Advertisement
ಪ್ರಗತಿಯಲ್ಲಿ ಸ್ಥಿರತೆಯನ್ನು ಕಾಪಾಡಿ ಕೊಳ್ಳಬೇಕೆಂಬುದು ಎಲ್ಲರ ಧ್ಯೇಯವಾಗಿ ದ್ದರೂ ವಾಸ್ತವವಾಗಿ ಏಳುಬೀಳುಗಳು ಇದ್ದದ್ದೇ. ಬೆಳವಣಿಗೆಗೆ ಅಡೆತಡೆಗಳು ಬೇರೆ ಬೇರೆ ರೂಪದಲ್ಲಿ ಬರುತ್ತವೆ. ಇದೀಗ ರಷ್ಯಾ-ಉಕ್ರೇನ್ ಯುದ್ಧ ಇಂದು ವಿಶ್ವಾದ್ಯಂತ ಆತಂಕದ ಕಂಪನ ಸೃಷ್ಟಿಸಿದೆ. “ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬಂತಾಗಿದೆ ನಮ್ಮ ಸ್ಥಿತಿ. ಕೋವಿಡ್ ಸಾಂಕ್ರಾಮಿಕದ ಕರಾಳತೆಯಿಂದ ಜರ್ಝರಿತವಾದ ಜಾಗತಿಕ ಆರ್ಥಿಕತೆಯು ಸಂಕ್ರಮಣ ಕಾಲದಲ್ಲಿರುವಾಗ ರಷ್ಯಾ- ಉಕ್ರೇನ್ ಯುದ್ಧ ಜಾಗತಿಕ ಆರ್ಥಿಕತೆಗೆ ಕಂಟಕವಾಗಿ ಪರಿಣಮಿಸಲಿದೆ. ಇದರೊಂದಿಗೆ ಉಂಟಾಗಬಹುದಾದ ಪ್ರತಿಕೂಲ ಪರಿಣಾ ಮಗಳನ್ನು ದೂರದೃಷ್ಟಿತ್ವದೊಂದಿಗೆ ಅವ ಲೋಕನ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಮಾತ್ರ ನಿಶ್ಚಿತ ಗುರಿಯೆಡೆಗೆ ನಮ್ಮ ಪಯಣ ಸಾಧ್ಯ.ಯುದ್ಧದಿಂದ ಪ್ರತಿಕೂಲ ಪರಿಣಾಮ ಬೀರುವ ಅಗತ್ಯ ಸರಕು ಗೋಧಿ. ರಷ್ಯಾ ಮತ್ತು ಉಕ್ರೇನ್ ಎರಡೂ ವಿಶ್ವದ ಅತೀ ದೊಡ್ಡ ಗೋಧಿ ಉತ್ಪಾದಕ ದೇಶಗಳಾಗಿವೆ. ಈ ಎರಡೂ ರಾಷ್ಟ್ರಗಳಲ್ಲಿ ಜಗತ್ತಿನ ಶೇ.25 ರಷ್ಟು ಗೋಧಿ ಉತ್ಪಾದನೆ ಆಗುತ್ತಿದೆ. ಯುದ್ಧದ ಕಾರಣದಿಂದಾಗಿ ಜಾಗತಿಕ ಬೆಳೆ ಪೂರೈಕೆಯಲ್ಲಿ ಅಡ್ಡಿ ಹಾಗೂ ಆಹಾರದ ಬೆಲೆಗಳ ಏರಿಕೆಗೆ ಕಾರಣವಾಗಬಹುದು. ಈ ಸವಾಲನ್ನು ನಾವು ಜಾಗತಿಕ ದೃಷ್ಟಿಕೋನದಿಂದ ಸ್ವೀಕರಿಸಬೇಕಾಗಿದೆ. ನಮಗೆ ಅಗತ್ಯವಿರುವಷ್ಟು ಗೋಧಿಯನ್ನು ಉತ್ಪಾದನೆ ಮಾಡಿಕೊಳ್ಳುವ ಜತೆಗೆ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡುವಷ್ಟರ ಮಟ್ಟಿಗೆ ಆತ್ಮನಿರ್ಭರತೆ ಸಾಧಿಸಬೇಕಿದೆ.
Related Articles
Advertisement
ಅಮೆರಿಕದ ತೈಲ ಆಮದುಗಳ ಪ್ರಮಾಣದಲ್ಲಿ ರಷ್ಯಾದ ತೈಲದ ಕಾಣಿಕೆ ಶೇ. 5ಕ್ಕಿಂತ ಕಡಿಮೆ. ಅಂದರೆ ಐರೋಪ್ಯ ರಾಷ್ಟ್ರಗಳ ಹಾಗೆ ಅಮೆರಿಕ ತೈಲದ ಅಗತ್ಯಗಳಿಗಾಗಿ ರಷ್ಯಾದ ಮೇಲೆ ಅವಲಂಬಿತವಾಗಿಲ್ಲ. ಆದರೂ ರಷ್ಯನ್ ತೈಲದ ಮೇಲೆ ಹೇರಿರುವ ನಿಷೇಧವು ಅಮೆರಿಕದಲ್ಲಿನ ಬೆಲೆಗಳ ಮೇಲೆ ಕೂಡ ಗರಿಷ್ಠ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆತ್ಮನಿರ್ಭರತೆಯ ದೃಷ್ಟಿಯಿಂದ ಭಾರತವು ನವೀಕರಿಸಬಹುದಾದ ಇಂಧನ ಮೂಲಗಳ ವಲಯದಲ್ಲಿ ಹೆಚ್ಚು ಸಕ್ರಿಯವಾಗಿದೆ.
ನಲುಗಲಿದೆಯೇ ನಮ್ಮ ಆರ್ಥಿಕತೆ?: ತೈಲ ಆಮದುಗಳ ಮೂಲಕ ತನ್ನ ಶಕ್ತಿಯ ಅಗತ್ಯತೆಗಳನ್ನು ಭಾರತ ಪೂರೈಸಿಕೊಳ್ಳುತ್ತಿದೆ. ಶೇ. 80ರಷ್ಟು ತೈಲ ಆಮದು ಮಾಡಿಕೊಳ್ಳುವ ಭಾರತ ಬಿಕ್ಕಟ್ಟಿಗೆ ಸಿಲುಕಲಿದೆ. ಯುದ್ಧ ಪರಿಣಾಮ ಹಾಗೂ ತೈಲ ಬೆಲೆಗಳು ಹೆಚ್ಚು ಬಾಧಿಸಲಿವೆ. ಬಿಕ್ಕಟ್ಟಿಗೆ ಸಿಲುಕುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿರಬಹುದು. ಹೆಚ್ಚುತ್ತಿರುವ ಇಂಧನ ಬೆಲೆ ಆರ್ಥಿಕ ಸ್ಥಿತಿಗೆ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ.ಇಂಡಿಯಾ ಟುಡೇ ವರದಿಯ ಪ್ರಕಾರ, ಕಚ್ಚಾ ತೈಲ ಸಂಬಂಧಿತ ಉತ್ಪನ್ನಗಳು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ದಲ್ಲಿ ಶೇ. 9ರಷ್ಟು ಪಾಲನ್ನು ಹೊಂದಿವೆ. ಏರುತ್ತಿರುವ ತೈಲ ಬೆಲೆಗಳು ದೇಶದ ಡಬ್ಲ್ಯುಪಿಐ ಹಣದುಬ್ಬರವನ್ನು ಸುಮಾರು 0.9 ಪ್ರತಿಶತದಷ್ಟು ಹೆಚ್ಚಿಸಬಹುದು. ಕ್ಷಣಕ್ಷಣಕ್ಕೂ ಉಲ್ಬಣಗೊಳ್ಳುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಭಾರ ಭಾರತದ ಜನಸಾಮಾನ್ಯರ ಮೇಲೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ಕಳೆದ ನವಂಬರ್ ಅನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಲಾಗಿತ್ತು. ಆದರೆ ಈಗ ಯುದ್ಧದ ಪರಿಣಾಮವಾಗಿ ತೈಲೋತ್ಪನ್ನಗಳ ಪೂರೈ ಕೆಯ ಅಡಚಣೆಯಿಂದಾಗಿ ವಾಹನ ಸವಾರರ ಜೇಬಿಗಂತೂ ತತ್‌ಕ್ಷಣದಿಂದಲೇ ಕತ್ತರಿ ಬೀಳುವ ಸಾಧ್ಯತೆಗಳು ನಿಚ್ಚಳ. ಸರಕು ಸಾಗಣೆ ವೆಚ್ಚ ಗಗನಕ್ಕೇರುತ್ತದೆ. ಪರಿಣಾಮ ಆಹಾರ ಪದಾರ್ಥಗಳೂ ತುಟ್ಟಿಯಾಗಲಿವೆ.
ಭವಿಷ್ಯದಲ್ಲಿ ಜಗತ್ತಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದನ್ನು ಷೇರು ಮಾರುಕಟ್ಟೆ ಮತ್ತು ಏರುತ್ತಿರುವ ಕಚ್ಚಾ ತೈಲಗಳ ಬೆಲೆಗಳಿಂದ ಸ್ಪಷ್ಟವಾಗುತ್ತಿದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು ಹಣಕಾಸು, ವಿನಿಮಯ ದರ, ತೈಲ ಬೆಲೆಗಳ ಮೇಲೆ ಅಲ್ಪಾವಧಿ ಆದರೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಬೀರುತ್ತಿದೆ. ಸಂಕಷ್ಟಗಳನ್ನು ಸವಾಲನ್ನಾಗಿ ಸ್ವೀಕರಿಸುವ ಅನಿವಾರ್ಯ
ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿ ಸುವ ಬಗ್ಗೆ ಚಿಂತನ-ಮಂಥನಗಳು ನಡೆಯ ಬೇಕು. ಕೋವಿಡ್ ಬಿಕ್ಕಟ್ಟು ನಮಗೆ ಸ್ಥಳೀಯ ಉತ್ಪಾದನೆಯ, ಸ್ಥಳೀಯ ಮಾರುಕಟ್ಟೆ ಮತ್ತು ಪೂರೈಕೆ ಸರಪಣಿಯ ಮಹತ್ವವನ್ನು ಕಲಿಸಿತು. ಸಂಕಷ್ಟದ ಕಾಲದಲ್ಲಿನ ನಮ್ಮ ಎಲ್ಲ ಬೇಡಿಕೆಗಳನ್ನು ಸ್ಥಳೀಯವಾಗಿ ಪೂರೈಸುವ ಮೂಲಕ ಭಾರತ ತನ್ನ ಸ್ವಾವಲಂಬೀ ಸಾಧನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಈಗ ಸ್ಥಳೀಯ ಉತ್ಪನ್ನಗಳ ಬಗ್ಗೆ ಆಸಕ್ತಿ ವಹಿಸಿ ಈ ಉತ್ಪನ್ನಗಳನ್ನು ಜಾಗತಿಕಗೊಳಿಸಲು ಪ್ರಯತ್ನಿಸಬೇಕು. ಸ್ವಾವಲಂಬನೆಯ ಮಂತ್ರ ದೇಶವನ್ನು ಜಾಗತಿಕ ಪೂರೈಕೆ ಸರಪಳಿಯ ಸ್ಪರ್ಧೆಗೆ ಸಜ್ಜುಗೊಳಿಸುತ್ತದೆ ಎಂಬುದನ್ನು ನಾವು ಮನಗಾಣಬೇಕು ಹಾಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸ್ವಾವ ಲಂಬನೆಯು ದೇಶವನ್ನು ಜಾಗತಿಕ ಪೂರೈಕೆ ಸರಪಳಿಯ ಸ್ಪರ್ಧೆಗೆ ಸಜ್ಜುಗೊಳಿ ಸುತ್ತದೆ. ಉತ್ಪಾದನ ಸಾಮರ್ಥ್ಯ ಹೆಚ್ಚಿಸುವುದ ರೊಂದಿಗೆ ಉತ್ಕೃಷ್ಟ ಗುಣಮಟ್ಟದ ವಸ್ತುಗಳ ಉತ್ಪಾದನೆಗೂ ಆದ್ಯತೆ ನೀಡ ಬೇಕಾಗಿದೆ. ಆತ್ಮನಿರ್ಭರ ಭಾರತದ ಪರಿಕ ಲ್ಪನೆಗೆ ನಾವೆಲ್ಲರೂ ದನಿಗೂಡಿಸಿ ಮುಂದಡಿ ಯಿಡಬೇಕಾದುದು ನಮ್ಮ ಧರ್ಮ. ಆದಷ್ಟು ಬೇಗ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಂಡು ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಯಾಗಲಿ ಎಂಬುದೇ ನಮ್ಮ ಹಾರೈಕೆ. ಇದರೊಂದಿಗೆ “ಗಟ್ಟಿತನ ಗರಡಿ ಫಲ’ ಎಂಬಂತೆ ನಮ್ಮ ಹಿಡಿತಕ್ಕೆ ಸಿಗದೆ ಜಾಗತಿಕವಾಗಿ ಕಂಡುಬರುವ ಆತಂಕಗಳಿಗೆ ನಾವು ಬಲಿಬೀಳದಂತಾಗಲು, ನಮ್ಮ ಸ್ವಾಲಂಬಿತ ನವನ್ನು ಗಟ್ಟಿಗೊಳಿಸಬೇಕಾಗಿದೆ. ಆತ್ಮ ನಿರ್ಭರ ಭಾರತದ ಕನಸು ನನಸಾಗಬೇಕಾಗಿದೆ. ಸ್ವದೇಶಿ ಉತ್ಪಾದನೆ ಹಾಗೂ ಉತ್ಪಾದಕತೆಗೆ ಒತ್ತು ನೀಡುವ ಮೂಲಕ ಪ್ರಗತಿಪರ ಹೆಜ್ಜೆಗಳಿಗೆ ಸಾಕ್ಷಿಯಾಗೋಣ. -ಡಾ| ಎ. ಜಯ ಕುಮಾರ ಶೆಟ್ಟಿ, ಉಜಿರೆ