Advertisement

ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರನನ್ನು ಇದುವರೆಗೂ ಏಕೆ ಬಂಧಿಸಿಲ್ಲ? ಸಾ.ರಾ.ಮಹೇಶ್ ಪ್ರಶ್ನೆ

02:47 PM Aug 06, 2024 | Team Udayavani |

ಮೈಸೂರು: ವರ್ಗಾವಣೆ ಆದ ಏಳು ದಿನಗಳಲ್ಲೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗು ಅವರ ಪುತ್ರನ ಕಿರುಕುಳದಿಂದ ಬೇಸತ್ತು ಪೊಲೀಸ್ ಅಧಿಕಾರಿ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸರಕಾರ ಇದುವರೆಗೂ ಚೆನ್ನಾರೆಡ್ಡಿ ಹಾಗು ಪುತ್ರನನ್ನು ಏಕೆ ಬಂಧಿಸಿಲ್ಲ ಎಂದು ಮಾಜಿ ಸಚಿವ ಹಾಗು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

Advertisement

ಮೈಸೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಅವರು ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು ಇದುವರೆಗೂ ಏಕೆ ಬಂಧಿಸಿಲ್ಲ ಎಂದು ಕಿಡಿಕಾರಿದ್ದಾರೆ. ಗೃಹ ಸಚಿವರೊಬ್ಬರು ಪ್ರಾಮಾಣಿಕರಾಗಿದ್ದರೇ ಮಾತ್ರ ಸಾಲದು. ಅವರ ಸುತ್ತಲೂ ಇರುವವರು ಪ್ರಾಮಾಣಿಕರಾಗಿರಬೇಕು. ಈ ಹಿಂದೆ ಯಾವುದೇ ಸರ್ಕಾರ ಪೊಲೀಸ್ ಇಲಾಖೆಯನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಇನ್ನು ದೇವೇಗೌಡರ ಕುಟುಂಬದ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ… ಜಮೀರಣ್ಣ ಸಚಿವರಾಗಿ ಆಯ್ತಲ್ಲ, ಇನ್ಯಾರನ್ನು ಓಲೈಸುತ್ತಿದ್ದೀರಿ.
ನೀವು ಬಸ್ ಓಡಿಸಿಕೊಂಡು ಹೋಗುವಾಗ ದೇವೇಗೌಡರ ಕುಟುಂಬದವರು ಯಾರು ಅಂತ ಗೊತ್ತಿರಲಿಲ್ವ? ಹಳೆಯ ಸ್ನೇಹಿತರನ್ನು ನೆನಪಿಸಿಕೊಳ್ಳಿ. ನಾನು 15-18 ವರ್ಷ ಬಿಜೆಪಿಯಲ್ಲಿದ್ದೆ. ಈಗ 20 ವರ್ಷದಿಂದ ಜೆಡಿಎಸ್ ನಲ್ಲಿದ್ದೀನಿ. ಜೆಡಿಎಸ್‌ನಲ್ಲಿ ಇದ್ದೀನಿ ಅಂತ ಬಿಜೆಪಿ ಅವರಿಗೆ ಬಾಯಿಗೆ ಬಂದಂತೆ ಮಾತನಾಡೋಕೆ ಆಗುತ್ತ ? ಹಾಗೆ ಮಾತನಾಡಿದೋಕೆ ಆತ್ಮಸಾಕ್ಷಿ ಒಪ್ಪಬೇಕಲ್ಲ ಎಂದು ತಿರುಗೇಟು ನೀಡಿದರು.

ಹೆಚ್ ಡಿ ಕೆ ಮತ್ತು ಡಿಕೆಶಿ ನಡುವೆ ಮಾತಿನ‌ ಸಮರ ಕುರಿತು ಪ್ರತಿಕ್ರಿಯಿಸಿದ ಅವರು ಡಿ.ಕೆ. ಶಿವಕುಮಾರ್ ನೀವು ಸಿಎಂ ಆಗಿ ಯಾರು ಬೇಡ ಅಂದ್ರು. ಹೈಕಮಾಂಡ್ ನಲ್ಲಿ ಏನು ತೀರ್ಮಾನ ಆಗಿದೆಯೋ ಗೊತ್ತಿಲ್ಲ. ಏನೋ ನಮ್ಮವ್ರು ಒಬ್ಬರು ಮುಖ್ಯಮಂತ್ರಿ ಆಗಲಿ ಎಂದು ಜನ ನಿಮಗೆ 136 ಸೀಟು ಕೊಟ್ರು, ಮುಂದೆ ನೀವೂ ಸಿಎಂ ಆದರೆ ಸಂತೋಷ. ಸಿಎಂ ಆಗಬೇಡಿ ಅನ್ನೋಕೆ ನಾವ್ಯಾರು.? ಅದನ್ನು ಬಿಟ್ಟು ದೇವೇಗೌಡರ ಕುಟುಂಬದ ಮೇಲೆ ಯಾಕೆ ದ್ವೇಷ ಕಾರುತ್ತೀರಾ.? ಪರಸ್ಪರ ಕಿತ್ತಾಡೋದನ್ನು ಈ ಕೂಡಲೇ ಬಿಡಿ.

Advertisement

ನಾನು ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೇನೆ. ವೈಯುಕ್ತಿಕ ವಿಚಾರ ಚರ್ಚೆ ಬೇಡ, ನಾವು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಿದೆ ಅಷ್ಟೇ. ಅದನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿ – ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ನೀವು ಬಳ್ಳಾರಿ ಪಾದಯಾತ್ರೆ ಮಾಡಿದಾಗ ನಾವು ಚಕಾರ ಎತ್ತಿದ್ದೆವಾ ? ನೀವು ಆಡಳಿತ ಪಕ್ಷದಲ್ಲಿದ್ದೀರಾ, ನಿಮಗೆ ಅಧಿಕಾರ ಇದೆ, ಆಡಳಿತ ಮಾಡಿ. ಕಾಂಗ್ರೆಸ್ ನವರು ಸಹ ವಿರೋಧ ಪಕ್ಷದ ರೀತಿ ವರ್ತಿಸುತ್ತಿದ್ದಾರೆ. ಬಿಜೆಪಿ 20 ತಪ್ಪು‌ ಮಾಡಿದೆ ಅಂತೀರಾ. ಇದು ಕಾಂಗ್ರೆಸ್ ಸರ್ಕಾರದ ಬ್ಲ್ಯಾಕ್‌ಮೇಲ್. ನೀವು ಅದು ಎತ್ತಿದರೆ ಇದನ್ನು ನಾವು ಎತ್ತುತ್ತೇವೆ ಅಂತಾ. ನೀವೆ ಅಧಿಕಾರದಲ್ಲಿದ್ದೀರಾ ತನಿಖೆ ಮಾಡಿ, ಇಷ್ಟು ದಿನ ಏನು ಮಾಡುತ್ತಿದ್ದಿರಿ ? ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ ಟಿ ಚೆಲುವೇಗೌಡ, ಮಾಜಿ ಮೇಯರ್ ಗಳಾದ ಆರ್ ಲಿಂಗಪ್ಪ, ಎಂ ಜೆ ರವಿಕುಮಾರ್ ಸೇರಿದಂತೆ ಕೆಲ ಮಾಜಿ ನಗರಪಾಲಿಕೆ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: Mangaluru: ವಾರದ ಹಿಂದೆ ನಾಪತ್ತೆಯಾಗಿದ್ದ ಯುವತಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next