Advertisement

ಅತ್ತ ಮಾತುಕತೆ, ಇತ್ತ ಭೀಕರತೆ; ವಸತಿ ಕಟ್ಟಡಗಳ ಮೇಲೆ ರಷ್ಯಾ ದಾಳಿ

01:38 AM Mar 16, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ಮತ್ತು ರಷ್ಯಾ ನಡುವೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗುತ್ತಿದ್ದಂತೆಯೇ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ರಷ್ಯಾ ಪಡೆಗಳು ಅಟ್ಟಹಾಸ ಗೈದಿವೆ. ಕೀವ್‌ನ ವಸತಿ ಪ್ರದೇಶಗಳನ್ನು ಗುರಿಯಾಸಿಕೊಂಡು ಮಂಗಳವಾರ ಬೆಳಗ್ಗೆಯಿಂದಲೇ ನಿರಂತರ ಶೆಲ್‌, ರಾಕೆಟ್‌, ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ.

Advertisement

ಒಬೊಲಾನ್‌ ಜಿಲ್ಲೆಯ ಅಪಾರ್ಟ್‌ಮೆಂಟ್‌ ಮೇಲೆ ರಷ್ಯಾ ಬೆಳ್ಳಂಬೆಳಗ್ಗೆಯೇ ವೈಮಾನಿಕ ದಾಳಿ ನಡೆಸಿದೆ. 15 ಅಂತಸ್ತಿನ ಅಪಾರ್ಟ್‌ಮೆಂಟ್‌ ಹೊತ್ತಿ ಉರಿದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಏಣಿಗಳ ಮೂಲಕ ನಿವಾಸಿಗಳನ್ನು ರಕ್ಷಿಸಲಾಗಿದೆ. ಆದರೂ ನಾಲ್ವರು ಮೃತಪಟ್ಟಿದ್ದಾರೆ. ಪ್ರದೇಶದ ಟಿವಿ ಟವರ್‌ ಮೇಲೆ ರಷ್ಯಾ ರಾಕೆಟ್‌ ಅಪ್ಪಳಿಸಿದ್ದರಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 19ಕ್ಕೇರಿದೆ. ಪೂರ್ವದ ನಿಪ್ರೋ ನಗರದ ಏರ್‌ಪೋರ್ಟ್‌ ಮೇಲೆಯೂ ಕ್ಷಿಪಣಿ ಅಪ್ಪಳಿಸಿದೆ.

ಪೂರ್ವ ಹಾಗೂ ಉತ್ತರ ಭಾಗದಿಂದ ಕೀವ್‌ ಅನ್ನು ರಷ್ಯಾ ಪಡೆಗಳು ಸುತ್ತುವರಿದಿವೆ. ಒಂದೇ ಸವನೆ ಶೆಲ್‌ಗ‌ಳು ತೂರಿ ಬಂದ ಕಾರಣ, ಭಾರೀ ಪ್ರಮಾಣದ ಸ್ಫೋಟದ ಸದ್ದು ಹಾಗೂ ಗಗನದೆತ್ತರಕ್ಕೆ ಎದ್ದ ಹೊಗೆಯು ನಾಗರಿಕರನ್ನು ಬೆಚ್ಚಿಬೀಳಿಸಿದೆ. ಸ್ಫೋಟದಿಂದಾಗಿ ಸಬ್‌ವೇ ಸ್ಟೇಶನ್‌ವೊಂದರ ಪ್ರವೇಶದ್ವಾರ ಹಾನಿಗೀಡಾಗಿದೆ. ಈ ಸ್ಟೇಶನ್‌ ಅನ್ನು ಬಾಂಬ್‌ ಶೆಲ್ಟರ್‌ ಆಗಿಯೂ ಬಳಸಲಾಗುತ್ತಿತ್ತು. ಕೀವ್‌ ನಗರದಲ್ಲಿ ರಷ್ಯಾದ ದಾಳಿಗೆ ಫಾಕ್ಸ್‌ ನ್ಯೂಸ್‌ ವಾಹಿನಿಯ ಛಾಯಾಗ್ರಾಹಕ ಸಾವನ್ನಪ್ಪಿದ್ದು, ವರದಿಗಾರನ ಸ್ಥಿತಿ ಗಂಭೀರವಾಗಿರುವುದಾಗಿ ಮಂಗಳವಾರ ವರದಿಯಾಗಿದೆ.

ಐರೋಪ್ಯ ನಾಯಕರ ಭೇಟಿ: ದಾಳಿಯ ನಡುವೆಯೂ ಐರೋಪ್ಯ ರಾಷ್ಟ್ರಗಳಾದ ಪೋಲೆಂಡ್‌, ಚೆಕ್‌ ಗಣರಾಜ್ಯ ಮತ್ತು ಸ್ಲೊವೇನಿಯಾ ನಾಯಕರು ಮಂಗಳವಾರ ಕೀವ್‌ಗೆ ಭೇಟಿ ನೀಡಿದ್ದಾರೆ. ಉಕ್ರೇನ್‌ ನಾಯಕತ್ವದೊಂದಿಗೆ ಮಾತುಕತೆ ನಡೆಸಿ, ಬೆಂಬಲ ಸೂಚಿಸಲೆಂದು ಇವರು ರಾಜಧಾನಿಗೆ ಆಗಮಿಸಿದ್ದಾರೆ.

ಯುಕೆ ಹೊಸ ನಿರ್ಬಂಧ: ಯುಕೆ ಸರಕಾರವು ಮಂಗಳವಾರ ರಷ್ಯಾ ಮೇಲೆ ಹೊಸ ನಿರ್ಬಂಧ ಹೇರಿದೆ. ಕಬ್ಬಿಣ, ಉಕ್ಕು, ತಾಮ್ರ, ಅಲ್ಯುಮಿನಿಯಂ, ಬೆಳ್ಳಿ, ಸೀಸ, ಕಬ್ಬಿಣದ ಅದಿರು, ಪಾನೀಯಗಳು ಸೇರಿದಂತೆ ರಷ್ಯಾದ ಸರಕುಗಳಿಗೆ ಹೆಚ್ಚುವರಿಯಾಗಿ ಶೇ.35ರಷ್ಟು ಆಮದು ಶುಲ್ಕವನ್ನು ವಿಧಿಸಿದೆ.

Advertisement

ಚೀನ ನಿರಾಕರಣೆ: ಉಕ್ರೇನ್‌ ಸಂಘರ್ಷದ ಕುರಿತ ನಿಲುವು ನಿಷ್ಪಕ್ಷ ಹಾಗೂ ರಚನಾತ್ಮಕವಾಗಿದೆ ಎಂದು ಚೀನ ಹೇಳಿದೆ. ರಷ್ಯಾಗೆ ಸೇನಾ ಸಲಕರಣೆಗಳನ್ನು ಪೂರೈಸಲು ಚೀನ ಮುಂದೆ ಬಂದಿದೆ ಎಂಬ ಅಮೆರಿಕದ ಆರೋಪವನ್ನೂ ಚೀನ ತಳ್ಳಿಹಾಕಿದೆ.

ಇನ್ನು 14 ದಿನ ಮಾತ್ರ
ಈ ನಡುವೆ, ರಷ್ಯಾ ಪಡೆಗಳು ಮುಂದಿನ ಕೇವಲ 10-14 ದಿನಗಳ ಕಾಲ ಮಾತ್ರ ಉಕ್ರೇನ್‌ನಲ್ಲಿ ಪೂರ್ಣಪ್ರಮಾಣದಲ್ಲಿ ಹೋರಾಟ ಮಾಡಲು ಸಾಧ್ಯ. ಅನಂತರ ಪುತಿನ್‌ ಪಡೆಗಳಿಗೆ ಈಗಾಗಲೇ ವಶಪಡಿಸಿಕೊಂಡಿರುವ ನಗರಗಳನ್ನು ಉಳಿಸಿಕೊಳ್ಳಲೂ ಸಾಧ್ಯವಾಗದು ಎಂದು ಯುಕೆ ರಕ್ಷಣ ಮೂಲಗಳು ಹೇಳಿವೆ. ರಷ್ಯಾದ ಸೇನಾ ಬಲ ಕುಗ್ಗುತ್ತಿದೆ. ಸೈನಿಕರ ಸಂಖ್ಯೆಯ ಜತೆಗೆ ಶಸ್ತ್ರಾಸ್ತ್ರಗಳು, ಹೆಲಿಕಾಪ್ಟರ್‌, ವಿಮಾನಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಯುದ್ಧ ಹೆಚ್ಚೆಂದರೆ 14 ದಿನಗಳ ಕಾಲ ಮುಂದುವರಿಯಬಹುದು. ಅನಂತರ ಉಕ್ರೇನ್‌ನ ಪ್ರತಿರೋಧಕ್ಕೆ ರಷ್ಯಾ ಸೋಲಲೇಬೇಕಾಗುತ್ತದೆ ಎಂದೂ ಯುಕೆ ಅಂದಾಜಿಸಿದೆ.

ನೇರಪ್ರಸಾರದ ವೇಳೆ ಅಡ್ಡ ಬಂದ ಮಹಿಳೆ!
ರಷ್ಯಾದ ಸರಕಾರಿ ಸ್ವಾಮ್ಯದ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ ನಡೆಯುತ್ತಿದ್ದಾಗಲೇ ಏಕಾಏಕಿ ಯುದ್ಧ ವಿರೋಧಿ ಹೋರಾಟಗಾರ್ತಿಯೊಬ್ಬರು “ಪೋಸ್ಟರ್‌’ ಹಿಡಿದು ನಿರೂಪಕಿಯ ಹಿಂದಿನಿಂದ ಬಂದ ಘಟನೆ ನಡೆದಿದೆ. ನಿರೂಪಕಿಯು ಸುದ್ದಿ ಓದುತ್ತಿರುವಂತೆಯೇ, ಹಿಂದಿನಿಂದ ಬಂದ ಮಹಿಳೆ “ಯುದ್ಧ ಬೇಡ. ರಷ್ಯಾದ ಮಾತನ್ನು ನಂಬಬೇಡಿ’ ಎಂದು ಬರೆದಿರುವ ಪೋಸ್ಟರ್‌ ಅನ್ನು ಪ್ರದರ್ಶಿಸಿದ್ದಾರೆ. ತತ್‌ಕ್ಷಣವೇ ನ್ಯೂಸ್‌ ಅನ್ನು ಅರ್ಧಕ್ಕೇ ಸ್ಥಗಿತಗೊಳಿಸಿ, ಬೇರೆ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ.

ಪ್ರಧಾನಿ ಸಂವಾದ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸು ಕರೆತರುವ ಕೆಲಸ ಮಾಡಿದ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಸಮುದಾಯ ಸಂಸ್ಥೆಗಳೊಂದಿಗೆ ಪ್ರಧಾನಿ ಮೋದಿ ಮಂಗಳವಾರ ವೀಡಿಯೋ ಸಂವಾದ ನಡೆಸಿದ್ದಾರೆ. ಆಪರೇಷನ್‌ ಗಂಗಾವನ್ನು ಯಶಸ್ವಿಯಾಗಿಸಲೆಂದು ಉಕ್ರೇನ್‌ಗೆ ತೆರಳಿದ್ದ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್‌ ರಿಜಿಜು ಮತ್ತು ವಿ.ಕೆ.ಸಿಂಗ್‌ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು.

ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಖಾರ್ಕಿವ್‌ನಲ್ಲಿ ಮೃತಪಟ್ಟ ಕರ್ನಾಟಕದ ನವೀನ್‌ ಶೇಖರಪ್ಪ ಅವರ ಮೃತದೇಹವನ್ನು ಸ್ವದೇಶಕ್ಕೆ ತರಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜೈಶಂಕರ್‌, “ನವೀನ್‌ ಪಾರ್ಥಿವ ಶರೀರವನ್ನು ತರಲು ಸರಕಾರ ಬದ್ಧವಾಗಿದೆ. ಅದಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾರೆ’ ಎಂದಿದ್ದಾರೆ. ಇದೇ ವೇಳೆ, “ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಅಲ್ಲಿಂದ ಹೊರಡುವಂತೆ ಕೇಂದ್ರ ಸರಕಾರ ಅಷ್ಟೊಂದು ವಿಳಂಬವಾಗಿ ಸೂಚಿಸಿದ್ದೇಕೆ? ಇತರ ದೇಶಗಳ ಜನರು ಯಾವುದೇ ಅಪಾಯ ಎದುರಿಸಲಿಲ್ಲ. ನಮ್ಮವರೇ ಹೆಚ್ಚಿನ ಅಪಾಯಕ್ಕೆ ಈಡಾಗಿದ್ದು ಹೇಗೆ’ ಎಂದೂ ಖರ್ಗೆ ಪ್ರಶ್ನಿಸಿದರು.

ಸಮರಾಂಗಣದಲ್ಲಿ
-ಉಕ್ರೇನ್‌-ರಷ್ಯಾ ನಡುವೆ ಮತ್ತೂಂದು ಸುತ್ತಿನ ಮಾತುಕತೆ ಆರಂಭ
-ಉಕ್ರೇನ್‌ನ ಚರ್ನೋಬಿಲ್‌ ಸ್ಥಾವರದಲ್ಲಿ ವಿದ್ಯುತ್‌ ಸರಬರಾಜು ಪುನರಾರಂಭ
-ಮಾರ್ಷಲ್‌ ಕಾನೂನನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸುವ ಮಸೂದೆ ಮಂಡಿಸಿದ ಉಕ್ರೇನ್‌ ಅಧ್ಯಕ್ಷ
-ಕೀವ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟ, ಹಲವು ಕಟ್ಟಡಗಳನ್ನು ಗುರಿಯಾಗಿಸಿ ದಾಳಿ; ಕಟ್ಟಡಗಳು ಬೆಂಕಿಗಾಹುತಿ
-ಉಕ್ರೇನ್‌ನ ಯುದ್ಧ ನಿರಾಶ್ರಿತರಿಗೆ 4 ಸಾವಿರ ವೀಸಾದ ಭರವಸೆ ಕೊಟ್ಟ ನ್ಯೂಜಿಲೆಂಡ್‌ ನಿಪ್ರೋ ವಿಮಾನ ನಿಲ್ದಾಣದ
ಮೇಲೆ ಅಪ್ಪಳಿಸಿದ ಶೆಲ್‌; ಭಾರೀ ಪ್ರಮಾಣದಲ್ಲಿ ಹಾನಿ
-ರಿವೆ°ಯ ಟಿವಿ ಟವರ್‌ ಮೇಲಿನ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೇರಿಕೆ

Advertisement

Udayavani is now on Telegram. Click here to join our channel and stay updated with the latest news.

Next