Advertisement

ಪಾರಾಗಲು ಮಂಗಳೂರು ವಿದ್ಯಾರ್ಥಿಗಳ ಶತ ಪ್ರಯತ್ನ

12:52 AM Mar 01, 2022 | Team Udayavani |

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಬವಣೆ ಮುಂದುವರಿದಿದ್ದು, ಮಂಗಳೂರು ಮೂಲದ ಕೆಲವು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವರು ಆಹಾರಕ್ಕಾಗಿ ಪರದಾಡುತ್ತಿದ್ದರೆ ಇನ್ನು ಕೆಲವರು ರಷ್ಯಾ ದಾಳಿಯಿಂದ ಭಯಭೀತರಾಗಿದ್ದಾರೆ. ಸೋಮವಾರ ಅಪರಾಹ್ನ ಕೆಲವರು ಅಲ್ಲಿನ ಸ್ಥಿತಿ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ್ದಾರೆ.

Advertisement

ಬಿಸ್ಕಿಟ್‌, ಚಾಕೊಲೇಟ್‌ ತಿಂದು ದಿನ ಕಳೆಯುತ್ತಿದ್ದೇವೆ: ಅನೈನಾ ಅನ್ನಾ
ನಾವು 5 ದಿನಗಳಿಂದ ಮೆಟ್ರೋ ಸ್ಟೇಷನ್‌ ಶೆಲ್ಟರ್‌ನಲ್ಲಿ ಉಳಿದುಕೊಂಡಿದ್ದೇವೆ. ಸರಿಯಾಗಿ ಆಹಾರ ಸಿಗುತ್ತಿಲ್ಲ. ಬಿಸ್ಕಿಟ್‌, ಚಾಕೊಲೇಟ್‌ ತಿಂದು ದಿನ ಕಳೆಯು ತ್ತಿದ್ದೇವೆ. ಬಾಂಬ್‌ ಸ್ಫೋಟದಂತಹ ಸದ್ದು ಕೇಳಿಸುತ್ತಿದೆ. ಎರಡು ದಿನಗಳಲ್ಲಿ ಗಡಿಯತ್ತ ಕರೆದು ಕೊಂಡು ಹೋಗಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಪೋಲಂಡ್‌ 1,500 ಕಿ.ಮೀ. ದೂರದಲ್ಲಿದೆ. ಗಡಿ ಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡ ಲಾಗುತ್ತಿದೆ ಎಂಬ ವೀಡಿಯೋ ನೋಡಿ ಭಯವಾಗಿದೆ. ರಷ್ಯಾ ಆಕ್ರಮಣದ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ನಾವು ಕ್ಲಾಸ್‌ ಮಿಸ್‌ ಆಗಬಾರದೆಂದು ಉಳಿದುಕೊಂಡಿದ್ದೆವು. ಫೆ. 22ರಂದು ಫೆ. 26ರ ವಿಮಾನ ಬುಕ್‌ ಮಾಡಿದ್ದೆವು. ಆದರೆ ಫೆ. 24ರಂದೇ ಯುದ್ಧ ಆರಂಭವಾಗಿ ವಿಮಾನ ವೇರಲು ಸಾಧ್ಯವಾಗಲಿಲ್ಲ. ಈಗಾಗಲೇ ದ.ಕ. ಜಿಲ್ಲಾಧಿಕಾರಿ, ಶಾಸಕ ರೊಂದಿಗೆ ಮಾತನಾ ಡಿದ್ದೇನೆ ಎಂದು ಖಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ಯುನಿವರ್ಸಿಟಿಯ ವಿದ್ಯಾರ್ಥಿನಿ, ದೇರೆಬೈಲ್‌ನ ಅನೈನಾ ಅನ್ನಾ ಹೇಳಿದ್ದಾರೆ.

ಹಸಿವಿನಿಂದ ಸಾಯುತ್ತೇವೆ ಅನಿಸುತ್ತಿದೆ: ಲಾಯ್ಡ ಪಿರೇರಾ
ಮಂಗಳೂರಿನ ಗುರುಪುರ-ಕೈಕಂಬದ ಲಾಯ್ಡ ಪಿರೇರಾ ಉಕ್ರೇನ್‌ನ ಪೆಟ್ರೋ ಮೊಹಿಲಾ ಬ್ಲ್ಯಾಕ್‌ ಸೀ ನ್ಯಾಶನಲ್‌ ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದು, ಮಿಕಿಲೈವ್‌ ನಗರದ ಹಾಸ್ಟೆಲ್‌ನಲ್ಲಿದ್ದಾರೆ. ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಶೆಲ್‌ ದಾಳಿ ನಡೆಯುತ್ತಿದ್ದು, ರಾತ್ರಿ ಬಂಕರ್‌ನಲ್ಲಿ ತಂಗುತ್ತಿದ್ದೇವೆ. ನಮ್ಮೊಂದಿಗೆ ಸುಮಾರು 200 ಮಂದಿ ವಿದ್ಯಾರ್ಥಿ ಗಳಿದ್ದಾರೆ. ನಮ್ಮ ನಗರ ಸಂಪರ್ಕಿಸುತ್ತಿದ್ದ ಎರಡು ಸೇತುವೆಗಳನ್ನು ರಷ್ಯಾ ಸೇನೆಯವರು ನಾಶ ಮಾಡಿದ್ದಾರೆ. ಆಹಾರ ಪೂರೈಕೆ ನಿಂತಿದೆ. ನಮ್ಮ ನಗರ ಉಕ್ರೇನ್‌ನ ಪೂರ್ವಭಾಗದಲ್ಲಿದೆ. ಪೂರ್ವಭಾಗ ದಲ್ಲಿ ರಷ್ಯಾ ದಾಳಿ ಹೆಚ್ಚು. ನಮಗೆ ಸಹಾಯ ಬಂದಿಲ್ಲ. ಗಡಿಗೆ ತಲುಪಲು ಕೂಡ ವ್ಯವಸ್ಥೆ ಇಲ್ಲ. ಗಡಿಗೆ ಕರೆದೊಯ್ಯಲಾಗುತ್ತದೆ ಎಂಬ ಭರವಸೆ ಸಿಕ್ಕಿದೆ. ಆದರೆ ಕಾದು ಸಾಕಾಗಿದೆ. ಈಗ ಹಸಿವಿನಿಂದ ಸಾಯುವ ಆತಂಕ ಉಂಟಾಗಿದೆ. ಕೂಡಲೇ ಮಂಗಳೂರಿನ ಶಾಸಕರು, ಸಂಸದರು ನಮ್ಮನ್ನು ಭಾರತಕ್ಕೆ ಕರೆತರಲು ತುರ್ತು ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ನಾವೇ ರಿಸ್ಕ್ ತೆಗೆದುಕೊಂಡು ಗಡಿಯತ್ತ ಹೊರಡುವುದು ಅನಿವಾರ್ಯ ಎಂದು ಲಾಯ್ಡ ಅವರು ಅಲ್ಲಿನ ಸದ್ಯದ ಭಯಾನಕ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ.

ಗಡಿಯ ವರೆಗೆ ತಲುಪಲು ವ್ಯವಸ್ಥೆ ಮಾಡಿ: ಸಾಕ್ಷಿ ಸುಧಾಕರ್‌ ಮನವಿ
ನಾನು ಮತ್ತು ಇತರ ಸುಮಾರು 330 ಮಂದಿ ವಿದ್ಯಾರ್ಥಿಗಳು ಬಂಕರ್‌ನಲ್ಲಿ ದಿನ ಕಳೆಯುತ್ತಿದ್ದೇವೆ. ಇಲ್ಲಿ ಸರಿಯಾಗಿ ಆಹಾರ, ನೀರು, ಶೌಚಾಲಯ ವ್ಯವಸ್ಥೆಯೂ ಇಲ್ಲ. ಹೊರಗಡೆ ಯುದ್ಧ ನಡೆಯುತ್ತಿದೆ. ಗಡಿಯ ವರೆಗೆ ಹೋಗುವುದಕ್ಕೆ ವಾಹನ ವ್ಯವಸ್ಥೆ ಇಲ್ಲ. ನಮ್ಮನ್ನು ಗಡಿಯ ವರೆಗೆ ತಲುಪಿಸಲು ವ್ಯವಸ್ಥೆ ಮಾಡಿ ಎಂದು ಉಕ್ರೇನ್‌ನ ಮಿಕೋಲಾಯಿವ್‌ ನಗರದಲ್ಲಿ ವಾಸಿಸುತ್ತಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಸಾಕ್ಷಿ ಸುಧಾಕರ್‌ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಈಕೆ ಪೆಟ್ರೋ ಮೊಹಲ್ಯ ಬ್ಲ್ಯಾಕ್‌ ಸೀ ನ್ಯಾಷನಲ್‌ ಯುನಿವರ್ಸಿಟಿಯ ವಿದ್ಯಾರ್ಥಿನಿ.

ಸ್ಲೊವೇಕಿಯಾದತ್ತ ರೈಲಿನಲ್ಲಿ ಪೃಥ್ವಿರಾಜ್‌ ಪ್ರಯಾಣ
ಉಕ್ರೇನ್‌ನ ಝಾಪೊರಿಝಿಯಾ ನಗರದಲ್ಲಿ ವಾಸವಿದ್ದ ಎಂಬಿಬಿಎಸ್‌ ನಾಲ್ಕನೇ ವರ್ಷದ ವಿದ್ಯಾರ್ಥಿ, ಮಂಗಳೂರು ಬಿಕರ್ನಕಟ್ಟೆಯ ಪೃಥ್ವಿರಾಜ್‌ ಸೋಮವಾರ ರೈಲಿನಲ್ಲಿ ಸ್ಲೊವೇಕಿಯಾದತ್ತ ಪ್ರಯಾಣ ಬೆಳೆಸಿದ್ದಾರೆ. ಸುಮಾರು 1,450 ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳು ರೈಲು ನಿಲ್ದಾಣಕ್ಕೆ ಆಗಮಿಸಿದ್ದೇವೆ. ಝಪೊರಿಝಿಯಾ ನಗರದಿಂದ ಸ್ಲೊವೇಕಿಯಾಕ್ಕೆ 1,485 ಕಿ.ಮೀ ದೂರವಿದ್ದು, ರೈಲಿನಲ್ಲಿ ಅರ್ಧ ದಿನ ಕ್ರಮಿಸಬೇಕಾಗಿದೆ. ಭಾರತೀಯ ರಾಯಭಾರ ಕಚೇರಿಯವರ ಸಲಹೆ ಸೂಚನೆಯಂತೆ ಪ್ರಯಾಣ ಬೆಳೆಸುತ್ತಿರುವುದಾಗಿ ಪೃಥ್ವಿರಾಜ್‌ ಸೋಮವಾರ ಅಪರಾಹ್ನ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next