Advertisement
ಧಾರವಾಡ: ಇಷ್ಟೊತ್ತಿಗಾಗಲೇ ಕಾಯಿಗಳಲ್ಲಿ ಮುತ್ತಿನ ಬಣ್ಣದ ಕಾಳುಗಳು ಕಟ್ಟಬೇಕಾಗಿತ್ತು. ಬೆಳೆಯ ತಪ್ಪಲು ಸ್ವತ್ಛಂದವಾಗಿ ಒಣಗಿ ದನಕರುಗಳಿಗೆ ಹೊಟ್ಟಾಗಬೇಕಿತ್ತು. ಬಿತ್ತಿದ ರೈತರಿಗೆ ಮಾಡಿದ ಖರ್ಚು ಹೊರಗೆ ಬಂದು ಕನಿಷ್ಟ ಎಕರೆಗೆ 10 ಸಾವಿರ ರೂ. ಲಾಭವಾಗಬೇಕಿತ್ತು. ಆದರೆ ಇದ್ಯಾವುದು ಆಗದೇ, ಸೋಯಾ ಬೆಳೆಗೆ ಜಂಗು ರೋಗ (ತುಕ್ಕು ಅಥವಾ ಕುಂಕುಮ ರೋಗ) ತಗುಲಿದ್ದು, ಪ್ರತಿ ಎಕರೆಗೆ 10 ಸಾವಿರದಷ್ಟು ಖರ್ಚೇ ಮೈ ಮೇಲೆ ಬಂದಿದ್ದು, ರೈತರು ಸಂಕಷ್ಟದ ಸುಳಿಗೆ ಸಿಲುಕುವಂತಾಗಿದೆ.
Related Articles
Advertisement
ಒಂದು ಅರ್ಥದಲ್ಲಿ ಅರೆಮಲೆನಾಡು ಸೆರಗಿನ ಭೂಮಿ ಕಳೆದ ಹತ್ತು ವರ್ಷಗಳ ಹಿಂದಷ್ಟೇ ಅಪ್ಪಟ ದೇಶಿ ಭತ್ತ ಬೆಳೆಯುವ 47ಕ್ಕೂ ಹೆಚ್ಚು ದೇಶಿ ತಳಿ ಘಮ ಸೂಸುವ ಭತ್ತಗಳನ್ನು ಬೆಳೆದು ಹೊರರಾಜ್ಯಕ್ಕೂ ಅಕ್ಕಿಯನ್ನು ರಫ್ತು ಮಾಡುವ ಭತ್ತದ ಕಣಜವಾಗಿತ್ತು. ಧಾರವಾಡ, ಅಳ್ನಾವರ, ಕಲಘಟಗಿ ತಾಲೂಕಿನಾದ್ಯಂತ ಬೆಳೆಯುತ್ತಿದ್ದ ಕುರಿಗೆ ಬಿತ್ತನೆಯ ಭತ್ತಕ್ಕೆ ಅವಲಕ್ಕಿ, ಕುಚಲಕ್ಕಿಗೆ ಭಾರಿ ಬೇಡಿಕೆ ಇತ್ತು. ಆದರೆ ಮಳೆ ಕೈ ಕೊಟ್ಟಿದ್ದರಿಂದ ಸತತ ಬರಗಾಲದಿಂದಾಗಿ ಈ ಪ್ರದೇಶದಲ್ಲಿನ ಬೆಳೆ ಪದ್ಧತಿಯೇ ಬದಲಾಗಿ ಹೋಯಿತು. ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಂಪನಿ ಸ್ಥಾಪನೆಯಾದ ಮೇಲಂತೂ ಈ ಭಾಗದಲ್ಲಿ ಭತ್ತ ಸಂಪೂರ್ಣ ಮಾಯವಾಗಿ ಇದೀಗ ಶೇ.50 ಭೂ ಪ್ರದೇಶವನ್ನು ಕಬ್ಬು ಆಕ್ರಮಿಸಿಕೊಂಡಿದೆ. ಇನ್ನುಳಿದ ಶೇ.23 ಪ್ರದೇಶವನ್ನು ಸೋಯಾ ಅವರೆ ಆವರಿಸಿಕೊಂಡಿದೆ.
ಹಿಂಗ್ಯಾಕಾತು?:
ಸೋಯಾ ಅವರೆಯನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರ್ಕಾರವೇ ನಿಗದಿ ಪಡಿಸಿದ ದರಕ್ಕೆ ದೃಢೀಕರಿಸಲ್ಪಟ್ಟ ಬೀಜಗಳನ್ನೇ ತಂದು ರೈತರು ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಬೆಳೆ ಹುಲುಸಾಗಿಯೇ ಬೆಳೆಯಿತು. ಆದರೆ ಸತತ ಮಳೆಯಾದಾಗ ಕೊಂಚ ಮಂಕಾದ ಸೋಯಾ ಬೆಳೆ ಮತ್ತೆ ಬಿರುಬಿಸಿಲಿಗೆ ಸಿಡಿದೆದ್ದು 2.5 ಅಡಿಯಷ್ಟು ಎತ್ತರಕ್ಕೆ ಬೆಳೆದು ಹುಲುಸಾಗಿ ಕಾಳಿನ ಗೊಂಚಲಿನ ಮಿಡಿ ಕಾಣಿಸಿಕೊಂಡಿತು. ಆದರೆ ಕಳೆದ 15 ದಿನಗಳಿಂದ ಇದ್ದಕ್ಕಿದ್ದಂತೆಯೇ ಸೋಯಾ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡು ಇಡೀ ಬೆಳೆಯೇ ತಪ್ಪಲು ಸುಟ್ಟುಕರುಕಲಾಗಿ ಹೊಲಕ್ಕೆ ಹೊಲವೇ ಒಣಗಿ ನಿಂತುಬಿಟ್ಟಿದೆ. ಸೋಯಾ ಅವರೆ ಪ್ರತಿ ಗಿಡದಲ್ಲಿನಕಾಳು ಜೊಪ್ಪೆಯಾಗಿದ್ದು, (ಬರೀ ಸಿಪ್ಪೆ ಮಾತ್ರ ಇದೆ. ಒಳಗಡೆ ಹುಲುಸಾದ ಕಾಳಿಲ್ಲ)ಜೊಳ್ಳು ಜೊಳ್ಳಾಗಿ ಬಿಟ್ಟಿದೆ. ಇದಕ್ಕೆ ಸರ್ಕಾರ ನೀಡಿದ ಕಳಪೆ ಬೀಜವೇ ಕಾರಣ ಎಂದು ರೈತರು ದೂರುತ್ತಿದ್ದಾರೆ.
ಬೆಳೆ ವಿಮೆ ಬರುವುದೇ?:
ಬೆಳೆಗೆ ತೀವ್ರ ಹಾನಿಯಾದಂತಾಗಿದ್ದು, ಇದು ವಾತಾವರಣದಲ್ಲಿನ ಅಧಿಕ ತೇವಾಂಶ ಮತ್ತು ಅಧಿಕ ಮಳೆ, ಅಧಿಕ ಬಿಸಿಲಿನ ಸಮಾಗಮದಿಂದ ಆಗಿದ್ದು, ಹವಾಮಾನ ಆಧಾರಿತ ಬೆಳೆವಿಮೆ ಅಡಿಯಲ್ಲಿ ರೈತರಿಗೆ ಬೆಳೆವಿಮೆ ಸಿಗಬೇಕಿದೆ. ಆದರೆ ಕಳೆದ ವರ್ಷ ಭತ್ತದ ಬೆಳೆಗೆ ಹವಾಮಾನ ವೈಪರಿತ್ಯವಾದರೂ ಈ ಭಾಗದ 10 ಸಾವಿರಕ್ಕೂ ಅಧಿಕ ರೈತರಿಗೆ ಇನ್ನೂ ಬೆಳೆವಿಮೆ ಹಣವೇ ಬಂದಿಲ್ಲ. ಹೀಗಾಗಿ ಇದರ ಬಗ್ಗೆಯೂ ರೈತರು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದಂತಾಗಿದೆ.
ಪರಿಹಾರ ಕೊಡುವವರು ಯಾರು?:
ಅತೀ ಮಳೆ ಮತ್ತು ಬೆಳೆ ಹಾನಿಯಾದಾಗ ಸರ್ಕಾರವೇ ಪರಿಹಾರ ನೀಡಬೇಕು. ಆದರೆ ಅಂದಾಜು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಸೋಯಾ ಅವರೆಗೆ ಬೆಂಕಿ ಬಿದ್ದಿದ್ದು, ಈವರೆಗೂ ಕೃಷಿ ಇಲಾಖೆಯಾಗಲಿ, ಈ ಭಾಗದ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಚಕಾರವೆತ್ತಿಲ್ಲ. ಎಲ್ಲರೂ ಇದೀಗ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವರೆ ಎಂದು ಕಾಯುತ್ತಿದ್ದಾರೆ ಅನ್ನದಾತರು.
ಕಳಪೆ ಬೀಜಕ್ಕೆ ಯಾರು ಹೊಣೆ?: ಕಳೆದ ವರ್ಷ ಹತ್ತಿ, ಗೋವಿನಜೋಳದ ಕಳಪೆ ಬೀಜಗಳ ಬಿಸಿ ತಟ್ಟಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಕೆಲವು ಖಾಸಗಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಈ ವರ್ಷ ಸರ್ಕಾರದ ಕೇಂದ್ರಗಳಲ್ಲಿ ಪಡೆದುಕೊಂಡ ಸೋಯಾ ಬೀಜಕ್ಕೆ ರೋಗ ಬಿದ್ದಿದ್ದರಿಂದ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮನೆಯಿಂದ ಬಿತ್ತನೆ ಮಾಡಿದ ಬೀಜಗಳು ಚೆನ್ನಾಗಿಯೇ ಹುಟ್ಟಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ಪಡೆದ ಬೀಜಗಳು ಮಾತ್ರ ಈ ರೀತಿಯಾಗಿವೆ. ಇನ್ನು ಯಾರನ್ನು ನಂಬುವುದು? ಎನ್ನುವ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.