ಬೇರೂತ್ : ರಶ್ಯದ ಸೇನಾ ಸರಕು ಸಾಗಣೆ ವಿಮಾನವೊಂದು ಸಿರಿಯದಲ್ಲಿನ ವಾಯು ನೆಲೆ ಸಮೀಪ ಪತನಗೊಂಡು ಅದರೊಳಗಿದ್ದ ಎಲ್ಲ 39 ಮಂದಿ ರಶ್ಯ ಸೇವಾ ಸಿಬಂದಿಗಳು ಮೃತಪಟ್ಟ ದುರ್ಘಟನೆ ವರದಿಯಾಗಿದೆ. ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಶ್ಯಕ್ಕೆ ಇದು ಭಾರೀ ದೊಡ್ಡ ಹೊಡೆತ ಮತ್ತು ಹಿನ್ನಡೆ ಎಂದು ತಿಳಿಯಲಾಗಿದೆ.
ವಿಮಾನ ಪತನಗೊಂಡೊಡನೆಯೇ ರಶ್ಯದ ಸೇನೆ “ನಮ್ಮ ವಿಮಾನವನ್ನು ಹೊಡೆದುರುಳಿಸಲಾಗಿಲ್ಲ; ಅದು ತಾಂತ್ರಿಕ ಪ್ರಮಾದದಿಂದ ಪತನಗೊಂಡಿದೆ’ ಎಂದು ಹೇಳಿಕೊಂಡಿದೆ.
ಈ ನಡುವೆ ಬಂಡುಕೋರರ ವಶದಲ್ಲಿರುವ ಡಮಾಸ್ಕಸ್ ಪೂರ್ವ ಹೊರವಲಯದಲ್ಲಿನ ನಡೆಸಲಾಗಿರುವ ಶೆಲ್ಲಿಂಗ್‌ಗೆ ಹಲವು ಡಜನ್ ಮಂದಿ ಕಳೆದ 24 ತಾಸುಗಳಲ್ಲಿ ಬಲಿಯಾಗಿರುವುದಾಗಿ ವರದಿಯಾಗಿದೆ.
ರಶ್ಯ ಬೆಂಬಲಿತ ಅಧ್ಯಕ್ಷ ಬಶರ್ ಅಸಾದ್ ಸರಕಾರ ರಶ್ಯನ್ ಸೇನೆಯ ಬೆಂಗಾವಲಿನಲ್ಲಿ ಬಂಡುಕೋರರ ತಾಣಗಳ ಮೇಲೆ ಶೆಲ್ ದಾಳಿ ಮುಂದುವರಿಸಿದೆ.
ಇದೇ ವೇಳೆ ಮಾನವ ಹಕ್ಕು ಸಂಘಟನೆಗಳ ಅಂತಾರಾಷ್ಟ್ರೀಯ ಸೇವಾ ಕಾರ್ಯಕರ್ತರು ಬಾಂಬ್ ದಾಳಿಯ ಪರಿಣಾಮವಾಗಿ ಧರಾಶಾಯಿಯಾಗಿರುವ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿಕೊಂಡವರನ್ನು ಪಾರುಗೊಳಿಸುವ, ಕಳೆದ ಹದಿನೈದು ದಿನಗಳಿಂದ ಸೂರ್ಯನ ಬೆಳಕನ್ನೇ ಕಾಣದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ನಡೆಸುತ್ತಿದ್ದಾರೆ.