ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯನ್ನೆ ದಾನ ಮಾಡಿದ್ದರು. ನೆಲ್ಲೂರಿನ ತಿಪ್ಪರಾಜುವಾರಿ ರಸ್ತೆಯಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯನ್ನು ಕಂಚಿ ಕಾಮಕೋಟಿ ಪೀಠಕ್ಕೆ ಎಸ್‌ಪಿಬಿ ಹಸ್ತಾಂತರಿಸಿದ್ದರು. ಮೊದಲಿನಿಂದಲೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ಶ್ರದ್ಧೆ ಹೊಂದಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಪಿತ್ರಾರ್ಜಿತ ಮನೆಯಲ್ಲಿ ಸಂಸ್ಕೃತ ಹಾಗೂ ವೇದ ಪಾಠಶಾಲೆ ಆರಂಭಿಸುವ ಸಲುವಾಗಿ ದಾನ ನೀಡಿದ್ದರು. ಕೆಲವು ವರ್ಷದ ಹಿಂದೆ ಈ ಉದ್ದೇಶಕ್ಕಾಗಿ ತಮ್ಮ ಮನೆಯನ್ನು ಹಸ್ತಾಂತರಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ನಡೆದುಕೊಂಡಿದ್ದ ಎಸ್‌ಪಿಬಿ ನೆಲ್ಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮಿಗಳಿಗೆ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಹಸ್ತಾಂತರಿಸಿದ್ದರು. ಪಿತ್ರಾರ್ಜಿತ ಮನೆಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲು ಹಲವಾರು ಅವಕಾಶಗಳು ಬಂದಿದ್ದರೂ ಸಹ ಅದನ್ನು ಲೆಕ್ಕಿಸದೇ ಸದುದ್ದೇಶಕ್ಕಾಗಿ ದಾನ ಮಾಡಿದ್ದರು.
ಇದನ್ನೂ ಓದಿ:‘ಸಂಗೀತ ಸಂಜೆ’ಯ ಮೂಲಕ ಶಾಲಾ ಕಟ್ಟಡಕ್ಕೆ 1.20 ಲಕ್ಷ ರೂ.ದೇಣಿಗೆ ನೀಡಿದ್ದರು ಎಸ್ ಪಿಬಿ !
ಹಂಸಲೇಖ ಜತೆಗೆ ಎಸ್‌ಪಿಬಿ ಹಿಟ್ಸ್
ನಾದಬ್ರಹ್ಮ ಹಂಸಲೇಖ ಹಾಗೂ ಎಸ್‌ಪಿಬಿ ಕಾಂಬಿನೇಶನ್‌ನಲ್ಲೂ ಸಾಕಷ್ಟು ಹಿಟ್ ಹಾಡುಗಳು ಮೂಡಿಬಂದಿವೆ. ಹಂಸಲೇಖ ತಮ್ಮ ಸಾಹಿತ್ಯ ಹಾಗೂ ಸಂಗೀತದ ಮೂಲಕ ಹಾಡಿಗೆ ಹೊಸ ರೂಪ ನೀಡಿದರೆ, ಎಸ್‌ಪಿಬಿ ಅವರು ತಮ್ಮ ಕಂಠಸಿರಿಯ ಮೂಲಕ ಆ ಹಾಡನ್ನು ಮತ್ತಷ್ಟು ಯಶಸ್ವಿಗೊಳಿಸುತ್ತಿದ್ದರು. ಈ ಜೋಡಿಯ ಹಾಡುಗಳಿರುವ ಸಿನೆಮಾಗಳ ಬಗ್ಗೆ ನೋಡುವುದಾದರೆ “ಪ್ರೇಮಲೋಕ’, “ರಣಧೀರ’, “ಸಿಪಾಯಿ’, “ಶೃಂಗಾರ ಕಾವ್ಯ’, “ಮಹಾಕ್ಷತ್ರಿಯ’, “ಅಂಜದ ಗಂಡು’, “ಯುದ್ಧಕಾಂಡ’, “ಶ್ರೀಮಂಜುನಾಥ’, “ಯಾರೇ ನೀನು ಚೆಲುವೆ’, “ಪ್ರೀತ್ಸೇ’, “ರಣರಂಗ’ ಹೀಗೆ ಲೆಕ್ಕ ಹಾಕುತ್ತಾ ಹೋದರೆ ಇವರಿಬ್ಬರ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.