Advertisement

ಪರ್ಸೆಂಟೆಜ್‌ ಭಾಗ್ಯವೆಂಬ ಬೆಣ್ಣೆ ತಿಂದುದಲಿತರ ಮುಖಕ್ಕೆ ಒರೆಸಿದ ಕೋತಿ ಕಥೆ ನಿಮ್ಮದು: CT ರವಿ

01:56 PM Nov 06, 2021 | Team Udayavani |

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದಾಳಿ ಮುಂದುವರಿಸಿದ್ದಾರೆ. ದಲಿತ ವಿಚಾರವಾಗಿ ಸಿ.ಟಿ.ರವಿ ಸರಣಿ ಟ್ವೀಟ್ ಮಾಡಿದ್ದು, ಪರ್ಸೆಂಟೇಜ್‌ ʼಭಾಗ್ಯʼ ಎಂಬ ಬೆಣ್ಣೆ ತಿಂದು ದಲಿತರ ಮುಖಕ್ಕೆ ಒರೆಸಿದ ಕೋತಿಯ ಕಥೆ ನಿಮ್ಮದು ಎಂದು ಟೀಕಿಸಿದ್ದಾರೆ.

Advertisement

ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಸೇರುತ್ತಿದ್ದಾರೆʼ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನರ ಹೇಳಿಕೆ ಅವರಿಗೆ ದಲಿತ ನಾಯಕರ ಬಗ್ಗೆ ಇಷ್ಟೊಂದು ಅಸಮಾಧಾನವಿದೆ ಎಂಬುದನ್ನು ತಿಳಿಸುತ್ತಿದೆ. ಸಿದ್ದರಾಮಯ್ಯವರೇ ನಿಮ್ಮ ಸಮಕಾಲಿನ ದಲಿತ ನಾಯಕರುಗಳ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುತ್ತೀರಿ ಎಂದು ಭಾವಿಸಿರಲಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.

ನಿಮ್ಮನ್ನು ರಾಜಕೀಯವಾಗಿ ಬೆಳಸಿದ ಪಕ್ಷವನ್ನೇ ʼಹತ್ತಿದ ಏಣಿʼಯಂತೆ ಒದ್ದು ಹೊರಬಂದು ಹೀನಾಮಾನವಾಗಿ ಆ ಪಕ್ಷದ ನಾಯಕರನ್ನು ಟೀಕಿಸಿದಿರಿ. ನೀವು ಆ ಸಿದ್ದಾಂತ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದು, ದಲಿತ ನಾಯಕರನ್ನು ಬಳಸಿಕೊಂಡು ಬಿಸಾಡಿದ್ದು ಯಾಕಾಗಿ ಸಿದ್ದರಾಮಯ್ಯವರೇ? ನಾವೂ ಆರೋಪಿಸಬಹುದು ಭ್ರಷ್ಟಾಚಾರ ನಡೆಸಲು, ಹೊಟ್ಟೆಪಾಡಿಗಾಗಿ ಎಂದು! ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಇಂಧನ ಬೆಲೆ ಮೇಲಿನ ಸುಂಕ ಕಡಿತಗೊಂಡಿಲ್ಲ:ಬಿಜೆಪಿ ತಿರುಗೇಟು

ನಮ್ಮ ಪಕ್ಷದ ದಲಿತ ನಾಯಕರ ಬಗ್ಗೆ ಮಾತನಾಡುವ ಮೊದಲು, ನೀವು ಸಿಎಂ ಆಗಿದ್ದಾಗ ಹೆಚ್‌.ಸಿ. ಮಹಾದೇವಪ್ಪ ಅವರನ್ನು ನೀವು ಎಟಿಎಂ ಕಾರ್ಡ್‌ ಮಾಡಿಕೊಂಡಿದ್ದೀರಿ, ದಲಿತ ಸಚಿವರೊಬ್ಬರ ಮನೆಯಲ್ಲಿ ʼವಿಜಯ ಖಾತೆ’ ತೆರೆದಿದ್ದಿರಿ ಎಂದು ವಿಧಾನಸೌಧದ ಕಂಭಗಳೂ ಮಾತನಾಡುತ್ತಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು ನೆನಪಿದೆಯಾ ಸಿದ್ದರಾಮಯ್ಯನವರೇ? ಸಮಾಜ ಕಲ್ಯಾಣ ಇಲಾಖೆಯ ವ್ಯವಹಾರಗಳು ಅಂತಃಪುರದಲ್ಲಿ ನಡೆಯುತ್ತಿತ್ತು ಎಂಬುದು ಇದು ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು ನೆನಪಿಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ರಾಜಕೀಯ ಹಿತಾಸಕ್ತಿಗೆ, ಆಕಾಂಕ್ಷೆಗಳಿಗೆ ನೀವು ಹೇಗೆ ದಲಿತ ನಾಯಕರನ್ನು ಬಳಿಸಿಕೊಂಡಿರಿ ಎಂದು ರಾಜ್ಯದ ದಲಿತ ಸಮುದಾಯಕ್ಕೂ , ಕರ್ನಾಟಕದ ಜನತೆಗೂ ಗೊತ್ತಿದೆ ಎಂದಿದ್ದಾರೆ.

Advertisement

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೇಳಿದ ಮಾತು ʼಸರ್ಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೆ ತಲುಪುವುದು 15% ಮಾತ್ರ” ಎಂಬ ಹೇಳಿಕೆ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ನಿಜವಾಯಿತು. ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವ ಅವರು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲ್ಲದ ಹಾವಿನಂತೆ ಮಾಡಿದವರು ಯಾರು ಎಂಬುದು ಸರ್ವವೇದ್ಯ.  ದಲಿತೋದ್ಧಾರದ ಹೆಸರಿನಲ್ಲಿ ಬಜೆಟ್‌ ನಲ್ಲಿ ಹಣ ಮೀಸಲಿಟ್ಟು ಕಾಂಗ್ರೆಸ್‌ ನಾಯಕರು ಹುಲ್ಲುಗಾವಲ್ಲನ್ನಾಗಿಸಿಕೊಂಡದ್ದು ಸುಳ್ಳೇ? ಅದಕ್ಕೆ ರಾಜೀವ್‌ ಗಾಂಧಿ ಆ ಮಾತು ಹೇಳಿರಬೇಕು, ಇಲ್ಲವಾದರೆ ಆ ಮಾತುಗಳನ್ನು ಯಾಕೆ ಹೇಳುತ್ತಿದ್ದರು? 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಯಾವ ದಲಿತರನ್ನು ಉದ್ಧಾರ ಮಾಡಿದಿರಿ ಹೇಳಿ? ದಲಿತೋದ್ಧಾರ ಅನ್ನುವುದು 60 ವರ್ಷ ಆಳ್ವಿಕೆ ಮಾಡಿದ ನಿಮ್ಮ ಪಕ್ಷದ ಅಜೆಂಡಾ ಮಾತ್ರ. ವಾಸ್ತವಾಗಿ ಅವರನ್ನು ಬಡತನದದಲ್ಲೇ ಉಳಿಸಿ ವೋಟ್ ಬ್ಯಾಂಕ್ ಮಾಡಿಕೊಂಡವರು ನೀವು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೂರಕ್ಕೂ ಅಧಿಕ ಯೋಜನೆಗಳ ಸಹಾಯಧನ ನೇರ ಬಡವರ ಬ್ಯಾಂಕ್‌ ಖಾತೆಗೆ ಹೋಗುತ್ತಿದೆ.  ʼನಾ ಖಾವುಂಗಾ, ನಾ ಖಾನೆ ದೂಂಗಾ’ ಇದು ನಮ್ಮ ನೀತಿ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಭ್ರಷ್ಟಾಚಾರ ಮುಚ್ಚಿ ಹಾಕಲು ನಿಮ್ಮ ಕೈಗೊಂಬೆ ಎಸಿಬಿ ರಚಿಸಿ ಹಗರಣಗಳ ʼಚಾಪ್ಟರ್‌ ಕ್ಲೋಸ್‌ʼ ಮಾಡಿಸಿದ್ದು ಸಿದ್ದು ಆಡಳಿತದ ʼಸಿದ್ಧ ಮಾದರಿʼಗೆ ಹಿಡಿದ ಕೈಗನ್ನಡಿ.  ದಲಿತೋದ್ಧಾರ ಎಂಬ ಗುರಾಣಿ ಹಿಡಿದುಕೊಂಡು ನಿಮ್ಮ ಪಕ್ಷ ಪರ್ಸೆಂಟೇಜ್‌ ʼಭಾಗ್ಯʼ ಎಂಬ ಬೆಣ್ಣೆ ತಿಂದು ದಲಿತರ ಮುಖಕ್ಕೆ ಒರೆಸಿದ ಕೋತಿಯ ಕಥೆ ನಿಮ್ಮದು.  ಅಂದ ಹಾಗೆ, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಖರ್ಗೆಯವರನ್ನು, ಪರಮೇಶ್ವರ್ ಅವರನ್ನು ನಿಮ್ಮ ದಾರಿಯಿಂದ ಹೇಗೆ ಬದಿಗೆ ಸರಿಸಿದಿರಿ ಅನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ.  ನಿಮ್ಮ ಇಂಥಹ ಗುಣ ಗೊತ್ತಿದ್ದೆ, ಶ್ರೀ ಚಲವಾದಿ ನಾರಾಯಣ ಸ್ವಾಮಿಯವರು ನಿಮ್ಮನ್ನು ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದಿರುವುದು ಸತ್ಯಕ್ಕೆ ಹಿಡಿದ ಕನ್ನಡಿ ಎಂದು ಸಿ.ಟಿ.ರವಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next