Advertisement

ರಘು ಪ್ರಗತಿ ಕಾರ್ಯಕ್ಕೆ ಗುಜರಾತ್‌ ಶಾಸಕ ಮೆಚ್ಚುಗೆ; ರೋಡ್‌ ಶೋ, ಪಾದಯಾತ್ರೆಗೆ ಸ್ವಾಗತ

09:44 AM May 07, 2023 | Team Udayavani |

ಬೆಂಗಳೂರು: ಸಿ.ವಿ.ರಾಮನ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ರಘು ಅವರು ಶನಿವಾರ ಕ್ಷೇತ್ರದಲ್ಲಿ ರೋಡ್‌ ಶೋ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

Advertisement

ಲಕ್ಷ್ಮೀಪುರದ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಹೊರಟ ರಘು ಅವರಿಗೆ ಮಹಿಳೆಯರು ಆರತಿ ಎತ್ತಿ ಸ್ವಾಗತ ಕೋರಿದರು. ಪಕ್ಷದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಹರ್ಷೋದ್ಗಾರಗಳೊಂದಿಗೆ ಬರಮಾಡಿ ಕೊಂಡರು. ಕ್ಷೇತ್ರದ ಪ್ರವಾಸಿ ಪ್ರಭಾರಿ ಗುಜರಾತ್‌ನ ಜುನಗಡ್‌ ಶಾಸಕ ಸಂಜಯ್‌ ಕರೋಡಿಯಾ ಹಾಗೂ
ಪಕ್ಷದ ಉಸ್ತುವಾರಿ ಪ್ರಕಾಶ್‌ ರಾಜು ಅವರ ಜತೆಗೂಡಿ ಲಕ್ಷ್ಮಿಪುರ, ಸಿಎಂಎಚ್‌ ರಸ್ತೆ, ಆನಂದಪುರ, ಸುಧಾಮ ನಗರ, ಓಲ್ಡ್‌ ಬಿನ್ನಿಮಂಗಲ, ನ್ಯೂ ಬಿನ್ನಿಮಂಗಲ ಸುತ್ತಮುತ್ತ ರೋಡ್‌ ಶೋ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಘು ಅವರು, ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ನಿಮ್ಮ ಆಶೀರ್ವಾದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೂಮ್ಮೆ ನನಗೆ ನಿಮ್ಮ ಪ್ರೀತಿ, ಆರೈಕೆ ಆಶೀರ್ವಾದ ಇರಲಿ. ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹದಿನೈದು ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಇಡೀ ಕ್ಷೇತ್ರದ ಚಿತ್ರಣ ಬದಲಿಸಿದ್ದೇನೆ. ಆರೋಗ್ಯ, ಶಿಕ್ಷಣ, ವಸತಿ, ಮೂಲಸೌಕರ್ಯ, ಉದ್ಯಾನ, ಪಾರ್ಕ್‌ಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ನೀವು ನನ್ನನ್ನು ಮನೆಮಗನಂತೆ ಕಾಣುತ್ತಿದ್ದೀರಿ. ಮುಂದೆಯೂ ನಿಮ್ಮ ಪ್ರೀತಿ ಇರಲಿ ಎಂದು ಕೋರಿದರು.

ಪ್ರವಾಸಿ ಪ್ರಭಾರಿ ಸಂಜಯ್‌ ಕರೋಡಿಯಾ ಅವರು ಮಾತನಾಡಿ, ಪ್ರಚಾರ ಆರಂಭವಾದಾಗಿನಿಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಶಾಸಕ ರಘು ಅವರ ಅಲೆ ಎದ್ದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ತೋರುತ್ತಿರುವ ಅದ್ಧೂರಿ ಸ್ವಾಗತವೇ ಇವರ ಜನಪ್ರಿಯತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.

Advertisement

ರಘು ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು ಇಂತಹ ಶಾಸಕರು ಸಿಗುವುದು ಅಪರೂಪ. ಸಿ.ವಿ.ರಾಮನ್‌ ನಗರ ಅಭಿವೃದ್ಧಿಯಲ್ಲಿ ಮಾದರಿಯಾಗಿದ್ದು, ಸದೃಢ ಬೆಂಗಳೂರು ನಿರ್ಮಾಣಕ್ಕಾಗಿ ರಘು ಅವರು ಮತ್ತೆ ಮತ್ತೆ ಆರಿಸಿಬರಬೇಕು. ನಿಮ್ಮ ಆಶೀರ್ವಾದ ಇರಲಿ ಎಂದರು.

ಕ್ಷೇತ್ರದ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ವಾರ್ಡ್‌ನ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ರಘು ಅವರ ಜತೆಗೂಡಿ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next