ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡಿ ಗುರುವಾರಕ್ಕೆ 204 ದಿನಗಳು ಪೂರ್ತಿಯಾಗಿವೆ (ಫೆ. 24ರಿಂದ ಆರಂಭವಾಗಿದೆ ದಾಳಿ). ಮೊನ್ನೆ ಮೊನ್ನೆಯ ವರೆಗೆ ರಷ್ಯಾ ಪಡೆಗಳು ಉಕ್ರೇನ್ ಸೇನೆಯ ವಿರುದ್ಧ ಜಯ ಸಾಧಿಸಿದ ಬಗ್ಗೆ ವರ್ತಮಾನಗಳು ಬರುತ್ತಿದ್ದವು. ಆದರೆ ಕೆಲವು ದಿನಗಳಿಂದ ಈಚೆಗೆ ಬರುತ್ತಿರುವ ವರದಿಗಳ ಪ್ರಕಾರ ಉಕ್ರೇನ್ ಸೇನೆ ಕೆಲವು ಭಾಗಗಳಲ್ಲಿ ರಷ್ಯಾ ವಿರುದ್ಧ ಜಯ ಸಾಧಿಸಿದೆ. ಹಾಗಿದ್ದರೆ ರಷ್ಯಾಕ್ಕೆ ಹಿನ್ನಡೆ ಉಂಟಾಯಿತೇ?
ಖಾರ್ಕಿವ್‌ನಿಂದ ಸೇನೆ ವಾಪಸ್ :
ಒಂದು ಹಂತದಲ್ಲಿ ಉಕ್ರೇನ್‌ನ ಪ್ರಧಾನ ನಗರ ಖಾರ್ಕಿವನ್ನು ರಷ್ಯಾದ ಸೇನೆಗಳು ವಶಪಡಿಸಿಕೊಂಡಿದ್ದವು. ಆದರೆ ಎರಡು ದಿನಗಳ ಹಿಂದೆ ನಡೆದಿದ್ದ ವಿದ್ಯಮಾನದಲ್ಲಿ ರಷ್ಯಾದ ಸೇನೆ, ವೊಲೊಡಿಮಿರ್ ಝೆಲೆನ್‌ಸ್ಕಿ ನೇತೃತ್ವದ ಸೇನಾಪಡೆಯ ಹೊಡೆತಕ್ಕೆ ಹಿನ್ನಡೆ ಅನುಭವಿಸಿದೆ. ಅದೇ ಪ್ರದೇಶದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಪುತಿನ್ ಸೇನೆಯ ವಿರುದ್ಧ ಮೇಲುಗೈ ಸಾಧಿಸಲು ಸಿದ್ಧತೆ ನಡೆಸಿದೆ.
ಬೆಳವಣಿಗೆ ಇಲ್ಲವೆಂದ ರಷ್ಯಾ :
ರಷ್ಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರಿ ವಾಹಿನಿಯ ಪ್ರಕಾರ ಖಾರ್ಕಿವ್‌ನಿಂದ ಸೇನೆಗಳನ್ನು ವಾಪಸ್ ಪಡೆದಿರುವ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ರಷ್ಯಾದ ರಕ್ಷಣ ಸಚಿವಾಲಯ ಸೇನಾ ಪಡೆಗಳನ್ನು ವಾಪಸ್ ಪಡೆದೇ ಇಲ್ಲ ಎಂದು ಪ್ರತಿಪಾದಿಸುತ್ತಿದೆ.
ಉಕ್ರೇನ್ ಮೇಲುಗೈಗೆ ಕಾರಣ? :
ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್‌ಗೆ ಧಾರಾಳವಾಗಿ ಸೇನಾ ನೆರವು ನೀಡಿವೆ. ಹೀಗಾಗಿ ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇರುವ ಸೇನೆಯ ವಿರುದ್ಧ ಬಿರುಸಿನ ಪ್ರತಿರೋಧ ನೀಡಲು ಸಾಧ್ಯವಾಗಿದೆ.
ತಾಜಾ ಪರಿಸ್ಥಿತಿ? :
ಉಕ್ರೇನ್‌ನ ಕೆಲವೆಡೆ ಹಾರಾಡುತ್ತಿದ್ದ ರಷ್ಯಾದ ಧ್ವಜ ತೆರವುಗೊಳಿಸಲಾಗಿದೆ. ಬ್ರಿಟನ್ ನೀಡಿದ ಮಾಹಿತಿ ಪ್ರಕಾರ ಉಕ್ರೇನ್ ಲಂಡನ್‌ನ ಎರಡರಷ್ಟು ಪ್ರದೇಶವನ್ನು ಪುತಿನ್ ಸೇನೆಯಿಂದ ವಶಪಡಿಸಿಕೊಂಡಿವೆ. ಜತೆಗೆ 24 ಗಂಟೆಗಳ ಅವಧಿಯಲ್ಲಿ 20 ನಿರಾಶ್ರಿತರ ಪ್ರದೇಶವನ್ನು ವಶಪಡಿಸಿಕೊಂಡಿದೆ.
5,767: ರಷ್ಯಾ ಜತೆಗಿನ ಯುದ್ಧದಲ್ಲಿ ಅಸುನೀಗಿರುವ ಉಕ್ರೇನ್ ನಾಗರಿಕರು
12 ದಶಲಕ್ಷ: ನಿರಾಶ್ರಿತಗೊಂಡ ಒಟ್ಟು ಜನರು
5 ದಶಲಕ್ಷ: ಉಕ್ರೇನ್‌ನ ನೆರೆಯ ದೇಶಗಳಿಗೆ ಪರಾರಿಯಾದವರು
7 ದಶಲಕ್ಷ: ಉಕ್ರೇನ್‌ನಲ್ಲಿಯೇ ಎಲ್ಲವನ್ನು ಕಳೆದುಕೊಂಡವರು