೆಸಿದ್ದರು. ಅದರಂತೆ ಯೋಧರು ತಾತ್ಕಾಲಿಕ ಸೇತುವೆ ನಿರ್ಮಿಸುವರು. ಕಡಕಂಪಳ್ಳಿ ಸುರೇಂದ್ರನ್‌, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

Advertisement

ಸೇತುವೆಯೇ ಇಲ್ಲ
ಭಕ್ತಾದಿಗಳು ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ತೆರಳಲು ಪಂಪ ನದಿಯನ್ನು ದಾಟಬೇಕು. ಇಲ್ಲಿ ವಾಹನಗಳಿಗೊಂದು ಸೇತುವೆ ಹಾಗೂ ಪಾದಚಾರಿಗಳಿಗೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಮೊನ್ನೆಯ ನೆರೆಗೆ ಎರಡೂ ಸೇತುವೆಗಳು ಕೊಚ್ಚಿ ಹೋಗಿವೆ. ನದಿ ತೀರದ ಮರಗಳೂ ಉರುಳಿ ಬಿದ್ದು ಹಾನಿಯಾಗಿತ್ತು. ದೇವಸ್ಥಾನದ ಅಧೀನದಲ್ಲಿರುವ ರಾಮಮೂರ್ತಿ ಮಂಟಪ ಹಾಗೂ ಇನ್ನೆರಡು ಕಟ್ಟಡಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಅತಿಥಿಗೃಹದ ಕಟ್ಟಡ, ಶೌಚಾಲಯ ಕಟ್ಟಡವೆಲ್ಲದಕ್ಕೂ ನೀರು ನುಗ್ಗಿತ್ತು.

ಸಂಪರ್ಕ ಸೇತು
ಪಂಪಾ ನದಿಗೆ ಸಂಪರ್ಕ ಸೇತುವೆ ಆಗುವವರೆಗೆ ಭಕ್ತರು  ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ  ಭೇಟಿ ಕೊಡಲಾಗದು. ಇದು ಕರಾವಳಿ ಸಹಿತ ರಾಜ್ಯದ ಲಕ್ಷಾಂತರ ಭಕ್ತರಿಗೆ ಬೇಸರದ  ಸಂಗತಿ.

  ಪ್ರಜ್ಞಾ ಶೆಟ್ಟಿ   ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next