Advertisement

ಆರ್ಥಿಕವಾಗಿ ಚೇತರಿಕೆ ಸಿಗುವಂತಹ ಜನಪರ, ರೈತಪರ ಬಜೆಟ್ : ಎಸ್.ಟಿ.ಸೋಮಶೇಖರ್

06:52 PM Mar 08, 2021 | Team Udayavani |

ಬೆಂಗಳೂರು : ಇದು ಜನಪರ ಹಾಗೂ ರೈತಪರ ಬಜೆಟ್ ಆಗಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಸಂಕಷ್ಟ ಕಾಲದಲ್ಲೂ ಆರ್ಥಿಕವಾಗಿ ಚೇತರಿಕೆ ಸಿಗುವಂತಹ ಬಜೆಟ್ ಮಂಡಿಸಿದ್ದಾರೆ. ಈ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ ಎಂದು  ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಎಸ್.ಟಿ.ಸೋಮಶೇಖರ್ ಶ್ಲಾಘಿಸಿದ್ದಾರೆ.

Advertisement

ಸಹಕಾರಿ ವಲಯದ ಮೂಲಕವೂ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ರೈತರಿಗೆ ಹಾಗೂ ನಾಗರಿಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS) ಟಿಎಸಿಎಸಿಎಂಎಸ್ ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ.25 ಸಹಾಯಧನ ವಿತರಣೆಗೆ 25 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಪ್ರಯೋಜನಗಳಿವೆ. ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಹಾಗೂ ಟಿಎಸಿಎಸಿಎಂಎಸ್ ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ. 11ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರ್ಕಾರದಿಂದ ಶೇ. 4ರ ಬಡ್ಡಿ ಸಹಾಯಧನ ನೀಡುವ ಸಂಬಂಧ 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ಇದೂ ಸಹ ರೈತರಿಗೆ ವರದಾನವಾಗಿದೆ ಎಂದರು.

198 ಕೋಟಿ ರೂಪಾಯಿ ವೆಚ್ಚದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಮಾಡುವುದಾಗಿ ಘೋಷಣೆ ಮಾಡಲಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ರೈತರಿಗೆ ಇನ್ನಷ್ಟು ತ್ವರಿತವಾಗಿ ಸಾಲ ನೀಡಿಕೆ ಸುಲಭವಾಗುವುದಲ್ಲದೆ, ಸರ್ಕಾರದ ಪ್ರಯೋಜನಗಳನ್ನು ಬಹುಬೇಗ ತಲುಪಿಸಲು ಸಹಾಯಕವಾಗಲಿದೆ. ಅಲ್ಲದೆ, ಪಾರದರ್ಶಕ ವ್ಯವಸ್ಥೆಗೂ ಇದು ಮುನ್ನುಡಿಯಾಗಲಿದೆ ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ (ಡಿಸಿಸಿ) ಗರಿಷ್ಠ 10 ಲಕ್ಷ ರೂಪಾಯಿವರೆಗೆ ಶೇಕಡಾ 25 ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ ಕೈಗೊಂಡಿರುವುದು ಸಹ ಸ್ವಾಗತಾರ್ಹ ಕ್ರಮವಾಗಿದೆ. ನಮ್ಮ ಮನವಿಗೆ ಸ್ಪಂದಿಸಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

Advertisement

ಮೈಸೂರು ಜನತೆಗೂ ಸಿಹಿ ಸುದ್ದಿ :  ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂಪಾಯಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ಇದಲ್ಲದೆ ಮೈಸೂರು ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರವನ್ನು ಪ್ರಾರಂಭ ಮಾಡುತ್ತಿದೆ. ಅಲ್ಲದೆ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಪ್ರಾರಂಭ ಮಾಡುವ ಘೋಷಣ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ.  ಮೈಸೂರು ಭಾಗದ ಬಹುವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಇದಕ್ಕೋಸ್ಕರ ಮೈಸೂರು ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಯನ್ನು ಅರ್ಪಿಸುತ್ತೇನೆ.ಬಹುದಿನಗಳ ಬೇಡಿಕೆಯಾಗಿದ್ದ ನೀರು ಸರಬರಾಜು ಹಾಗೂ ಒಳಚರಂಡಿ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಹೊರವಲಯ ಪ್ರದೇಶವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯಾಪ್ತಿಗೆ ಸೇರಿಸಿರುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮೂಲಕಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕಾವೇರಿ ನೀರಾವರಿ ನಿಗಮದ ವತಿಯಿಂದ ಮೈಸೂರು ಜಿಲ್ಲೆಯ ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ ಕ್ರಮವಾಗಿದೆ.

ಪರಿಶಿಷ್ಠ ಜಾತಿ, ಪಂಗಡಗಳಿಗೂ ಬಂಪರ್ : ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ. 4ರ ಬಡ್ಡಿ ಸಹಾಯಧನ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದ್ದು, ಮಳಿಗೆ/ಡೀಲರ್ಶಿಪ್, ಪ್ರಾಂಚೈಸಿ ಮತ್ತು ಹೋಟೆಲ್ ಉದ್ಯಮ ಸ್ಥಾಪನೆಗೆ ಗರಿಷ್ಠ 1 ಕೋಟಿ ರೂಪಾಯಿ ವರೆಗೂ ಸಾಲ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವಾ ವಲಯಗಳನ್ನಾಗಿ ವಿಂಗಡಿಸಿ ಎಲ್ಲ ವರ್ಗಗಳಿಗೂ ಚೇತರಿಕೆ ನೀಡುವ ಪ್ರಯತ್ನವನ್ನು ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್ ನಲ್ಲಿ ಮಾಡಿದ್ದು, ನಾನಿದನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತೇನೆ.

ಅಭಿವೃದ್ಧಿಗೆ ಸಹಕರಿಸಿ : ಪ್ರಸಕ್ತ ಸಾಲಿನ ಬಜೆಟ್ ಅನ್ನು ವಿರೋಧಿಸಿರುವ ಪ್ರತಿಪಕ್ಷದವರಿಗೆ ನಾನು ಮನವಿ ಮಾಡುವುದೇನೆಂದರೆ, ಕೊರೋನಾ ಸಂಕಷ್ಟದ ಕಾಲದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಜನಪರ ಬಜೆಟ್ ಅನ್ನು ಕೊಟ್ಟಿದ್ದು, ಸರ್ವರಿಗೂ ಸಮಪಾಲು-ಸಮಬಾಳು ಎನ್ನುವಂತಹ ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸದೇ, ಜನತೆಗೆ ಅನುಕೂಲ ಮಾಡಿಕೊಡಲು ಸಹಕರಿಸಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next