Advertisement
ಕೀವ್‌ನ ಬೀದಿಬೀದಿಗಳಲ್ಲೂ ಭೀಕರ ಕಾಳಗ ಆರಂಭವಾಗಿದೆ. “ನಿಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತೇವೆ’ ಎಂಬ ಅಮೆರಿಕದ ಕೊಡುಗೆಯನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ, “ನನ್ನ ನೆಲದಲ್ಲಿ ಯುದ್ಧ ನಡೆಯುತ್ತಿದೆ. ಇಂಥ ಸಮಯದಲ್ಲಿ ನನಗೆ ಶಸ್ತ್ರಾಸ್ತ್ರಗಳು ಬೇಕೇ ವಿನಾ ಜಾಲಿ ರೈಡ್ ಅಲ್ಲ’ ಎಂಬ ಖಡಕ್ ಸಂದೇಶ ರವಾನಿಸುವ ಮೂಲಕ ತಾವೊಬ್ಬ ನೈಜ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಧ್ಯಕ್ಷ ಝೆಲೆನ್‌ಸ್ಕಿ ಅವರ ಮಾತುಗಳು ಉಕ್ರೇನ್‌ನ ಸೈನಿಕರು ಮತ್ತು ನಾಗರಿಕರಿಗೆ ಶಕ್ತಿ ತುಂಬಿದೆ. “ಧೃತಿಗೆಡಬೇಡಿ, ನಾನು ನಿಮ್ಮೊಂದಿಗಿದ್ದೇನೆ’ ಎಂದು ಅಧ್ಯಕ್ಷರು ಸ್ವತಃ ಯುದ್ಧಭೂಮಿ ಕೀವ್‌ನಿಂದಲೇ ಸಂದೇಶ ರವಾನಿಸಿದ ಬೆನ್ನಲ್ಲೇ ಸೇನಾನಿಗಳು ಮತ್ತು ನಾಗರಿಕರು ಪ್ರಾಣವನ್ನೇ ಪಣಕ್ಕೊಡ್ಡಿ ದೇಶ ರಕ್ಷಣೆಗಿಳಿದಿದ್ದಾರೆ.
ರಷ್ಯಾ ಆಕ್ರಮಣ ಆರಂಭವಾದ ಮೊದಲ ಎರಡು ದಿನಗಳ ಕಾಲ ಉಕ್ರೇನ್‌ನ ಸೇನಾ ನೆಲೆ, ವಾಯುನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳು ನಡೆದಿದ್ದವು. ಆದರೆ ಮೂರನೇ ದಿನವಾದ ಶನಿವಾರ ಬೀದಿ ಕಾಳಗ ಆರಂಭವಾಗಿದೆ. ರಷ್ಯಾ ಪಡೆಗಳು ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಿಂದ ಮುನ್ನುಗ್ಗುತ್ತಿದ್ದು, ಸೇತುವೆಗಳು, ಶಾಲೆಗಳು, ಅಪಾರ್ಟ್‌ಮೆಂಟ್ ಮತ್ತಿತರ ಕಟ್ಟಡಗಳನ್ನು ಧ್ವಂಸಗೊಳಿಸಲು ಆರಂಭಿಸಿದ್ದಾರೆ. ಪರಿಣಾಮವಾಗಿ ಭಾರೀ ಪ್ರಮಾಣದ ಸಾವುನೋವು ಉಂಟಾಗಿದೆ. ಕೀವ್‌ನ ಅಪಾರ್ಟ್‌ಮೆಂಟ್ ಒಂದರ ಮೇಲೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದು, ಕ್ಷಣಮಾತ್ರದಲ್ಲಿ 5 ಮಹಡಿಗಳು ಕುಸಿದುಬಿದ್ದಿವೆ. ಒಂದೊಂದೇ ರಾಕೆಟ್‌ಗಳು ಕಟ್ಟಡಗಳ ಮೇಲೆ ಅಪ್ಪಳಿಸುತ್ತಿರುವ, ಕಟ್ಟಡ ಸ್ಫೋಟಗೊಳ್ಳುವ, ಬೆಂಕಿ ಹೊತ್ತಿಕೊಳ್ಳುವ ವೀಡಿಯೋಗಳು ಜನಸಾಮಾನ್ಯರನ್ನು ಬೆಚ್ಚಿಬೀಳಿಸಿವೆ.
Related Articles
Advertisement
198 ನಾಗರಿಕರ ಸಾವುರಷ್ಯಾ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಮೂವರು ಮಕ್ಕಳ ಸಹಿತ 198 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. 1,115 ಮಂದಿ ಗಾಯಗೊಂಡಿದ್ದು, ಈ ಪೈಕಿ 33 ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ನಾವ್ಯಾರೂ ಶಸ್ತ್ರತ್ಯಾಗ ಮಾಡುವುದಿಲ್ಲ. ಸತ್ಯವೇ ನಮ್ಮ ಅಸ್ತ್ರ. ಇದು ನಮ್ಮ ನೆಲ, ನಮ್ಮ ರಾಷ್ಟ್ರ, ಇಲ್ಲಿರುವುದು ನಮ್ಮ ಮಕ್ಕಳು ಎನ್ನುವುದೇ ಸತ್ಯ. ಇವೆಲ್ಲವನ್ನೂ ನಾವು ರಕ್ಷಿಸಿಯೇ ಸಿದ್ಧ.
– ವೊಲೋಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ ಫಿನ್ಲಂಡ್, ಸ್ವೀಡನ್‌ಗೂ ಬೆದರಿಕೆ
ಉಕ್ರೇನ್ ಮೇಲೆ ಯುದ್ಧ ಹೂಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಈಗ ಯುರೋಪ್ ಮೇಲೆ ಪ್ರಾಬಲ್ಯ ಸಾಧಿಸುವ ತಮ್ಮ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ, “ನೀವು ನ್ಯಾಟೋಗೆ ಸೇರ್ಪಡೆಯಾದರೆ ಉಕ್ರೇನ್‌ಗಾದ ಗತಿಯೇ ನಿಮಗೂ ಆಗುತ್ತದೆ. ಸೇನಾ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆ ಸಂದೇಶವನ್ನು ಫಿನ್ಲಂಡ್ ಮತ್ತು ಸ್ವೀಡನ್‌ಗೆ ರವಾನಿಸಿದ್ದಾರೆ. ಆದರೆ ಫಿನ್ಲಂಡ್ ಮತ್ತು ಸ್ವೀಡನ್ ಎರಡೂ ರಷ್ಯಾದ ಎಚ್ಚರಿಕೆಯನ್ನು ತಿರಸ್ಕರಿಸಿವೆ. ಇವೆರಡು ಆರ್ಕ್‌ಟಿಕ್ ವಲಯದಲ್ಲಿ ರಷ್ಯಾದ ಸನಿಹದಲ್ಲೇ ಇರುವ ದೇಶಗಳಾಗಿವೆ. ಪ್ರಧಾನಿ ಮೋದಿಗೆ ಉಕ್ರೇನ್ ಅಧ್ಯಕ್ಷರ ಕರೆ
ಯುದ್ಧ 3ನೇ ದಿನ ಪೂರೈಸುತ್ತಿದ್ದಂತೆ ಶನಿವಾರ ಸಂಜೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಅವರು ಭಾರತದ ಪ್ರಧಾನಿ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ವಿಶ್ವಸಂಸ್ಥೆ ಭದ್ರತ ಮಂಡಳಿಯಲ್ಲಿ ಉಕ್ರೇನ್‌ಗೆ ರಾಜಕೀಯ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಅನಂತರ ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್‌ಸ್ಕಿ, ಪ್ರಧಾನಿ ಮೋದಿ ಜತೆಗೆ ಈಗ ತಾನೇ ಮಾತನಾಡಿದ್ದೇನೆ. ರಷ್ಯಾದ ಆಕ್ರಮಣವನ್ನು ಉಕ್ರೇನ್ ಎದುರಿಸುತ್ತಿರುವ ಬಗೆಯನ್ನು ವಿವರಿಸಿದ್ದೇನೆ. 1 ಲಕ್ಷಕ್ಕೂ ಹೆಚ್ಚು ಆಕ್ರಮಣಕಾರರು ನಮ್ಮ ನೆಲಕ್ಕೆ ನುಗ್ಗಿದ್ದಾರೆ. ವಸತಿ ಕಟ್ಟಡಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಮತ್ತು ಈ ಆಕ್ರಮಣವನ್ನು ಒಂದಾಗಿ ಎದುರಿಸೋಣವೆಂದು ಮನವಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಏನೇನಾಯ್ತು?
– ರಾಜಧಾನಿ ಕೀವ್‌ನಲ್ಲಿ ಭಾರೀ ಕಾಳಗ
– ಅಧ್ಯಕ್ಷೀಯ ಭವನದ ಹೊರಗೆ ನಿಂತು ಹೊಸ ವೀಡಿಯೋ ಬಿಡುಗಡೆ ಮಾಡಿದ ಉಕ್ರೇನ್ ಅಧ್ಯಕ್ಷ. “ನಮ್ಮ ದೇಶ, ನಮ್ಮ ನೆಲವನ್ನು ರಕ್ಷಿಸಿಕೊಳ್ಳಲು ನಾವು ಹೋರಾಡಲೇಬೇಕಿದೆ’ ಎಂದ ಝೆಲೆನ್‌ಸ್ಕಿ
– ಕೀವ್‌ನಿಂದ 40 ಕಿ.ಮೀ. ದೂರದ ವಸಿಲ್ಕಿವ್‌ನಲ್ಲಿ ಮಾರುವೇಷ ಧರಿಸಿ ಬಂದು ಉಕ್ರೇನ್ ಸೈನಿಕರನ್ನು ಹತ್ಯೆಗೈದ ರಷ್ಯಾ ಪಡೆ
– ಉಕ್ರೇನ್‌ಗೆ ಸೇನಾಪಡೆಗಳನ್ನು ಕಳುಹಿಸುವಂತೆ ರಷ್ಯಾ ಮಾಡಿದ ಮನವಿಯನ್ನು ತಿರಸ್ಕರಿಸಿದ ಮಿತ್ರರಾಷ್ಟ್ರ ಕಜಕಿಸ್ಥಾನ
– ರಷ್ಯಾ ವಿಮಾನಗಳಿಗೆ ತನ್ನ ವಾಯುಗಡಿ ಮುಚ್ಚಿದ ಬಲ್ಗೇರಿಯಾ
– ರಾಯಭಾರ ಕಚೇರಿಯ ಅನುಮತಿಯಿಲ್ಲದೆ ಯಾವುದೇ ಗಡಿ ಪೋಸ್ಟ್‌ಗೆ ತೆರಳದಂತೆ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸೂಚನೆ
– ಉಕ್ರೇನ್ ಆದ್ಯಂತ ಏಕಾಏಕಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ
– ಅಮೆರಿಕ ಮಾಡಿದ ಸ್ಥಳಾಂತರದ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ. ಇಲ್ಲಿ ಯುದ್ಧ ನಡೆಯುತ್ತಿದೆ. ನನಗೆ ಶಸ್ತ್ರಾಸ್ತ್ರ ಬೇಕೇ ವಿನಾ ಜಾಲಿ ರೈಡ್ ಅಗತ್ಯವಿಲ್ಲ ಎಂದ ಝೆಲೆನ್‌ಸ್ಕಿ ರಷ್ಯಾ ಉಕ್ರೇನ್ ಸಮರ
– 1,20,000 – ನೆರೆರಾಷ್ಟ್ರಗಳಿಗೆ ವಲಸೆ ಹೋಗಿರುವ ಉಕ್ರೇನ್ ನಾಗರಿಕರು
– 198 – ರಷ್ಯಾದ ದಾಳಿಯಲ್ಲಿ ಸಾವಿಗೀಡಾದ ನಾಗರಿಕರು
– 1,115 – ಗಾಯಗೊಂಡ ಉಕ್ರೇನ್ ನಾಗರಿಕರು
– 800 – ಈವರೆಗೆ ರಷ್ಯಾದಿಂದ ಧ್ವಂಸಗೊಂಡ ಉಕ್ರೇನ್‌ನ ಸೇನಾ ಮೂಲಸೌಕರ್ಯಗಳು
– 2,627 ಕೋಟಿ ರೂ. – ಸೇನಾ ನೆರವಿನ ರೂಪದಲ್ಲಿ ಉಕ್ರೇನ್‌ಗೆ ಅಮೆರಿಕ ಘೋಷಿಸಿದ ಮೊತ್ತ