ಕೀವ್: ರಷ್ಯಾದ ಮಿಲಿಟರಿ ಪಡೆಗಳು ಉಕ್ರೇನ್ ನ ಜಪೋರಿಝಿಯಾದಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಸರ್ಕಾರಿ ಮೂಲಗಳು ಶುಕ್ರವಾರ ತಿಳಿಸಿದೆ.
“ಕಾರ್ಯಾಚರಣೆ ಸಿಬ್ಬಂದಿಗಳು ವಿದ್ಯುತ್ ಘಟಕಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ” ಎಂದು ಉಕ್ರೇನಿಯನ್ ಪರಮಾಣು ತನಿಖಾಧಿಕಾರಿಯನ್ನು ಉಲ್ಲೇಖಿಸಿ ಇದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
ಕಾರ್ಯಾಚರಣೆಗಳು ಸುರಕ್ಷತಾ ಅಗತ್ಯತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಅದು ಹೇಳಿದೆ.
ಶುಕ್ರವಾರ ಮುಂಜಾನೆ ರಷ್ಯಾ ಪಡೆಗಳು ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿದೆ. ಉಕ್ರೇನಿಯನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಅವರ ಪ್ರಕಾರ, ಈ ಪರಮಾಣು ಕೇಂದ್ರವು ಸ್ಫೋಟಗೊಂಡರೆ ಅದು ಚೆರ್ನೋಬಿಲ್‌ಗಿಂತ 10 ಪಟ್ಟು ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.
ಇದನ್ನೂ ಓದಿ:ಕೀವ್ ನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು!
ಉಕ್ರೇನ್ ನ ಖಾರ್ಕಿವ್ ಮತ್ತು ಸುಮಿಯಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು ರಷ್ಯಾದ 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಪ್ರಕಟಿಸಿದ್ದಾರೆ.