ಕರಾವಳಿ ಮಾತ್ರವಲ್ಲದೆ ರಾಜ್ಯದಲ್ಲಿಯೇ ಅತ್ಯಂತ ಸರಳ ಶಾಸಕರೆಂಬ ಹೆಗ್ಗಳಿಕೆ ಪಡೆದಿರುವ ಸುಳ್ಯ ಶಾಸಕ, ಸಚಿವ ಎಸ್. ಅಂಗಾರ ಅವರು ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಸುಮಾರು ಮೂರು ದಶಕಗಳ ಅವಧಿಯಲ್ಲಿ ಸುಳ್ಯದ ಜನಸಾಮಾನ್ಯರಿಗೆ ಸದಾ ಲಭ್ಯರಿರುವ ಶಾಸಕರೆನಿಸಿಕೊಂಡಿದ್ದರು.
ಸುಳ್ಯ: ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಖ್ಯಾತರಾಗಿರುವ ಸುಳ್ಯದ ಶಾಸಕ, ಸಚಿವ ಎಸ್.ಅಂಗಾರ ಅವರು ನಿರಂತರವಾಗಿ ಆರು ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಜತೆಗೆ ಸುಳ್ಯದ ಬಂಗಾರ ಎಂಬ ಪ್ರಖ್ಯಾತಿಯನ್ನೂ ಪಡೆದಿರುವರು. ಇದೀಗ ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಪ್ರೌಢಶಾಲಾ ವಿದ್ಯಾಭ್ಯಾಸ ಪಡೆ ದಿರುವ ಅಂಗಾರ ಅವರು 1982ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 1984ರಲ್ಲಿ ಬಿಜೆಪಿಯಿಂದ ಮಂಡಲ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಸೋಲು, 1989ರಲ್ಲಿ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆದರೆ 1994ರಲ್ಲಿ ಜಯ ಸಾಧಿಸಿದ ಬಳಿಕ ಹಿಂದಿರುಗಿ ನೋಡಿಯೇ ಇಲ್ಲ. 1999, 2004, 2008, 2013, 2018ರ ವರೆಗೂ ಸ್ಪರ್ಧಿಸಿ ನಿರಂತರ ಗೆಲುವು ಸಾಧಿಸಿದ್ದರು. ಎರಡು ವರ್ಷಗಳಿಂದ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.
ಅಭಿವೃದ್ಧಿಯ ಹರಿಕಾರ
ಅಂಗಾರ ಅವರು ಸಾಮಾನ್ಯ ಕೃಷಿ ಕೂಲಿ ಕಾರ್ಮಿಕ ಕುಟುಂಬದಿಂದ ಬಂದವರಾಗಿದ್ದು, ಶಾಸಕರಾದ ಬಳಿಕವೂ ಕೃಷಿ ಕೆಲಸದಲ್ಲಿ ತೊಡಗಿದ್ದರು. ಬೆಂಗಳೂರಿನಲ್ಲಿ ತನಗೆ ಬೇಕಾದ ಅಡುಗೆ ತಾನೇ ತಯಾರಿಸುತ್ತಿದ್ದರು.
ಗ್ರಾಮೀಣ ಭಾಗಕ್ಕೆ ರಸ್ತೆ ಸಂಪರ್ಕ, ಸೇತುವೆ ಸಂಪರ್ಕ, ಕುಡಿಯುವ ನೀರು, ಗ್ರಾಮಗಳಿಗೆ ಮೂಲಸೌಕರ್ಯ ಸೇರಿದಂತೆ ಗ್ರಾಮ, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಕೆಲಸ ನಿರ್ವಹಿಸಿದ್ದರು. ಸುಳ್ಯಕ್ಕೆ ಅಗ್ನಿಶಾಮಕ ಠಾಣೆ, ಕೆಎಸ್ಸಾರ್ಟಿಸಿ ಘಟಕ, ಮಿನಿ ವಿಧಾನ ಸೌಧ, ತಾ. ಪಂ.ಗೆ ಹೊಸ ಕಟ್ಟಡ, ಸುಳ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ 17 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು, ಸುಳ್ಯದ ಬಹುಬೇಡಿಕೆಯ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಅಡೆ ತಡೆ ನಿವಾರಿಸಿ, ಕಾಮಗಾರಿಗೆ ಚಾಲನೆ, ಕಡಬ ತಾಲೂಕು ಅನುಷ್ಠಾನ ಜತೆಗೆ ಮಿನಿ ವಿಧಾನ ಸೌಧ, ಪಾಳ್ಳೋಳಿ, ಹೊಸಮಠ, ಕುಮಾರಧಾರ, ಉದನೆ, ಶಾಂತಿಮೊಗರು, ಸೇರಿದಂತೆ ವಿವಿ ಧೆಡೆ ಬೃಹತ್ ಸೇತುವೆ, ಕುಕ್ಕೆ ದೇವಸ್ಥಾನದ ಮಾಸ್ಟರ್‌ಪ್ಲಾನ್ ಯೋಜನೆಯಡಿ ಸಮಗ್ರ ಅಭಿವೃದ್ಧಿ ಕಾಮಗಾರಿ ಸೇರಿದಂತೆ ತನ್ನ ಅವಧಿಯಲ್ಲಿ ಶಾಶ್ವತ ಕಾಮಗಾರಿಗಳನ್ನು ನಡೆಸಿದ್ದಾರೆ.
ಮೀನು ಕೃಷಿ ಕ್ರಾಂತಿ
ಸಚಿವರಾಗಿದ್ದ ಎಸ್.ಅಂಗಾರ ತಮ್ಮ ಇಲಾ ಖೆಯ ಮೀನುಗಾರಿಕೆಯಲ್ಲಿ ಮೀನು ಕೃಷಿ ಕ್ರಾಂತಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಳನಾಡು ಮೀನು ಗಾರಿಕೆಗೆ ಆದ್ಯತೆ ನೀಡಿ ಮೀನು ಕೃಷಿಯನ್ನು ನಡೆಸಲು ಕೃಷಿಕರನ್ನು ಪ್ರೋತ್ಸಾಹಿಸಿದ್ದರು. ಇದರಿಂದ ಸುಳ್ಯ ಸಹಿತ ರಾಜ್ಯದ ವಿವಿಧೆಡೆ ಮೀನು ಸಾಕಾಣಿಕೆ ಆರಂಭಿಸಿ ಮೀನು ಕೃಷಿ ಕ್ರಾಂತಿ ಉಂಟಾಗಿದೆ.