Advertisement

ಶಬರಿಮಲೆಗೆ ಮಲೇಷ್ಯಾದ 3 ಮಹಿಳೆಯರ ಪ್ರವೇಶ?

12:30 AM Jan 07, 2019 | Team Udayavani |

ತಿರುವನಂತಪುರಂ: ಜ.2ರಂದು ಬಿಂದು ಮತ್ತು ಕನಕದುರ್ಗಾ ಎಂಬ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ್ದು ಸುದ್ದಿಯಾಗುತ್ತಿದ್ದಂತೆಯೇ ಕೇರಳ ಹೊತ್ತಿ ಉರಿದಿತ್ತು. ಆದರೆ, ಇವರಿಬ್ಬರು ಅಯ್ಯಪ್ಪನ ದರ್ಶನ ಮಾಡುವ ಮುನ್ನಾ ದಿನ ಅಂದರೆ ಜ.1ರಂದು ಮಲೇಷ್ಯಾದ ಮೂವರು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದಿದ್ದರು ಎಂಬ ವಿಚಾರವನ್ನು ರವಿವಾರ ಪೊಲೀಸರು ಬಹಿರಂಗಪಡಿಸಿದ್ದಾರೆ.

Advertisement

ಈ ಕುರಿತು ಕೇರಳ ಪೊಲೀಸರ ವಿಶೇಷ ಪಡೆ ಸೆರೆಹಿಡಿದ ವಿಡಿಯೋ ಕೂಡ ಬಿಡುಗಡೆಯಾಗಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ಮಲೇಷ್ಯಾ ಮೂಲದ ಮೂವರು ತಮಿಳು ಮಹಿಳೆಯರು ದೇಗುಲ ಪ್ರವೇಶಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಒಟ್ಟಾರೆ 10 ಮಹಿಳೆಯರು ದೇಗುಲಕ್ಕೆ ಭೇಟಿ ನೀಡಿದ್ದು, ಅವರೆಲ್ಲರ ಬಗ್ಗೆ ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಅಗತ್ಯಬಿದ್ದರೆ ಈ ವಿವರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವುದು ಪೊಲೀಸರ ಯೋಜನೆಯಾಗಿದೆ ಎಂದು ಹೇಳಲಾಗಿದೆ.

ಅಗಸ್ತ್ಯಕೂಡಂ ಶಿಖರವೇರಲು ಸಜ್ಜು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದ ಎದ್ದ ವಿವಾದವು ಹಿಂಸೆಯ ರೂಪ ತಾಳಿರುವ ನಡುವೆಯೇ ಕೇರಳದ ಮತ್ತೂಂದು ಕ್ಷೇತ್ರದತ್ತ ಮಹಿಳೆಯರು ಕಣ್ಣು ನೆಟ್ಟಿದ್ದಾರೆ. ಅದು ತಿರುವನಂತಪುರಂ ಜಿಲ್ಲೆಯಲ್ಲಿರುವ ಅಗಸ್ತ್ಯಕೂಡಂ ಪರ್ವತ. ಜ.14ರಿಂದ ಆರಂಭವಾಗುವ 41 ದಿನಗಳ ವಾರ್ಷಿಕ ಅಗಸ್ತ್ಯಕೂಡಂ ಟ್ರೆಕಿಂಗ್‌ನಲ್ಲಿ ಮೊತ್ತ ಮೊದಲ ಬಾರಿಗೆ ತೆರಳಲು ಮಹಿಳೆಯರು ನಿರ್ಧರಿಸಿದ್ದಾರೆ. 1,868 ಮೀಟರ್‌ ಎತ್ತರದ ಈ ಪರ್ವತಕ್ಕೆ ಪ್ರತಿ ವರ್ಷ ಟ್ರೆಕ್ಕಿಂಗ್‌ ನಡೆಯುತ್ತಿದ್ದು, ಇದರಲ್ಲಿ ಪುರುಷರು ಮಾತ್ರವೇ ಭಾಗಿಯಾಗುತ್ತಿದ್ದಾರೆ. ಇದನ್ನು ಪ್ರಶ್ನಿಸಿ 2 ಸಂಘಟನೆಗಳು ಕೋರ್ಟ್‌ ಮೆಟ್ಟಿಲೇರಿದ್ದು, ನ.30ರಂದು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್‌, ಲಿಂಗದ ಆಧಾರದಲ್ಲಿ ಟ್ರೆಕ್ಕಿಂಗ್‌ಗೆ ಅನುಮತಿ ನಿರಾಕರಿಸುವಂತಿಲ್ಲ ಎಂದಿತ್ತು. ಈ ಪರ್ವತದಲ್ಲಿ ಅಗಸ್ತ್ಯ ಮುನಿಯನ್ನು ಪೂಜಿಸುವಂಥ ಕಾಣಿ ಬುಡಕಟ್ಟು ಜನಾಂಗವಿದೆ. ಅಗಸ್ತ್ಯಕೂಡಂನಲ್ಲಿ ಅಗಸ್ತ್ಯ ಮುನಿಯ ಮೂರ್ತಿಯಿದೆ. ಅವರ ಸಂಪ್ರದಾಯದ ಪ್ರಕಾರ, ಆ ಮೂರ್ತಿಯ ಸಮೀಪಕ್ಕೂ ಮಹಿಳೆಯರು ಸುಳಿಯುವಂತಿಲ್ಲ. ಅಗಸ್ತ್ಯಕೂಡಂನ ಮೂಲ ನೆಲೆಯಾದ ಅತಿರಾಮಲ ಎಂಬಲ್ಲಿಂದ ಆಚೆಗೆ ಮಹಿಳೆಯರು ಹೋಗುವಂತಿಲ್ಲ. ಹೀಗಾಗಿ, ಈ ಬುಡಕಟ್ಟು ಜನಾಂಗವು ಮಹಿಳೆಯರ ಟ್ರೆಕ್ಕಿಂಗ್‌ಗೆ ವಿರೋಧ ವ್ಯಕ್ತಪಡಿಸಿದೆ.

ನಾಸ್ತಿಕತೆ ಹೇರಲು ಷಡ್ಯಂತ್ರ
ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಕೇರಳ ಸರಕಾರದ ವಿರುದ್ಧ ನಾಯರ್‌ ಸರ್ವೀಸ್‌ ಸೊಸೈಟಿ ಕಿಡಿಕಾರಿದೆ. ಇಲ್ಲಿ ನಡೆದ ಎಲ್ಲ ಬೆಳವಣಿಗೆಗಳೂ ಜನರನ್ನು ನಾಸ್ತಿಕರನ್ನಾಗಿಸಲು ಎಡಪಕ್ಷದ ಸರಕಾರವು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದೆ. ಅತ್ಯಂತ ಸರಳವಾಗಿ ಪರಿಹಾರವಾ ಗುತ್ತಿದ್ದ ವಿವಾದವನ್ನು ಸರಕಾರವೇ ಸಂಕೀರ್ಣ ಗೊಳಿಸಿತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರದಿಂದ ಜನರು ಇದನ್ನು ನಿರೀಕ್ಷಿಸಿರಲಿಲ್ಲ ಎಂದೂ ಎನ್‌ಎಸ್‌ಎಸ್‌ ಹೇಳಿದೆ.

10 ಅಯ್ಯಪ್ಪ ಭಕ್ತರ ಸಾವು
ತಮಿಳುನಾಡಿನ ಪುದುಕೊಟ್ಟಾಯ್‌ನಲ್ಲಿ ಶಬರಿಮಲೆ ಯಾತ್ರೆಗೆ ಹೋಗಿ ಬರುತ್ತಿದ್ದ ಅಯ್ಯಪ್ಪ ಭಕ್ತರ ವ್ಯಾನ್‌ಗೆ ಟ್ರೇಲರ್‌ ಟ್ರಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ, 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಇವರು ರಾಮೇಶ್ವರಂಗೆ ಭೇಟಿ ನೀಡಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ತೆಲಂಗಾಣದವರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಹಿಂಸೆಯ ಮಧ್ಯೆಯೂ ಸಾಮರಸ್ಯ
ಮಹಿಳೆಯರ ಪ್ರವೇಶದ ನಂತರ ನಡೆದ ಹರತಾಳದ ವೇಳೆ ಕೇರಳದಾದ್ಯಂತ ಹಿಂಸಾಚಾರ ಭುಗಿಲೆದ್ದ ಸಮಯದಲ್ಲಿ ಪಾಲಕ್ಕಾಡ್‌ನ‌ಲ್ಲಿ ಸಾಮರಸ್ಯ ಸಾರುವಂಥ ಘಟನೆಯೊಂದು ನಡೆದಿದೆ. ಹೈದರಾಬಾದ್‌ನಿಂದ ಬಂದಿದ್ದ 15 ಮಂದಿ ಅಯ್ಯಪ್ಪ ಭಕ್ತರು ಸಂಚರಿಸುತ್ತಿದ್ದ ವಾಹನವೊಂದು ಇಲ್ಲಿನ ಕುಳಾಲ್‌ವುಂಡಂನಲ್ಲಿ ಮುಂಜಾನೆ ಅಪಘಾತಕ್ಕೀಡಾಗಿತ್ತು. ಅದೇ ಸಮಯದಲ್ಲಿ ಕೆಲವರು ನಮಾಜ್‌ಗೆಂದು ಮಸೀದಿಗೆ ತೆರಳುತ್ತಿದ್ದರು. ಅಪಘಾತ ಸಂಭವಿಸಿದ ಕೂಡಲೇ ಅಲ್ಲಿಗೆ ತೆರಳಿದ ಅವರು, ಗಾಯಾಳುಗಳನ್ನು ರಕ್ಷಿಸಿ, ಮಸೀದಿಗೆ ಕರೆದೊಯ್ದು ಉಪಚಾರ ಮಾಡಿದರು. ಬಳಿಕ ಅವರಿಗೆ ಅಲ್ಲಿಯೇ ಉಪಾಹಾರವನ್ನೂ ನೀಡಿ, ಕಳುಹಿಸಿಕೊಟ್ಟರು ಎಂದು ನ್ಯೂಸ್‌ 18 ವರದಿ ಮಾಡಿದೆ.

ನಾಯರ್‌ ಸರ್ವೀಸ್‌ ಸೊಸೈಟಿ(ಎನ್‌ಎಸ್‌ಎಸ್‌)ಯನ್ನು ಆರೆಸ್ಸೆಸ್‌ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಬೆಂಬಲ ನೀಡುವುದರಿಂದ ದೇಶ ನಾಶವಾಗುತ್ತದೆ ಎಂಬುದನ್ನು ಎನ್‌ಎಸ್‌ಎಸ್‌ ಸದಸ್ಯರು ಅರಿತುಕೊಳ್ಳಬೇಕು.
– ಕಡಕಂಪಳ್ಳಿ ಸುರೇಂದ್ರನ್‌  ದೇವಸ್ವಂ ಸಚಿವ

ಯಾವುದೇ ಧಾರ್ಮಿಕ ನಂಬಿಕೆಗಳನ್ನು ಸಂರಕ್ಷಿಸುವುದು ಮಾನವನ ಅಸ್ತಿತ್ವಕ್ಕೆ ಅತ್ಯಂತ ಮುಖ್ಯವಾದದ್ದು. ಆ ನಂಬಿಕೆಯನ್ನು ನಾಶ ಮಾಡಲು ನಾವು ಬಿಡುವುದಿಲ್ಲ. ರಾಜ್ಯದಲ್ಲಿ ಉಂ ಟಾದ ಹಿಂಸಾಚಾರಕ್ಕೆ ಕೇರಳ ಸರಕಾರವೇ ಕಾರಣ.
– ಜಿ. ಸುಕುಮಾರನ್‌ ನಾಯರ್‌ 
ಎನ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next