Advertisement

ರಷ್ಯಾ-ಉಕ್ರೇನ್‌ ಸಮರ ಇದುವರೆಗೆ…

10:44 AM Mar 14, 2022 | Team Udayavani |

ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಸಾರಿ 17 ದಿನಗಳು ಕಳೆದುವು. ಈ ಅವಧಿಯಲ್ಲಿ ಲಕ್ಷಾಂತರ ಮಂದಿ ಉಕ್ರೇನ್‌ ತೊರೆದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ. ಒಂದೆಡೆಯಿಂದ ಸಂಧಾನ ಪ್ರಕ್ರಿಯೆಗಳು ಮುಂದುವರಿದಿದ್ದರೂ ರಷ್ಯಾ ಮಾತ್ರ ಉಕ್ರೇನ್‌ ಮೇಲಣ ಆಕ್ರಮಣವನ್ನು ಇನ್ನಷ್ಟು ತೀವ್ರಗೊಳಿಸಿದೆ. ರಷ್ಯಾ ಪಡೆಗಳ ದಾಳಿಗೆ ಈಗ ಉಕ್ರೇನ್‌ನ ಪ್ರಮುಖ ನಗರಗಳು, ಜನವಸತಿ ಪ್ರದೇಶಗಳು, ಆಸ್ಪತ್ರೆಗಳು ಕೂಡ ಗುರಿಯಾಗುತ್ತಿದ್ದು ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಉಕ್ರೇನ್‌ ಸೇನೆ ಕೂಡ ರಷ್ಯಾ ಪಡೆಗಳ ಮೇಲೆ ಪ್ರತಿದಾಳಿ ನಡೆಸುತ್ತಿದೆ. ಯುದ್ಧದಲ್ಲಿ ನಿರತವಾಗಿರುವ ಎರಡೂ ರಾಷ್ಟ್ರಗಳು ಸಾವು-ನೋವು, ಹಾನಿ, ನಷ್ಟದ ಬಗೆಗೆ ತಮ್ಮದೇ ಆದ ಅಂಕಿಅಂಶಗಳನ್ನು ನೀಡುತ್ತ ಬಂದಿದ್ದರೆ ವಿಶ್ವಸಂಸ್ಥೆ, ವಿದೇಶಗಳು ಮತ್ತು ಕೆಲವೊಂದು ಸ್ವಯಂಸೇವಾ ಸಂಸ್ಥೆಗಳು ಬೇರೆಯದೇ ಆದ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿವೆ. ಈವರೆಗೆ ರಷ್ಯಾ-ಉಕ್ರೇನ್‌ ಸಮರದಲ್ಲಾಗಿರುವ ಸಾವು-ನೋವು, ನಷ್ಟ, ಪರಿಣಾಮದ ಕುರಿತಂತೆ ವಿವಿಧ ದೇಶಗಳು, ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ನೀಡಿರುವ ಇತ್ತೀಚಿನ ಅಂಕಿಅಂಶಗಳ ಚಿತ್ರಣ ಇಲ್ಲಿದೆ.

Advertisement

ವಿಶ್ವಸಂಸ್ಥೆ ವರದಿ
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಮಾರ್ಚ್‌ 10ರ ವರೆಗೆ ಉಕ್ರೇನ್‌ನಲ್ಲಿ 549 ನಾಗರಿಕರು ಸಾವನ್ನಪ್ಪಿದ್ದರೆ 957 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ 26 ಮಂದಿ ಮಕ್ಕಳೂ ಸೇರಿದ್ದಾರೆ. ಆದರೆ ಸಾವು-ನೋವಿನ ಸಂಖ್ಯೆ ಇನ್ನೂ ಅಧಿಕವಾಗಿರುವ ಸಾಧ್ಯತೆ ಇದೆ. ದೊನೆಸ್ಕ್ ಮತ್ತು ಲುಹಾನ್ಸ್‌$R ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿದ್ದು ಈವರೆಗೆ 123 ಮಂದಿ ಸಾವನ್ನಪ್ಪಿದ್ದರೆ 485 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಮೆರಿಕದ ಸೇನೆಯ ಅಂದಾಜಿನ ಪ್ರಕಾರ ಯುದ್ಧಾರಂಭದ ಬಳಿಕ 2,000-4,000 ಉಕ್ರೇನಿಯನ್‌ ಸಶಸ್ತ್ರ ಪಡೆಯ ಯೋಧರು, ರಾಷ್ಟ್ರೀಯ ರಕ್ಷಣ ಪಡೆಯ ಸಿಬಂದಿ, ಸ್ವಯಂ ಸೇವಾ ಪಡೆಯ ಸಿಬಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಇದೇ ವೇಳೆ ರಷ್ಯಾ ಸೇನೆಯ 5,000-6,000 ಯೋಧರು ಹತ್ಯೆಗೀಡಾಗಿದ್ದಾರೆ.

ಆದರೆ ಉಕ್ರೇನಿಯನ್‌ ಸೇನೆಯ ಹೇಳಿಕೆಯ ಪ್ರಕಾರ ಯುದ್ಧ ಆರಂಭಗೊಂಡಾಗಿನಿಂದ ರಷ್ಯಾ ಸೇನೆಯ 12,000 ಯೋಧರು ಹತರಾಗಿದ್ದಾರೆ.

ಯುದ್ಧ ನಿರಾಶ್ರಿತರು
ಫೆ. 24ರಂದು ಉಕ್ರೇನ್‌ ಮೇಲೆ ರಷ್ಯಾ ಸೇನೆ ಆಕ್ರಮಣ ಮಾಡಿದ ಬಳಿಕ ಉಕ್ರೇನ್‌ನಿಂದ 25 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿ ವಿದೇಶಗಳಿಗೆ ಪರಾರಿಯಾಗಿದ್ದಾರೆ. ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 15ಲಕ್ಷಕ್ಕೂ ಅಧಿಕ ಮಂದಿ ನೆರೆಯ ರಾಷ್ಟ್ರ ಪೋಲೆಂಡ್‌ನ‌ಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದಂತೆ ಹಂಗೇರಿ, ಸ್ಲೊವಾಕಿಯಾ ಮತ್ತು ಮಾಲ್ಡೋವಾದಲ್ಲೂ ಉಕ್ರೇನ್‌ನ ಯುದ್ಧ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ (ಯುಎನ್‌ಎಚ್‌ಆರ್‌ಸಿ) ತನ್ನ ವರದಿಯಲ್ಲಿ ತಿಳಿಸಿದೆ.

Advertisement

ನಿರಾಶ್ರಿತರ ಕೇಂದ್ರ
ರಷ್ಯಾ ಸೇನೆ ಆಕ್ರಮಣ ಆರಂಭಿಸಿದ ದಿನವೇ ದೇಶದಲ್ಲಿ 9 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪೋಲೆಂಡ್‌ನ‌ ಆಂತರಿಕ ಸಚಿವ ಮಾರಿಸ್‌j ಕಮಿನ್‌ಸ್ಕಿ ಘೋಷಿಸಿದ್ದರು. ಅದರಂತೆ ಪಶ್ಚಿಮ ವಾರ್ಸಾವ್‌ನ ಬಸ್‌ ನಿಲ್ದಾಣದಲ್ಲಿ ಮೊದಲ ನಿರಾಶ್ರಿತರ ಕೇಂದ್ರವನ್ನು ತೆರೆಯಲಾಗಿತ್ತು. ಈ ಕೇಂದ್ರದ ಮೂಲಕ ನಿರಾಶ್ರಿತರಿಗೆ ಮಾಹಿತಿ, ಆಹಾರ ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ. ಯುದ್ಧ ಆರಂಭವಾಗಿ 17 ದಿನಗಳು ಕಳೆದಿದ್ದು ಪೋಲೆಂಡ್‌ ಯುದ್ಧ ನಿರಾಶ್ರಿತರ ಪಾಲಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಉಕ್ರೇನ್‌ಗೆ ವಿದೇಶಗಳಿಂದ ನೆರವು
ಉಕ್ರೇನ್‌ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಯುರೋಪಿಯನ್‌ ಯೂನಿಯನ್‌ ಉಕ್ರೇನಿಯನ್‌ ಸೇನೆಗೆ 500 ದಶಲಕ್ಷ ಯೂರೋ ಮೌಲ್ಯದ ಶಸ್ತ್ರಾಸ್ತ್ರಗಳು ಮತ್ತು ಇತರ ನೆರವನ್ನು ನೀಡಿದೆ. ಯುರೋಪಿಯನ್‌ ಯೂನಿಯನ್‌ ಇದೇ ಮೊದಲ ಬಾರಿಗೆ ದಾಳಿಗೀಡಾದ ರಾಷ್ಟ್ರವೊಂದಕ್ಕೆ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಪೂರೈಕೆಗಾಗಿ ಹಣಕಾಸು ನೆರವನ್ನು ನೀಡಿದೆ ಎಂದು ಯುರೋಪಿಯನ್‌ ಕಮಿಷನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವೇಳೆ ಯುಕೆ ಸರಕಾರ ಯುದ್ಧ ಸಂತ್ರಸ್ತ ಉಕ್ರೇನ್‌ಗೆ ಸಹಾಯಹಸ್ತ ಚಾಚಿದ್ದು 100 ದಶಲಕ್ಷ ಪೌಂಡ್‌ ಸ್ಟರ್ಲಿಂಗ್‌ ನೆರವು ನೀಡಿದೆ. ಇದಲ್ಲದೆ ಅಮೆರಿಕ, ಜರ್ಮನಿ, ಫಿನ್ಲಂಡ್‌, ಸ್ವೀಡನ್‌, ಡೆನ್ಮಾರ್ಕ್‌, ನಾರ್ವೆ, ಸ್ಪೇನ್‌ ಮತ್ತು ನೆದರ್‌ಲ್ಯಾಂಡ್‌ ಕೂಡ ಉಕ್ರೇನ್‌ಗೆ ಸೇನಾ ನೆರವನ್ನು ನೀಡಿವೆ.

ರಷ್ಯಾದಲ್ಲಿ ವಿವಿಧ ಕಂಪೆನಿಗಳಿಂದ
ವ್ಯವಹಾರ ಸ್ಥಗಿತ
ರಷ್ಯಾದ ವಿರುದ್ಧ ಅಮೆರಿಕ ಮತ್ತು ಯುರೋಪಿಯನ್‌ ದೇಶಗಳು ಜಾಗತಿಕ ನಿರ್ಬಂಧ, ದಿಗ್ಬಂಧನ ಮತ್ತಿತರ ಬಿಗಿ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಉಕ್ರೇನ್‌ ವಿರುದ್ಧದ ಸಮರವನ್ನು ರಷ್ಯಾ ಮುಂದುವರಿಸಿರುವುದರಿಂದ ಜಾಗತಿಕ ಮಾರುಕಟ್ಟೆಯ ಕೆಲವೊಂದು ದಿಗ್ಗಜ ಕಂಪೆನಿಗಳು ರಷ್ಯಾದಲ್ಲಿ ತನ್ನ ವ್ಯವಹಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಮೆಕ್‌ಡೊನಾಲ್ಡ್‌ ರಷ್ಯಾದಲ್ಲಿನ 850 ಸ್ಟೋರ್‌ಗಳನ್ನು ಮುಚ್ಚಲು ತೀರ್ಮಾನಿಸಿದ್ದರೆ ಸ್ಟಾರ್‌ಬಕ್ಸ್‌ ತನ್ನ 100 ಮಳಿಗೆಗಳಿಗೆ ಬೀಗ ಜಡಿಯಲು ಮುಂದಾಗಿದೆ.

ಪೆಪ್ಸಿ ಮತ್ತು ಕೋಕಾ ಕೋಲಾ ಕಂಪೆನಿಗಳು ಕೂಡ ರಷ್ಯಾದಲ್ಲಿನ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದರೆ ರಷ್ಯಾದ ತೈಲ ಮತ್ತು ಗ್ಯಾಸ್‌ ಮಾರುಕಟ್ಟೆಯಿಂದ ಹಿಂದೆ ಸರಿಯಲು ಶೆಲ್‌ ತೀರ್ಮಾನಿಸಿದೆ.

ತೈಲ ಬೆಲೆ
ಉಕ್ರೇನ್‌ ಮೇಲೆ ಸೇನಾ ದಾಳಿ ನಡೆಸಿದ ಬಳಿಕ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಒಂದೇ ಸವನೆ ಏರಿಕೆಯಾಗುತ್ತಿದೆ. 2008ರ ಬಳಿಕ ಇದೇ ಮೊದಲ ಬಾರಿಗೆ ಕಳೆದ ಸೋಮವಾರ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 140 ಡಾಲರ್‌ಗಳ ಗಡಿ ದಾಟಿತ್ತು. ಆ ಬಳಿಕ ಒಂದಿಷ್ಟು ಏರಿಳಿತ ಕಂಡಿದ್ದರೂ ಯುದ್ಧ ಮುಂದುವರಿದದ್ದೇ ಆದಲ್ಲಿ ಕಚ್ಚಾ ತೈಲದ ಬೆಲೆ ಇನ್ನಷ್ಟು ಹೆಚ್ಚಲಿದ್ದು ಬಹುತೇಕ ದೇಶಗಳಲ್ಲಿ ತೈಲ ಬೆಲೆ ದಾಖಲೆ ಪ್ರಮಾಣದ ಏರಿಕೆ ಕಾಣಲಿದೆ.

ರಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧ ವಿರೋಧಿ ಪ್ರತಿಭಟನೆ
ತತ್‌ಕ್ಷಣ ಯುದ್ಧ ಸ್ಥಗಿತಗೊಳಿಸುವಂತೆ ರಷ್ಯಾದ ಮೇಲೆ ಜಾಗತಿಕವಾಗಿ ಒತ್ತಡ ಹೆಚ್ಚುತ್ತಿರುವ ನಡುವೆಯೇ ಇತ್ತ ರಷ್ಯಾದಲ್ಲೂ ಯುದ್ಧ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿವೆ. ಯುದ್ಧವನ್ನು ಸ್ಥಗಿತಗೊಳಿಸುವಂತೆ ಪ್ರತಿಭಟನಕಾರರು ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ರನ್ನು ಆಗ್ರಹಿಸುತ್ತಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಸೇನೆ ಆಕ್ರಮಣ ಆರಂಭಿಸಿದಾಗಿನಿಂದ ಈವರೆಗೆ ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ತೊಡಗಿದ್ದ 13,912 ಮಂದಿಯನ್ನು ಬಂಧಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ರಷ್ಯಾದ 53 ನಗರಗಳಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ಸ್ಥಳೀಯ ಜನರೊಡಗೂಡಿ ಯುದ್ಧವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next