ರಷ್ಯಾ ಸೇನೆ ಉಕ್ರೇನ್ ವಿರುದ್ಧ ಸಮರ ಸಾರಿ ಶುಕ್ರವಾರ ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಎರಡೂ ಸೇನೆಗಳಲ್ಲೂ ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ.
ಯುದ್ಧದ ಪರಿಣಾಮವಾಗಿ ಉಕ್ರೇನ್ ಸಂಪೂರ್ಣ ಜರ್ಝರಿತಗೊಂಡಿದ್ದು ಸಹಸ್ರಾರು ಸಂಖ್ಯೆಯ ಅಮಾಯಕರು ಬಲಿಯಾಗುತ್ತಿದ್ದಾರೆ ಮಾತ್ರವಲ್ಲದೆ ನಿರ್ವಸಿತರಾಗುತ್ತಿದ್ದಾರೆ. ಆಹಾರದ ಗೋದಾಮಿನಂತಿದ್ದ ಉಕ್ರೇನ್‌ನಲ್ಲೀಗ ಆಹಾರದ ಕೊರತೆ ಕಾಡತೊಡಗಿದೆ. ಖಾರ್ಕಿವ್‌ನಲ್ಲಂತೂ ಜನರು ಆಹಾರವಿಲ್ಲದೆ ಬಳಲುತ್ತಿದ್ದು ಬೇರೆ ನಗರಗಳತ್ತ ವಲಸೆ ಹೋಗಲೂ ಸಾಧ್ಯವಿಲ್ಲದಷ್ಟು ಅಶಕ್ತರಾಗಿದ್ದಾರೆ. ಇದರ ನಡುವೆ ರಷ್ಯಾ ಸೇನೆ ಉಕ್ರೇನ್‌ನ ಪ್ರಮುಖ ನಗರಗಳು, ವಾಯುನೆಲೆ, ಸೇನಾ ನೆಲೆ, ಇಂಧನ ಕೇಂದ್ರ, ಸಂಶೋಧನ ಕೇಂದ್ರಗಳನ್ನು ಗುರಿಯಾಗಿಸಿ ಸತತ ದಾಳಿ ನಡೆಸುತ್ತಲೇ ಇದೆ. ಈ ದಾಳಿಯ ಸಂದರ್ಭದಲ್ಲಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವ ರಷ್ಯಾ ಈ ಮೂಲಕ ಉಕ್ರೇನ್ ಅನ್ನು ತನ್ನ ಶಸ್ತ್ರಾÕಸ್ತ್ರಗಳ ಪ್ರಯೋಗಶಾಲೆಯನ್ನಾಗಿಸಿದೆ.
ಉಕ್ರೇನ್ ನ್ಯಾಟೋ ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳಲು ಮುಂದಾ ದುದೇ ರಷ್ಯಾದ ದಾಳಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆಯಾದರೂ ಈ ದಾಳಿಯ ಮೂಲಕ ರಷ್ಯಾ ಜಗತ್ತಿನ ಬಲಾಡ್ಯ ರಾಷ್ಟ್ರಗಳಿಗೆ ಪ್ರಬಲ ಸಂದೇಶ ರವಾನಿಸಲು ಮುಂದಾಗಿದೆ ಎಂಬುದು ಸುಳ್ಳಲ್ಲ. ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ಆರಂಭಿಸಿದ ವೇಳೆ ಇದು ದ್ವಿಪಕ್ಷೀಯ ವಿಚಾರವಾಗಿದ್ದು ಬೇರೆ ಯಾವುದೇ ರಾಷ್ಟ್ರ ಹಸ್ತಕ್ಷೇಪ ನಡೆಸಿದಲ್ಲಿ ಇತಿಹಾ ಸದಲ್ಲಿ ಹಿಂದೆಂದೂ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನೇರವಾಗಿ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದರು. ಈ ಮೂಲಕ ರಷ್ಯಾ, ಉಕ್ರೇನ್ ಆದಿಯಾಗಿ ಈ ಹಿಂದಿನ ಸೋವಿಯತ್ ಯೂನಿಯನ್‌ಗೆ ಸೇರಿದ ದೇಶಗಳಲ್ಲಿ ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಸ್ಥಾಪಿಸುತ್ತಿರುವುದನ್ನು ಸಹಿಸಲಾಗದು ಮಾತ್ರವಲ್ಲದೆ ಈ ರಾಷ್ಟ್ರಗಳ ಮೇಲೆ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ರಷ್ಯಾ ಮುಂದಾಗಿರುವುದರ ಸುಳಿವನ್ನು ನೀಡಿದ್ದರು.
ಒಂದೆಡೆಯಿಂದ ರಷ್ಯಾ ಉಕ್ರೇನ್‌ನಲ್ಲಿ ನಿರಂತರ ಶೆಲ್, ಕ್ಷಿಪಣಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ ಅಂತಾರಾಷ್ಟ್ರೀಯ ನಿಯಮಾ ವಳಿಗಳೆಲ್ಲವನ್ನೂ ಗಾಳಿಗೆ ತೂರುತ್ತಿದ್ದರೆ ಜಾಗತಿಕ ಸಮುದಾಯ ಮಾತ್ರ ಇನ್ನೂ ರಷ್ಯಾದ ವಿರುದ್ಧ ಆರ್ಥಿಕ ದಿಗ್ಬಂಧನಗಳಿಗಷ್ಟೇ ಸೀಮಿತ ವಾಗಿದೆಯೇ ವಿನಾ ಕನಿಷ್ಠ ಬಿಗಿ ಸಂದೇಶ ರವಾನಿಸುವಲ್ಲಿಯೂ ವಿಫಲ ವಾಗಿದೆ. ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯಾದಿ ಯಾಗಿ ಇನ್ಯಾವುದೇ ಜಾಗತಿಕ ಸಂಸ್ಥೆಗಳಿಗೆ ರಷ್ಯಾದ ಈ ಮನುಕುಲ ವಿರೋಧಿ ದಾಳಿಗೆ ತಡೆ ಒಡ್ಡಲು ಸಾಧ್ಯವಾಗಿಲ್ಲ.
ಯುದ್ಧ ಇನ್ನೂ ಮುಂದುವರಿದದ್ದೇ ಆದಲ್ಲಿ ಅದರ ಪರಿಣಾಮಗಳು ಘನಘೋರ ಆಗುವ ಸಾಧ್ಯತೆಗಳಿವೆ. ಯುದ್ಧಕ್ಕೆ ಅಂತ್ಯ ಹಾಡಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯುದ್ಧ ಕೇವಲ ಒಣಪ್ರತಿಷ್ಠೆ, ಶಕ್ತಿ ಮತ್ತು ಸರ್ವಾಧಿ ಕಾರದ ಪ್ರದರ್ಶನವಾದೀತೇ ವಿನಾ ಯಾವುದೇ ಸಮಸ್ಯೆಗೆ ಪರಿಹಾರ ನೀಡಲಾರದು ಎಂಬುದನ್ನು ಎಲ್ಲ ರಾಷ್ಟ್ರಗಳು ಮೊದಲು ಮನಗಾಣ ಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ರಷ್ಯಾ ಕೂಡ ವಿಶ್ವಶಾಂತಿಯನ್ನು ಕಾಯ್ದುಕೊಳ್ಳುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ.