ಹೊಸಕೋಟೆ: ಪಟ್ಟಣದ ಬಳಿಯ ಆವಲಹಳ್ಳಿಯಲ್ಲಿ ಪೋಷಕರು ಬಿಟ್ಟುಹೋದ ಮೂವರು ಬಾಲಕಿಯರನ್ನು ಪೊಲೀಸರು ರಕ್ಷಿಸಿ ಬೆಂಗಳೂರಿನ ಮಕ್ಕಳ ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ತಮ್ಮದೇ ಆದ ಮೂವರು ಬಾಲಕಿಯರನ್ನು ತೊರೆದು ಗಂಡು ಮಗನೊಂದಿಗೆ ಪೋಷಕರು ಪರಾರಿಯಾದ ಘಟನೆ ನಡೆದಿದ್ದು, ಜಾರ್ಖಂಡ್ ಮೂಲದ ರಿಯಾ(10), ರಿತೀಕಾ(9), ರಾಜನಂದಿನಿ(8) ಪತ್ತೆಯಾದ ಬಾಲಕಿಯರು.
ಇವರು 2 ತಿಂಗಳ ಹಿಂದೆ ತಮ್ಮ ತಂದೆ, ತಾಯಿಯೊಂದಿಗೆ ಬೆಂಗಳೂರಿಗೆ ಬಂದಿದ್ದು, ಗುರುವಾರ ಆವಲಹಳ್ಳಿ ಬಸ್ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಮಕ್ಕಳಿಗೆ ಊಟ ಕೊಡಿಸಿ ನಂತರ ತಂದೆ, ತಾಯಿ ಹಾಗೂ ಮಗ ಹೆಣ್ಣುಮಕ್ಕಳ ಎದುರಿನಲ್ಲಿಯೇ ಬಸ್ ಹತ್ತಿ ಪರಾರಿಯಾಗಿದ್ದಾರೆ.
ಕೆಲ ಸಮಯದ ನಂತರ ದಿಕ್ಕು ಕಾಣದ ಬಾಲಕಿಯರು ರಸ್ತೆಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಬೂದಿಗೆರೆ ಕ್ರಾಸ್ ಬಳಿಯ ಮೇಲ್ಸೇತುವೆ ಮೇಲೆ ಇವರನ್ನು ಕಂಡ ಸಾರ್ವಜನಿಕರೊಬ್ಬರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಬಾಲಕಿಯರನ್ನು ವಿಚಾರಿಸಿದಾಗ ತಮ್ಮ ತಂದೆ ಟ್ಯಾಕ್ಸಿ ಚಾಲಕನಾಗಿದ್ದು, ಮೂವರು ಹೆಣ್ಣು, ಒಬ್ಬ ಗಂಡು ಮಗನಿದ್ದಾನೆ.
ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದು ಎರಡು ತಿಂಗಳಾಗಿದೆ. ಗುರುವಾರ ಬೆಳಗ್ಗೆ ಬಸ್‌ನಲ್ಲಿ ಆವಲಹಳ್ಳಿಗೆ ಕರೆತಂದು ಹೋಟೆಲ್‌ನಲ್ಲಿ ಊಟ ಕೊಡಿಸಿ ನಂತರ ತಮ್ಮ ತಂದೆ, ತಾಯಿ, ಅಣ್ಣ ಬಸ್‌ನಲ್ಲಿ ಬೆಂಗಳೂರು ಕಡೆಗೆ ಹೊರಟುಹೋಗಿದ್ದಾರೆ.
ಜಾರ್ಖಂಡ್‌ನಲ್ಲಿ ತಮ್ಮನ್ನು ಶಾಲೆಗೆ ದಾಖಲಿಸಲಾಗಿದ್ದು, ಅಜ್ಜ, ಅಜ್ಜಿ ಸಹ ತಮ್ಮೊಂದಿಗೆ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ. ಪೊಲೀಸರು ವಿಷಯವನ್ನು ಬೆಂಗಳೂರಿನ ಮಕ್ಕಳ ಶುಶ್ರೂಷಾ ಕೇಂದ್ರಕ್ಕೆ ತಿಳಿಸಿದ್ದು, ಅಧಿಕಾರಿಗಳು ಮಾಹಿತಿ ಪಡೆದು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.