Advertisement

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್

08:45 PM Jul 21, 2024 | Team Udayavani |

ಚಿಕ್ಕಮಗಳೂರು: ಹಗರಣ ಪ್ರಕರಣ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ. ನಾನು ಹಗರಣ ಮಾಡಿದ್ದೀನಿ, ನಿಮ್ಮ ಹಗರಣ ತೆಗೆಯುತ್ತೇನೆ ಎನ್ನುವ ವರಸೆಯಲ್ಲಿ ಮಾತನಾಡುತ್ತಿದ್ದು, ಸಿ.ಎಂ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಆಶ್ಚರ್ಯ ಮತ್ತು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಟೀಕಿಸಿದರು.

Advertisement

ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಾಲ್ಮೀಕಿ, ಮೂಡಾ ಹಗರಣ ಬರುವ ತನಕ ಬಿಜೆಪಿ ಹಗರಣ ಗೊತ್ತಿರಲಿಲ್ವಾ?, ನಿಮ್ಮದೇ ಸರ್ಕಾರ ಇರುವಾಗ ಇಲ್ಲಿಯವರೆಗೂ ಯಾಕೆ ತನಿಖೆ ಮಾಡಲಿಲ್ಲ. ನಿಮ್ಮ ಕಾಲಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎಂ ಸದನದ ಒಳಗೆ ಎಷ್ಟೊಂದು ಸುಳ್ಳು ಹೇಳಿದ್ದಾರೆ. ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ 11 ಕೋಟಿ ಅವ್ಯವಹಾರ ಎಂದಿದ್ದಾರೆ. ಆದರೆ, ಸರ್ಕಾರ ಇನ್ನೂ 11 ಕೋಟಿ ಬಿಡುಗಡೆ ಮಾಡಿಲ್ಲ. ಹಣ ಬಿಡುಗಡೆ ಮಾಡದೆ ಅವ್ಯವಹಾರ ಹೇಗೆ ಆಗುತ್ತದೆ? ಸದನದ ಒಳಗೆ ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿ ಎಂದೂ ಕಂಡಿಲ್ಲ ಎಂದು ಲೇವಡಿ ಮಾಡಿದರು.

ಅವ್ಯವಹಾರ ಆಗಿದ್ದರೆ ಯಾವ ತನಿಖೆಯನ್ನು ಬೇಕಾದರೂ ಮಾಡಲಿ, ಸಿಬಿಐ, ಇಂಟರ್ ಪೋಲ್, ಸಿಐಡಿ ಯಾವುದೇ ತನಿಖೆ ಬೇಕಾದರೂ ಮಾಡಿ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಿರೂರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ಮಾಡಿದ್ದನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಇದರಿಂದ ಪ್ರಾಕೃತಿಕ ವಿಕೋಪ, ಸಾವು ನೋವನ್ನು ಕಾಂಗ್ರೆಸ್ ಯಾವ ರೀತಿ ಸ್ವೀಕರಿಸಿದೆ ಹಾಗೂ ಕಾಂಗ್ರೆಸ್ ಮನಸ್ಥಿತಿ ಅರ್ಥವಾಗುತ್ತದೆ ಎಂದರು.

Advertisement

ಯಾವ ವಿಚಾರದಲ್ಲೂ ಕಾಂಗ್ರೆಸ್ ಗೆ ನೈಜ್ಯ ಕಾಳಜಿ ಇಲ್ಲ, ಮಳೆಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕಿತ್ತು. ಆದರೆ ಕೇಂದ್ರ ಸಚಿವರು ಭೇಟಿ ನೀಡಿದ್ದನ್ನು ಟೀಕೆ ಮಾಡುವುದಾದರೇ ಕಾಂಗ್ರೆಸ್ ಮನಸ್ಥಿತಿಯೇ ಸರಿ ಇಲ್ಲ.‌ ಸಾವಿನ ಜತೆಗೂ ಅನುಕಂಪ ತೋರದೆ  ಇರುವ ಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಹಗರಣದಲ್ಲಿ ಮುಳುಗಿ ಹೋಗಿರುವ ಸರ್ಕಾರಕ್ಕೆ ಜನರು ಸತ್ತರೇನು ಬಿಟ್ಟರೇನು ರಾಜ್ಯ ಸರ್ಕಾರ ತಲೆ ಕೆಡಿಸಿಕೊಳ್ಳದ ಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next