Advertisement

ಕುಂದಾಪುರ: ರಿಂಗ್‌ರೋಡ್‌ಗೆ ಯುಜಿಡಿ ಆತಂಕ-ರಸ್ತೆಗೆ ಅಪಾರ ಹಾನಿ ಸಾಧ್ಯತೆ…

05:17 PM Jul 10, 2024 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ನಗರದ ಎಲ್ಲ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್‌ ರೋಡ್‌ ಅಭಿವೃದ್ಧಿಗೆ ಇದ್ದ ಎಲ್ಲ ಅಡೆತಡೆಗಳೂ ನಿವಾರಣೆಯಾಗಿದ್ದು ಹೊಸದಾಗಿ ಯುಜಿಡಿ ಆತಂಕ ಎದುರಾಗಿದೆ. ಸಿಆರ್‌ಝಡ್‌ ಅನುಮತಿಯೇ ಆಗದೇ ಯೋಜನೆ ತಯಾರಿಸಿ ಟೆಂಡರ್‌ ಕರೆದು ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿತ್ತು. ಈಚೆಗೆ ಶಾಸಕ ಕಿರಣ್‌ ಕುಮಾರ್‌
ಕೊಡ್ಗಿ ಅವರು ಸಿಆರ್‌ಝಡ್‌ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ ಎಂಬಲ್ಲಿಗೆ ಕಾಮಗಾರಿಗೆ ಒಂದು ಹಂತದ ನಿರಾಕ್ಷೇಪಣೆ ದೊರೆತಿದೆ.

Advertisement

ಅದಕ್ಕಾಗಿ ಕಲ್ಲುಗಳು ಬಂದು ಬಿದ್ದಿವೆ. 2023 ಜನವರಿಯಲ್ಲಿ ಶಿಲಾನ್ಯಾಸವಾಗಿದ್ದು 18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಯಬೇಕಿತ್ತು. ಈಗ 19 ತಿಂಗಳಾಗಿದ್ದು ಮಳೆಗಾಲದ ತಿಂಗಳುಗಳನ್ನು ಹೊರತುಪಡಿಸಿದರೆ ಇನ್ನು ಬೆರಳೆಣಿಕೆ ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು. ಈ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿ ಆರಂಭವಾಗಲಿದೆ.

ರಿಂಗ್‌ರೋಡ್‌ ವಿಶೇಷತೆ
ಪಾದಚಾರಿಗಳಿಗೆ ನಡೆಯಲು ದಾರಿ, ನದಿಗೆ ತಡೆಗೋಡೆ, ದ್ವಿಪಥ ಮಾದರಿಯಲ್ಲಿ, ವಿದ್ಯುತ್‌ ದೀಪಗಳ ಬೆಳಕಿನಲ್ಲಿ ರಿಂಗ್‌ರೋಡ್‌ ಅತ್ಯಾಕರ್ಷಕವಾಗಿ ಕಾಣುವಂತೆ ನಿರ್ಮಾಣವಾಗಲಿದೆ. ಈ ರಸ್ತೆಯಿಂದ ನಗರದ ಒಳಗಿನ ಮದ್ದುಗುಡ್ಡೆ, ಹೊಸಬಸ್‌ನಿಲ್ದಾಣ,
ಬಹದ್ದೂರ್‌ಶಾ ವಾರ್ಡ್‌, ಖಾರ್ವಿಕೇರಿ ಮೊದಲಾದ ರಸ್ತೆಗಳಿಗೆ ಸಂಪರ್ಕ ದೊರೆಯಲಿದೆ.

ಮಹತ್ವಾಕಾಂಕ್ಷಿ ಯೋಜನೆ
ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್‌ರೋಡ್‌ ನಾಗರಿಕರ ಪಾಲಿಗೆ ದುರ್ಲಭ ಎಂಬಂತೆ ಭಾಸವಾಗುತ್ತಿತ್ತು. ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ 2006-07ನೇ ಸಾಲಿನಲ್ಲಿ ಸಾಕಾರಗೊಂಡ ಈ ಮಹತ್ವಾಕಾಂಕ್ಷೆಯ ಯೋಜನೆ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು.

ರಿಂಗ್‌ರೋಡ್‌ ಕಾಡುವ ಯುಜಿಡಿ
ಖಾರ್ವಿಕೇರಿ ಪರಿಸರಕ್ಕೆ ಯುಜಿಡಿ ಸಂಪರ್ಕ ವ್ಯವಸ್ಥೆ ಆಗಲಿಲ್ಲ. ನಗರದ ಎಲ್ಲ ಕಡೆಯ ತ್ಯಾಜ್ಯ ಹರಿದು ಖಾರ್ವಿಕೇರಿ ಕಡೆಗೆ ಬರುತ್ತದೆ. ಇಲ್ಲಿನ ಸುಡುಗಾಡು ತೋಡು ಸೇರಿದಂತೆ ಖಾರ್ವಿಕೇರಿ ಜನರಿಗೆ ತ್ಯಾಜ್ಯ ನೀರಿನ ಅಶುದ್ಧ ವಾತಾವರಣ. ಸೊಳ್ಳೆ ಕಚ್ಚಿಸಿಕೊಳ್ಳುವ ಶಿಕ್ಷೆ. ವಾಸನೆಯ ನಿತ್ಯನರಕ. ಅದಕ್ಕಾಗಿ ಇಲ್ಲಿ ಒಳಚರಂಡಿ ಮಾಡಿ ಎನ್ನುವುದು ಅವರ ಬಹುಕಾಲದ ಬೇಡಿಕೆ.

Advertisement

ಆದರೆ ಚರಂಡಿ ಮಾತ್ರ ಮಾಡಿ ಆ ತ್ಯಾಜ್ಯ ನೀರು ಎಲ್ಲಿಗೆ ಹರಿದುಹೋಗಬೇಕೆಂಬುದೇ ತೀರ್ಮಾನವಾಗದೇ, ಹರಿದು ಹೋಗುವಲ್ಲಿನ ಭೂಸ್ವಾಧೀನ ಆಗದೇ, ಎಸ್‌ಟಿಪಿ ಘಟಕಗಳ ನಿರ್ಮಾಣವಾಗದೇ ಪೈಪ್‌ಲೈನ್‌ ಮಾಡಿದ ಬುದ್ಧಿವಂತ ಎಂಜಿನಿಯರ್‌ಗಳಿಂದಾಗಿ ಇಡೀ ನಗರದ ಜನತೆಗೆ ಸಂಕಷ್ಟ. 43 ಕೋ.ರೂ. ಚರಂಡಿ ನೀರಿನಲ್ಲಿ ತೊಳೆದು ಹೋದ ಅನುಭವ. ಈಗ
ಅಂತೂ ಇಂತೂ ಒಳಚರಂಡಿ ಮಾಡಬೇಕೆಂಬ ಹುಮ್ಮಸ್ಸು ಇದೆಯಾದರೂ ಭೂಸ್ವಾಧೀನದಲ್ಲಿ ಅಲ್ಲಲ್ಲಿ ಮೂಗಿಗೆ ಬಡಿಯುವ ಭ್ರಷ್ಟಾಚಾರದ ವಾಸನೆ. ಹಿಂದೊಮ್ಮೆ ಲೋಕಾಯುಕ್ತದಲ್ಲೂ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಒಟ್ಟಿನಲ್ಲಿ ಯುಜಿಡಿಯೇ ಒಂದು ದೊಡ್ಡ ಅಪಧ್ವಾನ. ಈ ನಡುವೆ ಹೊಸದಾಗಿ ಯುಜಿಡಿ ಮಾಡಿದರೆ, ಖಾರ್ವಿಕೇರಿ ಭಾಗದ ಪೈಪ್‌ಲೈನ್‌ ಹೊಸದಾಗಿ ನಿರ್ಮಾಣವಾಗುವ ರಿಂಗ್‌ರೋಡ್‌ ಮೂಲಕ ಹೋಗಬೇಕಿದೆ. ರಸ್ತೆ ಮಾಡಿದ ಮೇಲೆ ಪೈಪ್‌ಲೈನ್‌ ಗಾಗಿ ಅಗೆದರೆ ಕೋಟ್ಯಂತರ ರೂ. ವ್ಯಯಿಸಿದ ರಿಂಗ್‌ರೋಡ್‌ ಹಾಳಾಗಲಿದೆ. ಈ ದೂರಾಲೋಚನೆಯಿಂದ ಶಾಸಕ ಕಿರಣ್‌
ಕುಮಾರ್‌ ಕೊಡ್ಗಿ ಅವರು ಯುಜಿಡಿ ಪೈಪ್‌ಲೈನ್‌ ಗೆ ಸ್ಥಳಾವಕಾಶ ಕಲ್ಪಿಸಿ ರಸ್ತೆ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಯುಜಿಡಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ, ಪುರಸಭೆಯವರು ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಿದೆ. ರಸ್ತೆಯ ನಡುವೆ ಅಲ್ಲದಿದ್ದರೂ ಪಾದಚಾರಿ ಪಥದಲ್ಲಿ ಪೈಪ್‌ಲೈನ್‌ ಹಾಕುವಂತೆ ಶಾಸಕರು ಸೂಚಿಸಿದ್ದಾರೆ.

ಯುಜಿಡಿ ಸಮಸ್ಯೆ 
ನಗರದಲ್ಲಿ 43 ಕೋ.ರೂ. ವೆಚ್ಚದಲ್ಲಿ ಅನುಷ್ಠಾನ ಹಂತದಲ್ಲಿ ಇರುವ ಒಳಚರಂಡಿ ಕಾಮಗಾರಿಯ ಭೀತಿ ಈ ವರ್ತುಲ ರಸ್ತೆಯ
ಪಾಲಿಗಿದೆ. ಈ ಹಿಂದೆ ನಗರೋತ್ಥಾನದಲ್ಲಿ ಹೊಸದಾಗಿ ನಗರದ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆ ಮಾಡಿದಾಗ ಯುಜಿಡಿ ಪೈಪ್‌ಲೈನ್‌ಗಾಗಿ ನಡು ರಸ್ತೆಯನ್ನೇ ಕೊರೆಯಲಾಗಿತ್ತು. ನಗರದ ಬಹುತೇಕ ಎಲ್ಲ ಕಾಂಕ್ರಿಟ್‌ ರಸ್ತೆಗಳನ್ನು ಯುಜಿಡಿಗಾಗಿ ಕೊರೆದು
ಅಸಮರ್ಪಕವಾಗಿ ಮುಚ್ಚಿ ಇಂದಿಗೂ ಉತ್ತಮ ರಸ್ತೆ ಎಂದು ಯಾವುದನ್ನೂ ಗುರುತಿಸುವಂತಿಲ್ಲ ಎಂಬಂತೆ ಹಾಳುಗೆಡವಲಾಗಿದೆ. ಈಗಲೂ ಯುಜಿಡಿ ಸಂಬಂಧವಾಗಿ ಅಗೆದ ರಸ್ತೆಯ ದೂರುಗಳು ಇವೆ. ಅತ್ತ ಯುಜಿಡಿಯೂ ಆಗಲಿಲ್ಲ. ಇತ್ತ ರಸ್ತೆಯೂ ಉಳಿಯಲಿಲ್ಲ ಎಂಬಂತಹ ಅಯೋಮಯ ಸ್ಥಿತಿ.

20 ಕೋ.ರೂ.ಗಳ ರಿಂಗ್‌ರೋಡ್‌ ಯೋಜನೆ
915 ಮೀ. ಉದ್ದ ಹಾಗೂ 1,110 ಮೀ.ನಂತೆ ಉದ್ದದ ಎರಡು ಹಂತದಲ್ಲಿ ತಲಾ 9.98 ಕೋ. ರೂ. ವೆಚ್ಚದಲ್ಲಿ ಒಟ್ಟು 19.96 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಒಂದು ಬದಿಯಲ್ಲಿ ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ಇರಲಿದ್ದು 10 ಅಡಿ ಅಗಲದ ಪಾದಚಾರಿ ಪಥ ಇರಲಿದೆ. ರಸ್ತೆ 12.5 ಮೀ. ಅಗಲ ಇರಲಿದೆ. 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂಬ ಶರತ್ತಿದೆ. ಪ್ರಭಾಕರ ಟೈಲ್ಸ್‌ವರೆಗೆ ಈ ಕಾಮಗಾರಿ ನಡೆಯಲಿದ್ದು ಮುಂದಿನ ಕಾಮಗಾರಿಗೆ 16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.

ವರ್ತುಲ ರಸ್ತೆ
ಕುಂದಾಪುರದ ಸಂಗಂನಿಂದ ಮೊದಲ್ಗೊಂಡು ಪಂಚ ಗಂಗಾವಳಿ ನದಿ ಪಾತ್ರದಲ್ಲಿ ಹಾದು ಹೋಗುವ ರಿಂಗ್‌ ರೋಡ್‌ ಚರ್ಚ್‌ ರಸ್ತೆಯನ್ನು ಸಂಧಿಸುತ್ತದೆ. ಅಲ್ಲಿಂದ ಕುಂದಾಪುರ ನಗರವನ್ನು ಹತ್ತಿರದಿಂದ ಸಂಧಿಸಬಹುದಾಗಿದೆ.

ಮಂಜೂರಾತಿ ಆಗಿಲ್ಲ
ಯುಜಿಡಿ ಮುಂದುವರಿದ ಕಾಮಗಾರಿಗೆ ಟೆಂಡರ್‌ ಮಂಜೂರಾಗಿಲ್ಲ. ರಿಂಗ್‌ ರೋಡ್‌ ಹಾಳಾಗದಂತೆ ಪೈಪ್‌ಲೈನ್‌ ಹಾಕುವ ಕುರಿತು ಸಮನ್ವಯ ಮೂಲಕ ಕಾರ್ಯನಿರ್ವಹಿಸಲಾಗುವುದು.
*ಮಂಜುನಾಥ ಆರ್‌.
ಮುಖ್ಯಾಧಿಕಾರಿ, ಪುರಸಭೆ

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next