ಸಿಯೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Muan International Airport) ಜೆಜು ಏರ್ (Jeju Air) ಗೆ ಸೇರಿದ ಬೋಯಿಂಗ್ 737-800 ವಿಮಾನವು ರವಿವಾರ (ಡಿ.29) ಬೆಳಗ್ಗೆ ಪತನವಾಗಿದೆ. ವಿಮಾನದಲ್ಲಿ ಆರು ಮಂದಿ ಸಿಬ್ಬಂದಿ ಸೇರಿ 181 ಮಂದಿ ಪ್ರಯಾಣಿಸುತ್ತಿದ್ದು, ಕನಿಷ್ಠ 179 ಮಂದಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ಅವಳಿ-ಎಂಜಿನ್ ವಿಮಾನವು ರನ್ ವೇಯಿಂದ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದೆ. ವಿಮಾನ ತಕ್ಷಣವೇ ಬೆಂಕಿಗೆ ಆಹುತಿಯಾಯಿತು.
ವಿಮಾನವು ಅಪಘಾತಕ್ಕೆ ಸೆಕೆಂಡುಗಳ ಮೊದಲು ‘ಬೆಲ್ಲಿ ಲ್ಯಾಂಡಿಂಗ್’ (ಅದರ ಲ್ಯಾಂಡಿಂಗ್ ಗೇರ್ ಅನ್ನು ಸಂಪೂರ್ಣವಾಗಿ ವಿಸ್ತರಿಸದೆ) ಪ್ರಯತ್ನಿಸಿರುವುದು ವೀಡಿಯೋದಲ್ಲಿ ಕಾಣಬಹುದು.
ಜೆಜು ಏರ್ ಗೆ ಸೇರಿದ ವಿಮಾನದಲ್ಲಿ 175 ಮಂದಿ ಪ್ರಯಾಣಿಕರಿದ್ದರು. ಆರು ಮಂದಿ ವಿಮಾನ ಸಿಬ್ಬಂದಿಗಳಿದ್ದರು. ಘಟನೆಯ ಬಳಿಕ ಇದುವರೆಗೆ ಒಬ್ಬ ವಿಮಾನ ಸಿಬ್ಬಂದಿ ಮತ್ತು ಒಬ್ಬ ಪ್ರಯಾಣಿಕರು ಜೀವಂತವಾಗಿ ಕಾಣಲು ಸಿಕ್ಕಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.
ವಿಮಾನ ಪತನಗೊಂಡ ನಂತರ ಬೆಳಗ್ಗೆ 9 ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ವಿಮಾನ ನಿಲ್ದಾಣದಲ್ಲಿ ತುರ್ತು ಸೇವೆಗಳು ಕಾರ್ಯಾಚರಣೆ ಆರಂಭಿಸಿದವು. ಅಪಘಾತದ ಸ್ಥಳದಲ್ಲಿ ಕನಿಷ್ಠ 32 ಅಗ್ನಿಶಾಮಕ ವಾಹನಗಳು ಮತ್ತು ಹಲವಾರು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.