ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಮನೆ ಮನೆಗೆ ಗಂಗೆ’ ಯೋಜನೆ ಯಡಿ ಜಿಲ್ಲೆಯಲ್ಲಿ 2,47,188 ಮನೆಗಳಿಗೆ ನಳ್ಳಿ ಸಂಪರ್ಕದ ಗುರಿ ಹೊಂದಿದ್ದು, ಈಗಾಗಲೇ 1,67,701 ಲಕ್ಷ ಮನೆಗಳಿಗೆ ಸೌಲಭ್ಯ ಕಲ್ಪಿಸಿದೆ. ಉಳಿದ ಮನೆಗಳಿಗೆ ಶೀಘ್ರ ಕಲ್ಪಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಗೈದು ಅವರು ಸಂದೇಶ ನೀಡಿದರು.
ನದಿದಂಡೆ ಸಂರಕ್ಷಣೆ
ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು 38.96 ಕೋ.ರೂ. ಮೊತ್ತದಲ್ಲಿ 8.56 ಕಿ.ಮೀ. ಉದ್ದಕ್ಕೆ ನದಿದಂಡೆ ಸಂರಕ್ಷಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕುಗಳ ವ್ಯಾಪ್ತಿಯ 122 ಗ್ರಾಮಗಳ 1,904 ಗ್ರಾಮೀಣ ಜನ ವಸತಿಗಳಿಗೆ 1,600 ಕೋ.ರೂ.ಗಳಲ್ಲಿ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 59 ಗ್ರಾಮಗಳಿಗೆ 585 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಬಂದರು ನಿರ್ಮಾಣ
ಹೆಜಮಾಡಿ ಬಂದರು ನಿರ್ಮಾಣವನ್ನು 188.73 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳ ಲಾಗುತ್ತಿದೆ. ಬೈಂದೂರು ತಾಲೂಕಿನ ಮರವಂತೆಯಲ್ಲಿ 2ನೇ ಹಂತದ ಹೊರ ಬಂದರು ನಿರ್ಮಾಣವನ್ನು 8,500 ಲ.ರೂಗಳಲ್ಲಿ ಕೈಗೊಳ್ಳಲಾಗುತ್ತಿದೆ. ಹಂಗಾರಕಟ್ಟೆಯಿಂದ ಮಣಿಪಾಲ ವರೆಗಿನ ಜಲಮಾರ್ಗ ವನ್ನು 2,500 ಲ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ತಾತ್ವಿಕ ಅನುಮೋದನೆ ದೊರಕಿದೆ ಎಂದರು.
Related Articles
ಶಾಸಕ ಕೆ. ರಘುಪತಿ ಭಟ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್. ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.
ಕೃಷಿಕರಿಗೆ ಸಮ್ಮಾನ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್
ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ 24 ಮಂದಿ ಕೃಷಿಕರನ್ನು ಸಮ್ಮಾನಿಸಲಾಯಿತು. ಅತ್ಯುತ್ತಮ ಸೇವೆ ನೀಡಿರುವ ಗ್ರಾಮ ಒನ್ ಕೇಂದ್ರಗಳಿಗೆ ಪ್ರಶಂಸಾ ಪತ್ರ, ಎಸೆಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ತಲಾ 8 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ ಅಡಿಯಲ್ಲಿ ಜಿಲ್ಲೆಯ ಫಲಾ ನುಭವಿಗಳಿಗೆ ಅತ್ಯುತ್ತಮ ಸೇವೆ ಸಲ್ಲಿಸಿರುವ ಶಿರೂರು ಪ್ರಾ.ಆ. ಕೇಂದ್ರ, ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನು ಗೌರವಿಸಲಾಯಿತು.
150,593 ಕಿಸಾನ್ ಫಲಾನುಭವಿಗಳು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಮತ್ತು ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ನೆರವಾಗಲು ಕೇಂದ್ರ ಸರಕಾರ 6 ಸಾವಿರ ರೂ. ಹಾಗೂ ರಾಜ್ಯ ಸರಕಾರ 4 ಸಾವಿರ ರೂ. ಸೇರಿದಂತೆ ವಾರ್ಷಿಕ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,50,593 ರೈತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ 386.2 ಕೋ.ರೂ. ಒದಗಿಸಲಾಗುತ್ತಿದೆ ಎಂದರು.