Advertisement
ಏನಿದು ವ್ಯಾಗ್ನರ್ ಪಡೆ?ಅಫ್ಘಾನಿಸ್ಥಾನದಲ್ಲಿನ ಯುದ್ಧದಲ್ಲಿ ರಷ್ಯಾವೇ ತಾಲಿಬಾನ್ ಅನ್ನು ಬೆಳೆಸಿದಂತೆ, ರಷ್ಯಾದಲ್ಲೇ ವ್ಲಾದಿಮಿರ್ ಪುತಿನ್ ಅವರ ಕೃಪೆಯಿಂದಲೇ ಹುಟ್ಟಿದ ಖಾಸಗಿ ಪಡೆ ಇದು. ನೇರವಾಗಿ ಸೇನೆ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಈ ಖಾಸಗಿ ಪಡೆ ಮಾಡುತ್ತದೆ. 2014ರಲ್ಲಿ ಹುಟ್ಟಿದ ಇದು, ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ರಷ್ಯಾದ ವಶಕ್ಕೆ ಸಿಗುವಂತೆ ಮಾಡಿತ್ತು. ವಿಚಿತ್ರವೆಂದರೆ ಇದರ ಬಹುತೇಕ ಸದಸ್ಯರು ಜೈಲಿನಲ್ಲಿ ಇದ್ದು ಬಂದವರು. ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ, ಉಕ್ರೇನ್ ಯುದ್ಧದಲ್ಲಿ 50 ಸಾವಿರ ವ್ಯಾಗ್ನರ್ ಪಡೆಯ ಸದಸ್ಯರು ಭಾಗವಹಿಸಿದ್ದಾರೆ. ಇದರಲ್ಲಿ 10 ಸಾವಿರ ಗುತ್ತಿಗೆ ಕಾರ್ಮಿಕರು ಮತ್ತು 40 ಸಾವಿರ ಅಪರಾಧಿಗಳು. ಇನ್ನೂ ಕೆಲವರು ಹೇಳುವ ಪ್ರಕಾರ, ಉಕ್ರೇನ್‌ನಲ್ಲಿ 20 ಸಾವಿರ ವ್ಯಾಗ್ನರ್ ಪಡೆಯ ಗುತ್ತಿಗೆ ಸೈನಿಕರಿದ್ದಾರೆ. ಇವರೆಲ್ಲರೂ ಜೈಲಿನಿಂದ ಬಿಡುಗಡೆಯಾದವರು.ಅಂದ ಹಾಗೆ, ವ್ಯಾಗ್ನರ್ ಗ್ರೂಪ್‌ನ ಕೇಂದ್ರ ಕಚೇರಿ ಕ್ರೆಸ್ನೋಡಾರ್ ಜಿಲ್ಲೆಯ ಮೋಲ್ಕಿನೋ ಎಂಬಲ್ಲಿದೆ. ಇಲ್ಲಿ ರಷ್ಯಾದ ವಿಶೇಷ ಉದ್ದೇಶಿತ ಬ್ರಿಗೇಡ್‌ನ 10ನೇ ಪಡೆ ಇದೆ. ಈ ಎರಡೂ ಒಟ್ಟಾಗಿ ನೆಲೆ ಮಾಡಿಕೊಂಡಿವೆ. ರಷ್ಯಾ ಸರಕಾರವು, ಈ ಪಡೆ ಜತೆ ತನಗೆ ನೇರ ಸಂಬಂಧ ಇಲ್ಲ ಎಂದು ಹೇಳಿದರೂ, ಮಿಲಿಟರಿ ಜತೆ ಸಂಪರ್ಕ ಇರಿಸಿಕೊಂಡಿರುವುದು ಈ ಮೂಲಕ ನೋಡಬಹುದಾಗಿದೆ. ಜತೆಗೆ, ಈ ಪಡೆಗೆ ಬೇರೆ ದೇಶಗಳಿಗೆ ತೆರಳಲು, ರಷ್ಯಾ ಸೇನೆಯೇ ಪಾಸ್‌ಪೋರ್ಟ್ ವ್ಯವಸ್ಥೆ ಮಾಡುತ್ತದೆ.
ರಷ್ಯಾದ ಅತ್ಯಂತ ಅಪಾಯಕಾರಿ ಪಡೆಯಾಗಿರುವ ಈ ವ್ಯಾಗ್ನರ್‌ನ ಸ್ಥಾಪಕ ಡಿಮಿಟ್ರಿ ಉಟಿRನ್. ಈತ ರಷ್ಯಾದ ಸೇನಾ ಗುಪ್ತಚರ ಪಡೆಯ ನಿವೃತ್ತ ಅಧಿಕಾರಿ, ವಿಶೇಷ ಪಡೆಗಳ ಮಾಜಿ ಅಧಿಕಾರಿ ಹಾಗೂ ಚೆಚೆನ್ಯಾ ಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕ. ಅಲ್ಲದೆ ವ್ಯಾಗ್ನರ್ ಪಡೆಗೆ ಹೆಸರು ಬಂದಿದ್ದೇ ರೋಚಕ. ಇದನ್ನು ಇಟ್ಟಿದ್ದು ಉಟಿRನ್. ಅಡಾಲ್ಫ್ ಹಿಟ್ಲರ್‌ನ ನೆಚ್ಚಿನ ಸಂಗೀತ ಸಂಯೋಜಕ ಆಗಿದ್ದ ರಿಚರ್ಡ್ ವ್ಯಾಗ್ನರ್‌ನ ನೆನಪಿನಲ್ಲಿ ಈ ಪಡೆಗೆ ವ್ಯಾಗ್ನರ್ ಎಂಬ ಹೆಸರಿಡಲಾಯಿತಂತೆ. ಈಗ ಯಾರು?
ಈಗ ವ್ಯಾಗ್ನರ್ ಪಡೆಯ ಮುಖ್ಯಸ್ಥ, ಪುತಿನ್ ಅವರ ಬಾಣಸಿಗ ಎಂದೇ ಪ್ರಸಿದ್ಧಿಯಾಗಿರುವ ಯವೆYನಿ ಪ್ರಿಗೋಝಿನ್. ವಿಚಿತ್ರವೆಂದರೆ ಈತ ಆಗರ್ಭ ಶ್ರೀಮಂತ. ಆದರೆ ಈತ ಉದ್ಯಮಿಯಾಗುವ ಮುನ್ನ 10 ವರ್ಷಗಳ ಕಾಲ ಜೈಲಿನಲ್ಲಿದ್ದ. 1980ರಲ್ಲಿ ಕಳ್ಳತನ, ದರೋಡೆ ಮಾಡುತ್ತಿದ್ದ ಆರೋಪದ ಮೇಲೆ ಈತನನ್ನು 13 ವರ್ಷಗಳ ಶಿಕ್ಷೆ ವಿಧಿಸಿ ಜೈಲಿಗೆ ತಳ್ಳಲಾಗಿತ್ತು. ಆದರೆ 1990ರಲ್ಲಿ ಸೋವಿಯತ್ ಒಕ್ಕೂಟ ಕುಸಿತ ಕಂಡ ಅನಂತರ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬದಲಾಗಿ ಹೊರಬಂದ ಈತ ಸೆಂಟ್ ಪೀಟರ್‌ಬರ್ಗ್‌ನಲ್ಲಿ ಹಾಟ್‌ಡಾಗ್ ಖಾದ್ಯ ಮಾರಾಟ ಮಾಡಲು ಶುರು ಮಾಡಿದ್ದ. ಬಳಿಕ ದೊಡ್ಡ ಪ್ರಮಾಣದ ಉದ್ಯಮ ಮಾಡಬೇಕು ಎಂಬ ಕನಸಿನೊಂದಿಗೆ ಹಲವಾರು ರೆಸ್ಟೋರೆಂಟ್‌ಗಳು, ಸೂಪರ್‌ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಿದ. 1995ರಲ್ಲಿ ತಾನೇ ರೆಸ್ಟೋರೆಂಟ್ ಮತ್ತು
ಕೇಟರಿಂಗ್ ಸರ್ವೀಸ್‌ವೊಂದನ್ನು ಶುರು ಮಾಡಿದ. ಸೆಂಟ್ ಪೀಟರ್‌ಬರ್ಗ್‌ನ ಪ್ರಖ್ಯಾತ ಕಾಂಕರ್ಡ್ ಕೇಟರಿಂಗ್ ಎಂಬುದು ಇದರ ಹೆಸರು. ಸೋವಿಯತ್ ಒಕ್ಕೂಟ ಕುಸಿತದ ಬಳಿಕ, ಅಲ್ಲಿನ ಜನ ಕೂಡ ಶ್ರೀಮಂತಿಕೆಗೆ ಮಾರು ಹೋದ ಪರಿಣಾಮ, ಈತನ ಕೇಟರಿಂಗ್ ಚೆನ್ನಾಗಿ ನಡೆಯಿತು. ಕೆಲವೇ ದಿನಗಳಲ್ಲಿ ರಷ್ಯಾದ ಆಗರ್ಭ ಶ್ರೀಮಂತನಾದ. ಅಷ್ಟೇ ಅಲ್ಲ, ಅನಂತರದಲ್ಲಿ ಆಳುವ ವರ್ಗದ ಪರಿಚಯ ಮಾಡಿಕೊಂಡ. ಮಿಲಿಟರಿ ಸೇರಿದಂತೆ ಸರಕಾರದ ಕಾರ್ಯಕ್ರಮಗಳಿಗೆ ಈತನೇ ಕೇಟರಿಂಗ್ ಸೇವೆ ಒದಗಿಸುವಷ್ಟು ಹತ್ತಿರದವನಾದ. ಇದರ ಜತೆಗೇ ಅಧಿಕಾರಸ್ಥರ ನಡುವೆ ಡೀಲ್ ಮಾಡುವುದು ಹೇಗೆ ಎಂಬುದನ್ನೂ ತಿಳಿದುಕೊಂಡ.
Related Articles
ಉಕ್ರೇನ್ ವಶದಲ್ಲಿದ್ದ ಕ್ರಿಮಿಯಾವನ್ನು ರಷ್ಯಾ 2014ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು. ಈ ದಾಳಿ ನಡೆಸಿದ್ದೇ ವ್ಯಾಗ್ನರ್ ಪಡೆ. ಇದು ಆರಂಭವಷ್ಟೇ. ಅನಂತರದಲ್ಲಿ ಪೂರ್ವ ಉಕ್ರೇನ್‌ನ ಡಾನ್‌ಬಾಸ್ ವಶಪಡಿಸಿಕೊಳ್ಳುವಲ್ಲಿಯೂ ವ್ಯಾಗ್ನರ್ ಪಡೆಯ ಶ್ರಮ ಹೆಚ್ಚು ಇತ್ತು. 2014 ಮತ್ತು 2015ರಲ್ಲಿ ಡಾನ್‌ಟೆಕ್ ಮತ್ತು ಲುಹಾನ್ಸ್$R ಪ್ರಾಂತಗಳು ಉಕ್ರೇನ್‌ನಿಂದ ಬೇರೆಯಾಗಿ ದೇಶಗಳಾಗಿ ಘೋಷಣೆ ಮಾಡಿಕೊಂಡವು. ಈ ಸಂದರ್ಭದಲ್ಲಿ ಈ ಎರಡು ಪ್ರಾಂತಗಳ ಬೆನ್ನಿಗೆ ನಿಂತಿದ್ದು ಇದೇ ವ್ಯಾಗ್ನರ್ ಪಡೆ. ಈ ಪಡೆಯ ಯಶಸ್ಸು ಪುತಿನ್ ಅವರಿಗೆ ಬೇರೊಂದು ಯೋಜನೆಗೂ ಕಾರಣವಾಯಿತು. ಹೀಗಾಗಿ ಉಕ್ರೇನ್ ಹೊರತಾಗಿ ಜಗತ್ತಿನ ಬೇರೆ ಬೇರೆ ಕಡೆಗಳಿಗೂ ಕಳುಹಿಸಲು ಚಿಂತನೆ ನಡೆಸಿದರು.
Advertisement
ಸಿರಿಯಾ, ಸೂಡಾನ್, ಲಿಬಿಯಾಸಿರಿಯಾದ ಆಂತರಿಕ ಘರ್ಷಣೆ ವೇಳೆ ಅಲ್ಲಿನ ಅಧ್ಯಕ್ಷ ಬಷರ್ ಅಲ್ ಅಸದ್‌ಗೆ ಪುತಿನ್ ಬೆಂಬಲ ನೀಡಿದರು. ಆಗ ಇದೇ ವ್ಯಾಗ್ನರ್ ಪಡೆ, ಅಲ್ಲಿನ ಬಂಡುಕೋರರ ವಿರುದ್ಧ ಹೋರಾಟ ನಡೆಸಿತ್ತು. ಈ ಸಂದರ್ಭದಲ್ಲಿ ವ್ಯಾಗ್ನರ್ ಪಡೆಯ ಕ್ರೌರ್ಯದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿತ್ತು. ಸಿರಿಯಾದ ನಾಗರಿಕರನ್ನು ಈ ಪಡೆ ಬಹಿರಂಗವಾಗಿಯೇ ತಲೆ ಕತ್ತರಿಸುವ ವೀಡಿಯೋಗಳು ಬಹಿರಂಗವಾಗಿದ್ದವು. ಇದಾದ ಮೇಲೆ ಸೂಡಾನ್ ಮತ್ತು ಲಿಬಿಯಾದ ನಾಗರಿಕ ಸಂಘರ್ಷದ ವೇಳೆಯಲ್ಲೂ ಅಲ್ಲಿನ ಸರಕಾರಗಳ ಬೆಂಬಲಕ್ಕೆಂದು ವ್ಯಾಗ್ನರ್ ಪಡೆ ಹೋಗಿತ್ತು. ಈಗ್ಯಾಕೆ ಸಿಟ್ಟು?
ಈಗಲೂ ವ್ಯಾಗ್ನರ್ ಪಡೆಯ ಮುಖ್ಯಸ್ಥ ಯೆವೆYನಿ ಪ್ರಿಗೋಝಿನ್‌ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮೇಲೆ ಕೋಪವಿಲ್ಲ. ಆದರೆ ಅಲ್ಲಿನ ಸೇನಾ ನೇತೃತ್ವದ ಮೇಲೆ ಸಿಟ್ಟಿದೆ. ಉಕ್ರೇನ್‌ಗೆ ಯುದ್ಧಕ್ಕೆಂದು ಕಳುಹಿಸಿ, ಸರಿಯಾಗಿ ಶಸ್ತ್ರಾಸ್ತ್ರ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಿಲ್ಲ ಎಂಬ ಆಕ್ರೋಶವಿದೆ. ಹೀಗಾಗಿಯೇ ಸಿಟ್ಟು ಹೊರಬಿದ್ದಿದೆ. ಈಗಿನ ಕ್ರಾಂತಿ ಘೋಷಣೆ ವೇಳೆಯೂ ಆತ ಅದನ್ನೇ ಹೇಳಿಕೊಂಡಿದ್ದಾನೆ. ಅಲ್ಲದೆ ಕೆಲವು ತಿಂಗಳುಗಳಿಂದ ವ್ಯಾಗ್ನರ್ ಪಡೆ, ರಷ್ಯಾದ ಸೇನಾ ಅಧಿಕಾರಿಗಳ ವಿರುದ್ಧ ಸಿಟ್ಟು ತೋರಿಸುತ್ತಲೇ ಇದೆ. ಜತೆಗೆ ಉದ್ದೇಶಪೂರ್ವಕವಾಗಿಯೇ ವ್ಯಾಗ್ನರ್ ಪಡೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಸದ್ಯ ರಷ್ಯಾದ ದಕ್ಷಿಣ ಭಾಗದಲ್ಲಿರುವ ರೋಸ್ತೋವ್ ಆನ್ ಡಾನ್ ಎಂಬ ನಗರವನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇಲ್ಲಿದ್ದ ಮಿಲಿಟರಿ ನೆಲೆಯೂ ವ್ಯಾಗ್ನರ್ ಪಡೆ ಪಾಲಾಗಿದೆ. ಇಲ್ಲಿಂದಲೇ ಮಾಸ್ಕೋಗೆ ದಂಡಯಾತ್ರೆ ಆರಂಭಿಸಲಾಗಿದೆ. ಜತೆಗೆ ತನ್ನ ಜತೆ 25 ಸಾವಿರ ಪಡೆ ಇದ್ದು ಇವರು ಸಾಯಲೂ ಸಿದ್ಧರಿದ್ದಾರೆ ಎಂದೂ ಹೇಳಿಕೊಂಡಿದ್ದಾನೆ ಯೆವೆYನಿ. ವ್ಯಾಗ್ನರ್ ಪಡೆಯ ಕ್ರೌರ್ಯಗಳು
ವ್ಯಾಗ್ನರ್ ಪಡೆಯನ್ನು ಕ್ರೌರ್ಯದ ಪಡೆ ಎಂದೇ ಕರೆಯಲಾಗುತ್ತದೆ. ಇವರು ನುರಿತ ಸೈನಿಕರಲ್ಲ. ಬದಲಾಗಿ ಜೈಲಿನಿಂದ ಬಂದವರಾಗಿರುವುದರಿಂದ ಇವರ ಕಡೆಯಿಂದ ಮಾನವ ಹಕ್ಕುಗಳ ಕುರಿತಾಗಿ ಅಷ್ಟೇನೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿಯೇ, ಇವರು ಕಾಲಿಟ್ಟ ಸಿರಿಯಾ, ಲಿಬಿಯಾ, ಸೂಡಾನ್ ಮತ್ತು ಉಕ್ರೇನ್‌ನಲ್ಲಿ ಸಾಮೂಹಿಕ ನರಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಜತೆಗೆ ನಾಗರಿಕರಿಗೆ ಹಿಂಸಾತ್ಮಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಜಾಗತಿಕ ಮಟ್ಟದ ಮಾನವ ಹಕ್ಕುಗಳ ಆಯೋಗಗಳು ಆರೋಪಿಸಿವೆ. ಮುಂದೇನು?
ರಷ್ಯಾಕ್ಕೆ ಇದು ಹಿನ್ನಡೆಯೇ? ತಜ್ಞರ ಪ್ರಕಾರ ಇಲ್ಲ. ಆದರೆ ಸದ್ಯಕ್ಕೆ ಕೊಂಚ ಹಿನ್ನಡೆಯಾಗಬಹುದು. ಉಕ್ರೇನ್ ವಿರುದ್ಧ ಯುದ್ಧ ಸಾರಿದ ಪುತಿನ್ ನಿರ್ಧಾರದ ಬಗ್ಗೆ ರಷ್ಯನ್ನರಲ್ಲಿ ಆಕ್ರೋಶವಿದೆ. ಒಂದು ವೇಳೆ ಈ ಆಕ್ರೋಶ ಸಿಟ್ಟಾಗಿ ಮಾರ್ಪಟ್ಟು, ಯವೆYನಿ ಜತೆ ಜನರೂ ಕೈಜೋಡಿಸಿದರೆ ಮತ್ತೂಂದು ರಷ್ಯಾ ಕ್ರಾಂತಿಯೇ ಆಗಬಹುದು. ಆಗ ಉಕ್ರೇನ್ ವಿರುದ್ಧದ ಯುದ್ಧವೂ ನಿಲ್ಲಬಹುದು. ಹೀಗಾಗಿಯೇ ಪುತಿನ್, ಈಗ ಅಮೆರಿಕವೂ ಸೇರಿದಂತೆ ಇಡೀ ಐರೋಪ್ಯ ಒಕ್ಕೂಟ ತನ್ನ ವಿರುದ್ಧ ನಿಂತಿರುವಾಗ ಯವೆYನಿಯ ಈ ನಿರ್ಧಾರ ದೇಶದ್ರೋಹದಂತಿದೆ. ಈ ಪಡೆ ಬೆನ್ನಿಗೆ ಚೂರಿ ಇರಿದಿದೆ ಎಂದಿದ್ದಾರೆ. ಖಾಸಗಿ ಸೇನೆಗಳು ಹೊಸತೇ?}
ರಷ್ಯಾದಲ್ಲಿ ಖಾಸಗಿ ಸೇನೆಗಳು ಹೊಸತೇನಲ್ಲ. ಹಿಂದಿನಿಂದಲೂ ಇವೆ. ಆದರೆ ಸೋವಿಯತ್ ಒಕ್ಕೂಟ ಛಿದ್ರವಾದ ಮೇಲೆ ಇಂಥ ಖಾಸಗಿ ಸೇನೆಗಳು ಹುಟ್ಟಿಕೊಂಡವು. ಇವುಗಳು, ಕಟ್ಟಡಗಳು, ಅತಿಗಣ್ಯರ ಭದ್ರತೆಯಂಥ ವಿಷಯಗಳನ್ನು ನೋಡಿಕೊಳ್ಳುತ್ತಿವೆ. ಆದರೆ ಈ ಖಾಸಗಿ ಸೇನೆಗಳಿಗೆ ಕಾನೂನಿನ ಅನುಮತಿ ಇಲ್ಲ. ಆದರೂ ದೊಡ್ಡ ದೊಡ್ಡ ನಾಯಕರ ಕೃಪೆಯಿಂದ ಕಾರ್ಯಾಚರಣೆ ಮಾಡುತ್ತಿವೆ. 2014ರ ಬಳಿಕ ಹುಟ್ಟಿಕೊಂಡಿದ್ದೇ ವ್ಯಾಗ್ನರ್ ಪಿಎಂಸಿ ಸೇನೆ. ಪ್ರಮುಖ ನಾಯಕರ ಭೋಜನ ಕೂಟಕ್ಕೂ ಈತನದ್ದೇ ಕೇಟರಿಂಗ್
ಪುತಿನ್‌ಗೆ ಎಷ್ಟು ಹತ್ತಿರದವನಾದ ಎಂದರೆ, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಪ್ರಿನ್ಸ್ ಚಾರ್ಲ್ಸ್ರಂಥ ದೊಡ್ಡ ನಾಯಕರು ಬಂದಾಗಲೂ, ಈತನದ್ದೇ ಕೇಟರಿಂಗ್ ಸೇವೆ. ಮುಂದಿನ ದಿನಗಳಲ್ಲಿ ಸರಕಾರದ ಹಲವಾರು ಒಪ್ಪಂದಗಳನ್ನೂ ಈತನೇ ಪಡೆಯುತ್ತಿದ್ದ. ದಿಢೀರನೇ 2014ರಲ್ಲಿ ಈತ ತನ್ನ ಕೇಟರಿಂಗ್ ಸೇವೆ ಬಿಟ್ಟು, ಖಾಸಗಿ ಸೇನೆ ಮುನ್ನಡೆಸಿದ. ಇದು ಪುತಿನ್ ಅವರ ಸೇವೆಗಾಗಿಯೇ ಇರುವುದು ಎಂಬುದು ವಿಶೇಷ. ಅಮೆರಿಕ ಚುನಾವಣೆಯಲ್ಲಿ ಮಧ್ಯಪ್ರವೇಶ
ವ್ಯಾಗ್ನರ್ ಪಡೆ ಕೇವಲ ಸಶಸ್ತ್ರ ದಾಳಿ ಮಾಡುವುದಕ್ಕಷ್ಟೇ ಪುತಿನ್‌ಗೆ ನೆರವು ನೀಡಿಲ್ಲ. 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆಯಲ್ಲೂ ಮಧ್ಯಪ್ರವೇಶ ಮಾಡಿದ ಆರೋಪವಿದೆ. ಅಂದರೆ ಡೊನಾಲ್ಡ್ ಟ್ರಂಪ್‌ಗೆ ನೆರವಾಗುವ ನಿಟ್ಟಿನಲ್ಲಿ ಈ ವ್ಯಾಗ್ನರ್ ಪಡೆಯು ನಕಲಿ ಫೇಸ್‌ಬುಕ್ ಮತ್ತು ಟ್ವಿಟರ್ ಪ್ರೊಫೈಲ್‌ಗಳನ್ನು ಮಾಡಿ, ಟ್ರಂಪ್ ಪರ ಪ್ರಚಾರ ನಡೆಸಿದ್ದವು. ಅಲ್ಲದೆ ಇದೇ ವ್ಯಾಗ್ನರ್ ಗ್ರೂಪ್, ಈ ಮಧ್ಯಪ್ರವೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿತ್ತು ಬೇರೆ. ಭಾರತದ ಮೇಲೇನು ಪರಿಣಾಮ?
ಸದ್ಯಕ್ಕೆ ಊಹೆ ಮಾಡುವುದು ಕಷ್ಟ. ಆದರೂ ವ್ಯಾಗ್ನರ್ ಪಡೆಯ ಕೈ ಮೇಲಾದರೆ, ತೈಲದ ವಿಚಾರದಲ್ಲಿ ಒಂದಷ್ಟು ಸಮಸ್ಯೆ ತಲೆದೋರಬಹುದು. ಸದ್ಯ ಯೆವೆYನಿ, ರೋಸ್ತೋವ್‌ನಿಂದ ಮಾಸ್ಕೋದತ್ತ ತನ್ನ ಪಡೆಯೊಂದಿಗೆ ಹೊರಟಿದ್ದಾನೆ. ಮಧ್ಯದಲ್ಲೇ ರಷ್ಯಾ ಸೇನೆ ಮತ್ತು ವ್ಯಾಗ್ನರ್ ಪಡೆ ನಡುವಿನ ಬಿರುಸಿನ ಕಾಳಗವೂ ನಡೆಯುತ್ತಿದೆ. ಇಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ. ಮೊದಲೇ ಹೇಳಿದ ಹಾಗೆ ವ್ಯಾಗ್ನರ್ ಪಡೆ ಕೈ ಮೇಲಾದರೆ, ಭಾರತಕ್ಕೆ ಬರುತ್ತಿರುವ ಅಗ್ಗದ ಇಂಧನ ತಪ್ಪಬಹುದು. ಭಾರತದಲ್ಲಿ ಮತ್ತೆ ತೈಲ ಬಿಕ್ಕಟ್ಟು ಸೃಷ್ಟಿಯಾಗಬಹುದು. -ಸೋಮಶೇಖರ ಸಿ.ಜೆ.