Advertisement

ಸಿಲಿಕಾನ್‌ ಸಿಟಿ ರಸ್ತೆಗೆ ಎಸ್‌340

12:45 PM May 07, 2018 | |

ಬ್ಯಾಟರಿಯ ಬಲದೊಂದಿಗೆ ಓಡಲಿರುವುದು ಎಸ್‌. 340 ಸ್ಕೂಟರಿನ ಸ್ಪೆಶಾಲಿಟಿ. ಕೇವಲ 50 ನಿಮಿಷಗಳಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಜ್‌ ಆಗಲಿರುವುದು ಮತ್ತೂಂದು ಹೆಗ್ಗಳಿಕೆ. 

Advertisement

ಕರ್ನಾಟಕವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಇಂಧನ ಉಳಿತಾಯ ಅಭಿಯಾನದ ಮುಂದುವರಿದ ಭಾಗವಾಗಿ ಎಲೆಕ್ಟ್ರಿಕ್‌ ವಾಹನಗಳು ರಸ್ತೆಗಿಳಿಯಲು ಸರದಿಯಲ್ಲಿವೆ. ಈಗಾಗಲೇ ಪ್ರತಿಷ್ಠಿತ ಕಂಪನಿಗಳ ಕಾರುಗಳು, ತ್ರಿಚಕ್ರ ವಾಹನಗಳು ರಸ್ತೆಗಿಳಿದು ಮಾರುಕಟ್ಟೆ ರೂಪಿಸಿಕೊಳ್ಳುತ್ತಿವೆ. ನವದೆಹಲಿಯಲ್ಲಿ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಬಹುತೇಕ ಕಂಪನಿಗಳು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಗೆ ಒತ್ತು ನೀಡುವ ಸಂದೇಶವನ್ನೂ ರವಾನಿಸಿದ್ದವು.

ಅದೇ ಪ್ರಕಾರ ಈಗಾಗಲೇ ಒಂದಿಷ್ಟು ಕಾರುಗಳು, ತ್ರಿಚಕ್ರ ವಾಹನಗಳು ರಸ್ತೆಗಿಳಿದಿವೆ. ಇದೀಗ ದ್ವಿಚಕ್ರ ವಾಹನಗಳೂ ಬುಕ್ಕಿಂಗ್‌ ಆರಂಭಿಸಿವೆ. ಬೆಂಗಳೂರು ಮೂಲದ ಸ್ಕೂಟರ್‌ ತಯಾರಿಕಾ ಕಂಪೆನಿಯಾದ ಅದರ್‌ ಎನರ್ಜಿ ಕೂಡ ಈಗಾಗಲೇ ಬುಕ್ಕಿಂಗ್‌ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ತಿಂಗಳಾಂತ್ಯಕ್ಕೆಲ್ಲ ಬುಕ್ಕಿಂಗ್‌ ಆರಂಭಿಸುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋದಲ್ಲಿ ಗಮನ ಸೆಳೆದಿದ್ದ ಸ್ಟಾರ್ಟ್‌ಅಪ್‌ ಕಂಪನಿಯ ಎಸ್‌340 ಸ್ಕೂಟರ್‌ ಶೀಘ್ರದಲ್ಲಿಯೇ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಲಿವೆ. ಎರಡು ವರ್ಷಗಳ ಹಿಂದೆಯೇ ಹೊಸ ಅನ್ವೆಷಣೆಗೆ ಹೆಜ್ಜೆ ಇರಿಸಿದ್ದ ಅದರ್‌ ಎನರ್ಜಿ, ಇದೀಗ ಹೊಸ ಟ್ರೆಂಡ್‌ಗೆ ನಾಂದಿ ಹಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಕಂಪನಿ ಇನ್ನೂ ಸ್ಕೂಟರ್‌ನ ಬೆಲೆ ಎಷ್ಟೆಂದು ಪ್ರಕಟಿಸಿಲ್ಲ.

ಬೆಂಗಳೂರಿನಲ್ಲಿ ಮಾತ್ರ: ಹೊಸ ಸ್ಕೂಟರ್‌ ಅನ್ನು ಕಳೆದ ವರ್ಷವೇ ಬಿಡುಗಡೆ ಮಾಡುವುದಾಗಿ ಕಂಪನಿ ಪ್ರಕಟಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ಮುಂದೂಡಿದ್ದ ಕಂಪನಿ ಇದೀಗ ಬಿಡುಗಡೆ ಮಾಡುವುದಾಗಿ ಹೇಳಿದೆ. ಗಮನಿಸಬಹುದಾದ ಸಂಗತಿ ಏನೆಂದರೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಈ ಸ್ಕೂಟರ್‌ ಲಭ್ಯ.

Advertisement

ಟಚ್‌ಸ್ಕ್ರೀನ್‌ ಇರುವ ಸ್ಮಾರ್ಟ್‌ ಸ್ಕೂಟರ್‌: ಸ್ಮಾರ್ಟ್‌ ಸ್ಕೂಟರ್‌ ಎಸ್‌340ಗೆ ಸ್ಮಾರ್ಟ್‌ ಆಗಿರುವ 7 ಇಂಚಿನ ಟಚ್‌ಸ್ಕ್ರೀನ್‌ ಅಳವಡಿಸಲಾಗಿದೆ. ಉಳಿದ ಇಂಧನ ಸ್ಕೂಟರ್‌ಗಳಿಗಿಂಥ ಗುಣದಲ್ಲಿ ವಿಭಿನ್ನವಾಗಿರುವ ಎಸ್‌340 ಸ್ಕೂಟರ್‌, ಬ್ಯಾಟರಿ ಚಾಲಿತವಾಗಿರಲಿದೆ. ಒಂದು ವಿಶೇಷ ಏನೆಂದರೆ ಈ ಟಚ್‌ಸ್ಕ್ರೀನ್‌ ಆ್ಯಪ್‌ ಆಧಾರಿತವಾಗಿದ್ದು, ಸ್ಮಾರ್ಟ್‌ ಮೊಬೈಲ್‌ನಂತೆ ನೇವಿಗೇಷನ್‌ ವ್ಯವಸ್ಥೆ ಹೊಂದಿರಲಿದೆ. ಇದಲ್ಲದೆ, ಪಾರ್ಕಿಂಗ್‌ ಅಸಿಸ್ಟ್‌, ಚಾರ್ಜಿಂಗ್‌ ಪಾಯಿಂಟ್‌ ಟ್ರ್ಯಾಕರ್‌, ಎಲ್‌ಇಡಿ ಲೈಟಿಂಗ್‌, ಸಿಬಿಎಸ್‌ ಹಾಗೂ ಸ್ಟೊರೇಜ್‌ ಲೈಟ್‌ಗಳನ್ನು ಹೊಂದಿದೆ.

ಮೆಚ್ಚುಗೆಯ ಸಾಮರ್ಥ್ಯ: ಉತ್ತಮ ಗುಣಮಟ್ಟ ಪಡೆಯಲಿಕ್ಕೆಂದೇ ನಿರಂತರ ಸಂಶೋಧನೆ ಮೂಲಕ ತಯಾರಾದ ಸ್ಕೂಟರ್‌ ಇದಾಗಿದೆ. ಕಂಪನಿಯ ಮಾಹಿತಿ ಪ್ರಕಾರ, ಲೈವೇಟ್‌ ಲಿಥಿಯಮ್‌ ಐಆನ್‌ ಬ್ಯಾಟರಿ ಅಳವಡಿಸಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಕನಿಷ್ಠ 60ರಿಂದ 70 ಕಿಲೋಮೀಟರ್‌ ಓಡಿಸಲು ಸಾಧ್ಯ.

ಈ ಸ್ಕೂಟರ್‌ನ ಗರಿಷ್ಠ ವೇಗದ ಮಿತಿ ಗಂಟೆಗೆ 72 ಕಿಲೋಮೀಟರ್‌. ಇನ್ನೊಂದು ವಿಶೇಷ ಎಂದರೆ 50 ನಿಮಿಷಗಳಲ್ಲಿ ಶೇಕಡಾ 80ರಷ್ಟು ಬ್ಯಾಟರಿ ಚಾರ್ಜ್‌ ಆಗಲಿದೆ. ಒಮ್ಮೆ ಅಳವಡಿಸಲಾದ ಬ್ಯಾಟರಿಯಿಂದ ಹೆಚ್ಚು ಕಡಿಮೆ 50 ಸಾವಿರ ಕಿಲೋಮೀಟರ್‌ ಓಡಿಸಲು ಸಾಧ್ಯ ಎನ್ನುವುದು ಕಂಪನಿಯ ಅಂಬೋಣ.

* ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next