Advertisement

ಹಿಂದಿ ಮೀಡಿಯಂನ ಸಾಬಾ ಖಮರ್‌

03:45 AM May 26, 2017 | |

ಕಳೆದ ವಾರ ಇರ್ಫಾನ್‌ ಖಾನ್‌ ನಟಿಸಿದ ಹಿಂದಿ ಮೀಡಿಯಂ ಎಂಬ ಚಿತ್ರವೊಂದು ಬಿಡುಗಡೆಯಾಗಿದೆ. ಮಧ್ಯಮ ವರ್ಗದ ಆಂಗ್ಲ ಮಾಧ್ಯಮ ವ್ಯಾಮೋಹವನ್ನು ತಿಳಿಹಾಸ್ಯದ ಮೂಲಕ ನವಿರು ಶೈಲಿಯಲ್ಲಿ ಹೇಳುವ ಇದು ವಿಡಂಬನಾತ್ಮಕ ಚಿತ್ರ. ದೊಡ್ಡ ತಾರೆಯರು ಇಲ್ಲದಿದ್ದರೂ ಈ ಚಿತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇರ್ಫಾನ್‌ ಖಾನ್‌ ನಟಿಸಿದ ಚಿತ್ರ ಗಮನ ಸೆಳೆಯುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ಹಿಂದಿ ಮೀಡಿಯಂ ಇರ್ಫಾನ್‌ ಖಾನ್‌ಗಿಂತಲೂ ಅದರ ನಾಯಕಿಯಿಂದಾಗಿ ಹೆಚ್ಚು ಸುದ್ದಿ ಮಾಡುತ್ತಿದೆ. ನಾಯಕಿಯ ಕುರಿತು ಈಗ ಬಿಸಿಬಿಸಿ ಚರ್ಚೆಗಳಾಗುತ್ತಿವೆ. ಹಾಗೆಂದು ಆಕೆಯ ಅದ್ಭುತ ಅಭಿನಯ ಈ ಚರ್ಚೆಗೆ ವಸ್ತು ಎಂದು ನೀವು ಭಾವಿಸಿದ್ದರೆ ತಪ್ಪು. 

Advertisement

ಅಂದ ಹಾಗೆ ಈ ಚಿತ್ರದ ನಾಯಕಿ ಸಾಬಾ ಖಮರ್‌. ಈ ಹೆಸರನ್ನು ಎಲ್ಲೋ ಕೇಳಿದಂತಾಗುತ್ತಿದೆ ಎಂದೆನಿಸುತ್ತಿದೆಯೇ? ಈಕೆ ಸಲ್ಮಾನ್‌ ಖಾನ್‌ನನ್ನು ಅಸಭ್ಯ ನಟ ಎಂದು ಟೀಕಿಸಿ ಸಲ್ಲೂ ಅಭಿಮಾನಿಗಳ ಉಗ್ರ ಕೋಪಕ್ಕೆ ಗುರಿಯಾಗಿದ್ದ ಪಾಕಿಸ್ತಾನಿ ನಟಿ. ಈಗ ನಿಮಗೆ ಅಂದಾಜು ಆಗಿರಬಹುದು ಸಾಬಾ ಖಮರ್‌ ಕುರಿತು ಏಕೆ ಭಾರೀ ಚರ್ಚೆಯಾಗುತ್ತಿದೆ ಎಂದು. ಉರಿಯಲ್ಲಿ ಭಾರತದ ಯೋಧರ ಬಳಿಕ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ಬಳಿಕ ಪಾಕ್‌ ಕಲಾವಿದರನ್ನು ದೇಶದೊಳಕ್ಕೆ ಕಾಲಿಡಲು ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಿಡುತ್ತಿಲ್ಲ. ಉರಿ ದಾಳಿಯ ಬಳಿಕ ಮುಂಬಯಿಯಲ್ಲಿದ್ದ ಕೆಲ ಪಾಕ್‌ ಕಲಾವಿದರು ಕದ್ದುಮುಚ್ಚಿ ತಮ್ಮ ಹುಟ್ಟೂರಿಗೆ ಓಡಿ ಹೋಗಿದ್ದರು. ಭಾರತಕ್ಕೆ ಕಾಲಿಟ್ಟರೆ ಗಂಡಾಂತರ ಕಾದಿದೆ ಎಂಬ ಭಯ ಪಾಕ್‌ ಕಲಾವಿದರಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಬಾ ಖಮರ್‌ ಅದ್ಹೇಗೆ ಯಾರ ಕಣ್ಣಿಗೂ ಬೀಳದಂತೆ ಒಂದಿಡೀ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದಳು ಎನ್ನುವುದೇ ಚರ್ಚೆಯ ವಸ್ತು. ಹಿಂದಿ ಮೀಡಿಯಂ  ಸಾಬಾ ಖಮರ್‌ ನಟಿಸಿರುವ ಮೊದಲ ಬಾಲಿವುಡ್‌ ಚಿತ್ರ. ಆದರೆ, ಪಾಕಿಸ್ತಾನದಲ್ಲಿ ಆಕೆ ಸಖತ್‌ ಫೇಮಸ್‌ ನಟಿ. ಸಿನೆಮಾ, ಕಿರುತೆರೆ, ನಾಟಕ, ರಿಯಾಲಿಟಿ ಶೋ ಎಂದು ಸಾಬಾ ಕೈಯಾಡಿಸದ ಕ್ಷೇತ್ರವಿಲ್ಲ. 

ಪಾಕಿಸ್ತಾನದ ಇತಿಹಾಸದಲ್ಲಿಯೇ ಅತ್ಯಧಿಕ ಗಳಿಕೆ ಮಾಡಿದ ಎರಡು ಚಿತ್ರಗಳ ನಾಯಕಿ ಅವಳು. ಇಷ್ಟಿದ್ದರೂ ಸಾಬಾ ಪಾಕಿಸ್ತಾನದಲ್ಲಷ್ಟೆ ಜನಪ್ರಿಯ ನಟಿಯಾಗಿದ್ದಳು. ಬಾಲಿವುಡ್‌ನ‌ವರಿಗೆ ಆಕೆ ಪರಿಚಿತಳಾದದ್ದು ವಿವಾದದಿಂದಾಗಿ. ಪಾಕಿಸ್ತಾನದ ಟಿವಿಯಲ್ಲಿ ಗುಡ್‌ ಮಾರ್ನಿಂಗ್‌ ಜಿಂದಗಿ ಎಂಬ ಭಾರತದ ಪ್ರಖ್ಯಾತ ವ್ಯಕ್ತಿಗಳನ್ನು ಅಣಕಿಸುವ ಕಾರ್ಯಕ್ರಮವೊಂದು ಪ್ರಸಾರವಾಗುತ್ತದೆ. ಬಾಲಿವುಡ್‌ ನಟರೇ ಈ ಕಾರ್ಯಕ್ರಮದ ಹಾಸ್ಯದ ವಸ್ತುಗಳು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಬಾ, ಸಲ್ಲೂ ಮಿಯಾನನ್ನು ಸಂಸ್ಕೃತಿಯಿಲ್ಲದವ ಎಂಬರ್ಥದಲ್ಲಿ ಗೇಲಿ ಮಾಡಿದ್ದು ಭಾರೀ ವಿವಾದಕ್ಕೀಡಾಗಿತ್ತು. ಅನಂತರ ಬಾಲಿವುಡ್‌ಗೆ ಸಾಬಾ ಖಮರ್‌ ಪರಿಚಯವಾಗಿತ್ತು. ಇದೀಗ ಆಕೆ ಸದ್ದಿಲ್ಲದೆ ಒಂದು ಚಿತ್ರದಲ್ಲಿ ನಟಿಸಿ ಹೋಗಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next