Advertisement

ಎಸ್‌. ಇದು ದೇವು ಮೆಸ್‌

11:42 AM Nov 13, 2017 | |

ದೂರದಿಂದ ನೋಡಿದರೆ ಇದು ಹೋಟೆಲ್ಲಾ ? ಅನ್ನೋ ಅನುಮಾನ ಬರುತ್ತದೆ. ಏಕೆಂದರೆ ಫ‌ಳ, ಫ‌ಳ ಹೊಳೆಯೋ ಕಟ್ಟಡವಿಲ್ಲ.  ತೆಂಗಿನ ಗರಿಯ ಚಿಕ್ಕ ಗುಡಿಸಲು. ಆದರೆ, ಹೊರಗೆ ತಿಂಡಿಗಾಗಿ ಕಾದು ನಿಲ್ಲೋದೆಲ್ಲ ಶ್ರೀಮಂತರ ಕಾರು, ಮಧ್ಯಮ ವರ್ಗದವರ ಬೈಕುಗಳು. 

Advertisement

ಎಸ್‌. ಇದು ದೇವು ಮೆಸ್‌. ಇದು ಇರೋದು ಚಾಮರಾಜನಗರದಿಂದಾಚೆ ರಾಮಸಮುದ್ರ ಎಂಬ ನಗರಸಭೆಗೆ ಸೇರಿದ ಹಳ್ಳಿಯಲ್ಲಿ. ಇದು ಸೆಟ್‌ ದೋಸೆಗೆ ಪ್ರಸಿದ್ಧ.  ಅಂಗೈ ಅಗಲದ, ತೆಳುವಾದ ಸೆಟ್‌ ದೋಸೆ, ಚಟ್ನಿ, ಸಾಗು, ನಂದಿನಿ ಬೆಣ್ಣೆ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಗ್ಯಾರಂಟಿ!

ದಶಕಗಳ ಹಿಂದೆ ಚಾಮರಾಜನಗರದ ಹೃದಯ ಭಾಗದಲ್ಲಿದ್ದ ಪಚ್ಚಪ್ಪ ಹೋಟೆಲ್‌ನಲ್ಲಿ ಈ ರೀತಿಯ ಸೆಟ್‌ ದೋಸೆ ಪ್ರಸಿದ್ಧಿಯಾಗಿತ್ತು. ಈಗ ಪಚ್ಚಪ್ಪ ಹೋಟೆಲ್‌ ಇಲ್ಲ. ಆದ್ರೆ ಅದೇ ರುಚಿಯನ್ನ ಬಹಳ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ ದೇವು ಮೆಸ್‌ನ ಓನರ್‌ ದೇವಣ್ಣ.  

ಸೆಟ್‌ ದೋಸೆ ಅಲ್ಲದೆ ಬೆಣ್ಣೆ ರೋಸ್ಟ್‌, ಚಪಾತಿ ಕೂಡ ಬಹಳ ರುಚಿಕರ. ಹೊಟ್ಟೆ ಬಿರಿಯುವ ಹಾಗೆ ತಿಂದರೂ ಬಿಲ್‌ ಮಾತ್ರ ಬಹಳ ಹಗುರ. ದೊಡ್ಡ ಹೋಟೆಲ್‌ಗ‌ಳಲ್ಲಿ ಬೆಣ್ಣೆ ಅಂದ್ರೆ ಗ್ರಾಹಕರು ಭಯ ಪಡುವಂತಾಗಿದೆ. ಆದ್ರೆ ಇಲ್ಲಿ ಕಣ್ಣ ಮುಂದೆಯೇ ನಂದಿನಿ ಬೆಣ್ಣೆಯನ್ನ ಪ್ಯಾಕೆಟ್‌ ಒಡೆದು ಹಾಕಿಕೊಡ್ತಾರೆ. 

ಮೂಲತಃ ರಾಮಸಮುದ್ರವರೇ ಆದ ದೇವಣ್ಣ ಈ ಗುಡಿಸಲು ಹೋಟೆಲ್‌  ಆರಂಭಿಸುವ ಮುಂಚೆ ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಇನ್ನೊಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ರಾಮಸಮುದ್ರದಲ್ಲಿ ಹೋಟೆಲ್‌ ಆರಂಭಿಸಿದರು. ಈಗ ನಲವತ್ತು ವರ್ಷ ಆಗಿದೆ. ಆಗ  10 ಪೈಸೆಗೆ ಒಂದು ದೋಸೆ, 30 ಪೈಸೆಗೆ ಒಂದು ಚಪಾತಿ ಕೊಡುತ್ತಿದ್ದ ಕಾಲ.  

Advertisement

ಈಗ ಒಂದು ಸೆಟ್‌ ದೋಸೆಗೆ 20 ರೂ. ಬೆಣ್ಣೆ ಮಸಾಲೆಗೆ 30 ರೂ. ಬೆಣ್ಣೆ ರಹಿತ ಮಸಾಲೆಗೆ 20 ರೂ. ಚಪಾತಿಗೆ 10 ರೂ. ದೇವು ಮೆಸ್‌ ದೋಸೆಯ ರುಚಿಗೆ ಹೋಲಿಸಿದರೆ ಈ ದರ ಕಡಿಮೆಯೇ. ದೇವಣ್ಣನವರ ಹೋಟೆಲಿನ ಸಕ್ಸಸ್‌ಗೆ ಅವರ ಪುತ್ರ ಮಂಜುನಾಥ್‌. ಹಿಂದೆ ದೋಸೆ ಹಾಕುತ್ತಿದ್ದ ರಾಜಪ್ಪ, ಈಗ ದೋಸೆ ಹಾಕುತ್ತಿರುವ ಪುಟ್ಟಮಾದಪ್ಪ ಕಾಣಿಕೆಯೂ ಅಪಾರ.

ತಮ್ಮ ಹೋಟೆಲಿನಲ್ಲಿ ಸೌದೆ ಒಲೆಯ ಬಳಸುವುದರಿಂದ ದೋಸೆಯ ರುಚಿ ಹೆಚ್ಚಾಗುತ್ತದೆ ಎನ್ನುತ್ತಾರೆ ದೇವಣ್ಣ. ಚಾಮರಾಜನಗರದಲ್ಲಿ ಅನೇಕ ಹೋಟೆಲ್‌ಗ‌ಳು ಸಿಟಿ ಮಧ್ಯೆ ಇದ್ರೂ, ಅನೇಕರು ರಾಮಸಮುದ್ರದ ಈ ಗುಡಿಸಲು ಹೋಟೆಲಿನ ಕ್ವಾಲಿಟಿ, ಟೇಸ್ಟ್‌ಗೆ ಮನಸೋತಿದ್ದಾರೆ. ಅನೇಕ ರಾಜಕಾರಣಿಗಳು, ಉದ್ಯಮಿಗಳು ಇದರ ರುಚಿಗೆ ಮನಸೋತು ಹುಡುಕಿಕೊಂಡು ಬರುತ್ತಾರೆ.

ಕೆಲವರು ನಿತ್ಯದ ಗ್ರಾಹಕರಾಗಿ ಬಿಟ್ಟಿದ್ದಾರೆ. ಒಮ್ಮೆ ತಿಂದವರು, ಮನೆಯಲ್ಲಿ ತಿಂಡಿ ಮಾಡಿದ್ರೂ, ವಾರಕ್ಕೊಮ್ಮೆ ಏನಾದ್ರೂ ನೆಪ ಮಾಡಿಕೊಂಡು ದೇವು ಮೆಸ್‌ಗೆ ಬರದೇ ಇರುವುದಿಲ್ಲ! ಚಾಮರಾಜನಗರಕ್ಕೆ ಬಂದ್ರೆ ಬಿ.ಆರ್‌.ಲ್ಸ್‌ ರಸ್ತೆಯಲ್ಲಿ ರಾಮಸಮುದ್ರಕ್ಕೆ ಹೋಗಿ ಬಸ್‌ಸ್ಟಾಪ್‌ ಪಕ್ಕದಲ್ಲೇ ಇರುವ ದೇವು ಮೆಸ್‌ಗೆ ಭೇಟಿ ನೀಡಿ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next