ಎಲ್ವಿವ್: ಉಕ್ರೇನ್ ನ ಮೆಲಿಟೋಪೋಲ್ ನ ಮೇಯರ್ ಅನ್ನು ರಷ್ಯಾ ಸೇನೆ ಅಪಹರಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಆರೋಪಿಸಿದ್ದು, ರಷ್ಯಾ ಸೇನೆ ಐಸಿಸ್ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಅತ್ಯಂತ ಕೆಟ್ಟ ಆಡಳಿತ ನಡೆಸಿದ್ದರಿಂದ ಕಾಂಗ್ರೆಸ್ ಗೆ ಈ ಸ್ಥಿತಿ: ಕಾರಜೋಳ ಲೇವಡಿ
ರಷ್ಯಾ ಭಯೋತ್ಪಾದನೆಯ ಹೊಸ ಹೆಜ್ಜೆಯನ್ನಿಟ್ಟಿದ್ದು, ಉಕ್ರೇನ್ ನ ಸ್ಥಳೀಯ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ಭೌತಿಕವಾಗಿ ಮಟ್ಟಹಾಕಲು ಯತ್ನಿಸುತ್ತಿರುವುದಾಗಿ ಝೆಲೆನ್ ಸ್ಕಿ ದೂರಿರುವುದಾಗಿ ವರದಿ ತಿಳಿಸಿದೆ.
ಉಕ್ರೇನ್ ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕಿರಿಲ್ ಟಿಮೋಶೆಂಕೋ ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಮೇಯರ್ ಇವಾನ್ ಫೆಡೋರೊವ್ ಅವರನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿರುವುದಾಗಿ ವರದಿ ವಿವರಿಸಿದೆ.
ಫೆಬ್ರುವರಿ 26ರಂದು ರಷ್ಯಾ ಸೇನಾಪಡೆ ಮೆಲಿಟೋಪೊಲ್ ನ ದಕ್ಷಿಣ ಬಂದರು ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಈ ನಗರ ಸುಮಾರು 1,50,000 ಲಕ್ಷದಷ್ಟು ಜನಸಂಖ್ಯೆ ಹೊಂದಿರುವುದಾಗಿ ವರದಿ ತಿಳಿಸಿದೆ.
ಮೇಯರ್ ಫೆಡೋರೊವ್ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವುದಾಗಿ ಪೂರ್ವ ಉಕ್ರೇನ್ ನಲ್ಲಿರುವ ಮಾಸ್ಕೋ ಬೆಂಬಲಿತ ಬಂಡಾಯ ಪ್ರದೇಶವಾದ ಲುಹಾನ್ಸ್ ಕ್ ನ ಪೀಪಲ್ಸ್ ರಿಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.