ಹೊಸದಿಲ್ಲಿ: ಗುರುಗ್ರಾಮದ ರ್ಯಾನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಅದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯೇ ಹತ್ಯೆ ಮಾಡಿರುವುದು ತಿಳಿದುಬಂದಿದೆ. ಇದು ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ಪರೀಕ್ಷೆಯನ್ನು ಮುಂದೂಡುವುದಕ್ಕಾಗಿ ಪ್ರದ್ಯುಮ್ನ ಠಾಕೂರ್‌ನನ್ನು ಪಿಯು ವಿದ್ಯಾರ್ಥಿ ಹತ್ಯೆ ಮಾಡಿದ್ದ ಎಂಬ ಆತಂಕಕಾರಿ ಅಂಶ ಶಾಲೆಯಲ್ಲಿ ಪರೀಕ್ಷೆಯ ಬಗ್ಗೆ ಮಕ್ಕಳಲ್ಲಿರುವ ಭೀತಿಯ ತೀವ್ರತೆಯನ್ನೂ ಸೂಚಿಸುತ್ತಿದೆ.
ಸೆ.8ರಂದು ಪ್ರದ್ಯುಮ್ನನನ್ನು ಶಾಲಾ ಬಸ್ ಕಂಡಕ್ಟರ್ ಲೈಂಗಿಕವಾಗಿ ಬಳಸಿಕೊಂಡು ಶಾಲಾ ಶೌಚಾಲಯದಲ್ಲಿ ಕತ್ತು ಸೀಳಿ ಕೊಲೆ ನಡೆಸಿದ್ದ ಎಂದು ಪೊಲೀಸರು ವರದಿ ಮಾಡಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಪ್ರಕರಣದ ಸ್ವರೂಪವೇ ಬದಲಾಗಿದೆ. ಕೊಲೆ ಮಾಡಿರುವುದು ಬಸ್ ಕಂಡಕ್ಟರ್ ಅಲ್ಲ, ಬದಲಿಗೆ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ಎಂಬುದು ಆಘಾತ ಹುಟ್ಟಿಸಿದೆ. ಈ ವಿದ್ಯಾರ್ಥಿಯನ್ನು ಈಗಾಗಲೇ ಸಿಬಿಐ ವಶಕ್ಕೆ ಪಡೆದಿದೆ.
ಪ್ರದ್ಯುಮ್ನ ಮೃತಪಟ್ಟಿದ್ದನ್ನು ಈ ವಿದ್ಯಾರ್ಥಿಯೇ ಮೊದಲು ನೋಡಿದ್ದ. ಘಟನೆ ನಡೆದ ದಿನದಿಂದಲೂ ಶಾಲಾ ಆಡಳಿತ ಮಂಡಳಿ ಏನನ್ನೋ ಮುಚ್ಚಿಡುತ್ತಿದ ಎಂದು ಮೃತ ಬಾಲಕನ ಹೆತ್ತವರು ಆರೋಪಿಸಿದ್ದರು. ತನಿಖೆ ಕೈಗೆತ್ತಿಕೊಂಡ ಸಿಬಿಐಗೆ ಕಂಡಕ್ಟರ್ ಅಶೋಕ್ ಕುಮಾರ್ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಬದಲಿಗೆ ಪ್ರಥಮ ಪಿಯು ವಿದ್ಯಾರ್ಥಿಯ ವಿರುದ್ಧ ಸಾಕ್ಷ್ಯ ಲಭ್ಯವಾಗಿದೆ ಎಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಸಿಬಿಐ ಪಿಯು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದೆ.
ಕಂಡಕ್ಟರ್ ಅಶೋಕ್ ಮೇಲೆ ಒತ್ತಡ ಹೇರಿ ಪೊಲೀಸರು ತಪ್ಪೊಪ್ಪಿಗೆ ಪಡೆದಿದ್ದಾರೆ. ಅಲ್ಲದೆ ಮಾಧ್ಯಮದ ಮುಂದೆ ಹೇಳಿಕೆ ನೀಡುವಂತೆಯೂ ಒತ್ತಾಯಿಸಲಾಗಿತ್ತು ಎಂದು ಸಿಬಿಐ ಹೇಳಿದೆ. ಇನ್ನೊಂದೆಡೆ ಆರೋಪಿಯನ್ನು ವಯಸ್ಕ ಎಂಬಂತೆಯೇ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂದು ಪ್ರದ್ಯುಮ್ನನ ಪಾಲಕರು ಆಗ್ರಹಿಸಿದ್ದಾರೆ. ಅಪ್ರಾಪ್ತ ಎಂದು ಪರಿಗಣಿಸಿದರೆ, ಕೇವಲ ಆರು ತಿಂಗಳವರೆಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಿ ನಂತರ ಬಿಡುಗಡೆ ಮಾಡಲಾಗುತ್ತದೆ.
ಜೈಲು ಶಿಕ್ಷೆ ವಿಧಿಸುವ ಅವಕಾಶ ಇರುವುದಿಲ್ಲ. ಈ ಪ್ರಕರಣದ ಆರೋಪಿಗೆ 16 ವರ್ಷವಾಗಿದ್ದು, ಇತ್ತೀಚಿನ ಬಾಲನ್ಯಾಯ ಮಂಡಳಿ ತೀರ್ಪಿನ ಪ್ರಕಾರ ವಯಸ್ಕ ಎಂಬುದಾಗಿ ಪರಿಗಣಿಸಿ ವಿಚಾರಣೆ ನಡೆಸುವ ಅವಕಾಶವಿದೆ. ಆದರೆ ವಯಸ್ಕ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕೇ ಎಂಬುದನ್ನು ಕೋರ್ಟ್ ಇನ್ನಷ್ಟೇ ತೀರ್ಮಾನಿಸಬೇಕಿದೆ.
ಪರೀಕ್ಷೆ ಮುಂದೂಡಲು ಕೊಲೆ: ಪರೀಕ್ಷೆಯನ್ನು ಮುಂದೂಡುವ ಉದ್ದೇಶಕ್ಕೆಂದೇ ಪ್ರಥಮ ಪಿಯು ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎಂದು ಸಿಬಿಐ ಹೇಳಿದೆ. ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ವಿಡಿಯೋ ಪರಿಶೀಲಿಸಿದ ಸಿಬಿಐ, ಪಿಯು ವಿದ್ಯಾರ್ಥಿಯು ಕೊಲೆ ಮಾಡಲು ಯೋಜನೆ ರೂಪಿಸಿ, ಚಾಕು ಹಿಡಿದು ಶೌಚಾಲಯದೊಳಗೆ ಕಾಯುತ್ತಿದ್ದ. ಈ ವೇಳೆ ಪ್ರದುಮನ್ ಶೌಚಾಲಯಕ್ಕೆ ತೆರಳಿದ್ದ. ಇದು ಆತನನ್ನೇ ಟಾರ್ಗೆಟ್ ಮಾಡಿ ನಡೆಸಿದ ಕೊಲೆಯಲ್ಲ ಎಂಬುದನ್ನು ಕಂಡುಕೊಂಡಿದೆ. ಪಿಯು ವಿದ್ಯಾರ್ಥಿ ಅಭ್ಯಾಸದಲ್ಲಿ ಹಿಂದುಳಿದಿದ್ದ. ಜತೆಗೆ, “ಪರೀಕ್ಷೆ ಬಗ್ಗೆ ತಲೆಕೆಡಿಸಿಕೊಂಡು ಓದಬೇಕಾಗಿಲ್ಲ, ಏಕೆಂದರೆ ಖಂಡಿತಾ ಪರೀಕ್ಷೆ ಮುಂದೂಡಲ್ಪಡುತ್ತದೆ’ ಎಂದು ಹತ್ಯೆ ಬಳಿಕ ಸಹಪಾಠಿಗಳಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ. ಘಟನೆ ನಡೆದ ನಂತರ ಪಾಲಕರು ಮತ್ತು ಶಿಕ್ಷಕರ ಸಭೆ ಮತ್ತು ಪರೀಕ್ಷೆಯನ್ನು ಶಾಲೆ ಮುಂದೂಡಿತ್ತು. ಸದ್ಯ ವಿದ್ಯಾರ್ಥಿಯ ವಿಚಾರಣೆ ನಡೆಯುತ್ತಿದ್ದು, ನಂತರ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಆರೋಪಿಯ ಪಾಲಕರು, ತಮ್ಮ ಪುತ್ರ ಅಮಾಯಕ. ಯಾವುದೇ ಅಪರಾಧ ಎಸಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸರಿಗೆ ಮುಜುಗರ
ಕಂಡಕ್ಟರ್ ಅಶೋಕ್ ಕುಮಾರ್‌ನನ್ನು ಆರೋಪಿ ಎಂದು ಘೋಷಿಸಿದ್ದ ಪೊಲೀಸರಿಗೆ ಸಿಬಿಐ ವರದಿಯಿಂದ ಮುಜುಗರವಾದಂತಾಗಿದೆ. ಬಲವಂತಪಡಿಸಿ ಅಶೋಕ್ ಕುಮಾರ್‌ನಿಂದ ತಪ್ಪೊಪ್ಪಿಗೆ ಪಡೆದಿದ್ದು ಇಲಾಖಾ ತನಿಖೆಗೆ ಕಾರಣವಾಗುವ ಸಾಧ್ಯತೆಯಿದೆ.