ಮೈಸೂರು: ರಾಜ್ಯ ಸರ್ಕಾರದಿಂದ ಕೋವಿಡ್-19 ಕಿಟ್ ಖರೀದಿ ವಿಷಯದಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ವಿಧಾನಸೌಧಕ್ಕೆ ಬಂದರೆ ಅಗತ್ಯ ದಾಖಲೆ ನೀಡುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ರೆಸಾರ್ಟ್‌ನಲ್ಲಿ ಕುಳಿತು ಆರೋಪಗಳನ್ನು ಮಾಡಬೇಡಿ. ನೀವು ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ ಎಂದು ಮಾಜಿ ಸಿಎಂಗೆ ತಿರುಗೇಟು ನೀಡಿದರು.
ಕೋವಿಡ್-19 ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು ಎಂದ ಅವರು, ನಾವು ವೆಚ್ಚ ಮಾಡಿರುವುದೇ 550 ಕೋಟಿ, ಹೀಗಿರುವಾಗ 2 ಸಾವಿರ ಕೋಟಿ ಅವ್ಯವಹಾರ ಎನ್ನುತ್ತಿದ್ದಾರೆ ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಎಂಬ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕೋವಿಡ್-19 ಕಿಟ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ ಎಂಬ ಆರೋಪ ಸುಳ್ಳು. ನಿನ್ನೆ ನಾನು ಅಧಿಕಾರಿಗಳ ಸಭೆ ನಡೆಸಿದ್ದು, ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಲ್ಲವೂ ಚರ್ಚೆಯಾಗಿದೆ. ನನ್ನ ವ್ಯಾಪ್ತಿಗೆ ಬರುವ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೆಲವು ಸಚಿವರು ನಿನ್ನೆಯೇ ಮಾಡಿದ್ದು, ಮತ್ತೆ ಕೆಲವರು ಇಂದು ಸಭೆ ನಡೆಸಲಿದ್ದಾರೆ. ನಾವೆಲ್ಲರೂ ನಮಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂದು ಹೇಳಿದರು.