Advertisement

Australian Open Women’s Singles: ಸಬಲೆಂಕಾಗೆ ಸತತ 2ನೇ ಪ್ರಶಸ್ತಿ ಸಂಭ್ರಮ

11:37 PM Jan 27, 2024 | Team Udayavani |

ಮೆಲ್ಬರ್ನ್: ಬೆಲರೂಸ್‌ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರದ ಫೈನಲ್‌ನಲ್ಲಿ ಅವರು ಚೀನದ ಜೆಂಗ್‌ ಕ್ವಿನ್ವೆನ್‌ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿದರು. ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸುತ್ತಿಗೆ ನೆಗೆದ ಜೆಂಗ್‌ ಇತಿಹಾಸ ನಿರ್ಮಿಸುವ ಅವಕಾಶದಿಂದ ವಂಚಿತರಾದರು.

Advertisement

ದ್ವಿತೀಯ ಶ್ರೇಯಾಂಕದ, 25 ವರ್ಷದ ಅರಿನಾ ಸಬಲೆಂಕಾ 13 ತಿಂಗಳ ಅವಧಿಯ 3 ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ಳಲ್ಲಿ ಎರಡನ್ನು ಗೆದ್ದ ಸಾಧನೆಗೈದರು. ಇದು ಅವರಿಗೆ ಒಲಿದ 2ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಎರಡೂ “ಮೆಲ್ಬರ್ನ್ ಪಾರ್ಕ್‌’ನಲ್ಲೇ ಒಲಿದದ್ದು ವಿಶೇಷ.

ಅರಿನಾ ಸಬಲೆಂಕಾ 2023ರ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ನಲ್ಲೂ ಜೆಂಗ್‌ ಕ್ವಿನ್ವೆನ್‌ ವಿರುದ್ಧ ಜಯ ಸಾಧಿಸಿದ್ದರು. ಫೈನಲ್‌ನಲ್ಲಿ ಕೊಕೊ ಗಾಫ್ಗೆ ಶರಣಾಗಿ ಪ್ರಶಸ್ತಿ ವಂಚಿತ ರಾಗಬೇಕಾಯಿತು. ಇನ್ನೊಂದೆಡೆ, 2023ರ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದೇ ಜೆಂಗ್‌ ಅವರ ಈವರೆಗಿನ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್‌ ಸಾಧನೆ ಆಗಿತ್ತು.

ಒಂದೂ ಸೆಟ್‌ ಸೋಲಲಿಲ್ಲ!
ಅರಿನಾ ಸಬಲೆಂಕಾ 2012- 2013ರ ಬಳಿಕ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ. ಅಂದು ವಿಕ್ಟೋರಿಯಾ ಅಜರೆಂಕಾ ಈ ಸಾಧನೆಗೈದಿದ್ದರು. ಅಜರೆಂಕಾ ಕೂಡ ಬೆಲರೂಸ್‌ನವರೇ ಎಂಬುದು ವಿಶೇಷ.

ಹಾಗೆಯೇ, ಸಬಲೆಂಕಾ ಒಂದೂ ಸೆಟ್‌ ಕಳೆದುಕೊಳ್ಳದೆ ಆಸ್ಟ್ರೇಲಿಯನ್‌ ಓಪನ್‌ ಕಿರೀಟ ಏರಿಸಿಕೊಂಡ ಅಪ ರೂಪದ ಸಾಧಕಿ ಎನಿಸಿದರು. ಲಿಂಡ್ಸೆ ಡ್ಯಾವನ್‌ಪೋರ್ಟ್‌, ಮರಿಯಾ ಶರಪೋವಾ, ಸೆರೆನಾ ವಿಲಿಯಮ್ಸ್‌ ಮತ್ತು ಆ್ಯಶ್ಲಿ ಬಾರ್ಟಿ ಈ ಯಾದಿಯ ಇತರ ಆಟಗಾರ್ತಿಯರು.

Advertisement

ಸತತ 14 ಜಯದ ಸಾಧನೆ
ಇದು “ಮೆಲ್ಬರ್ನ್ ಪಾರ್ಕ್‌’ನಲ್ಲಿ ಸಬಲೆಂಕಾ ಅವರ ಸತತ 14ನೇ ಗೆಲುವಿನ ಸಂಭ್ರಮ. “ಕಳೆದ ಎರಡು ವಾರಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳಾಗಿದ್ದವು. ನಾನಿಲ್ಲಿ ಮತ್ತೂಮ್ಮೆ ಟ್ರೋಫಿ ಗೆಲ್ಲುತ್ತೇನೆಂದು ಭಾವಿಸಿರಲೇ ಇಲ್ಲ. ಈ ಸಂದರ್ಭದಲ್ಲಿ ನಾನು ಜೆಂಗ್‌ ಕ್ವಿನ್ವೆನ್‌ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಅವರ ಆಟವೂ ಅತ್ಯುತ್ತಮ ಮಟ್ಟದಲ್ಲಿತ್ತು. ಆದರೆ ಫೈನಲ್‌ನಲ್ಲಿ ಸೋಲುವುದನ್ನು ನಿಜಕ್ಕೂ ಸಹಿಸಿಕೊಳ್ಳಲಾಗದು. ಆದರೆ ಜೆಂಗ್‌ ಯುವ ಆಟಗಾರ್ತಿ. ಅವರ ಪಾಲಿಗೆ ಇನ್ನಷ್ಟು ಫೈನಲ್‌ಗ‌ಳು ಎದುರಾಗಲಿ, ಗೆಲುವು ಒಲಿಯಲಿ’ ಎಂದು ಹಾರೈಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next