ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮುಖ ರಾಜತಾಂತ್ರಿಕ ಸಾಧನೆಯನ್ನು ಸಾಧಿಸಿದ್ದು, ರಷ್ಯಾದ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಾರತೀಯರನ್ನು ಮರಳಿ ಕಳುಹಿಸುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇದು ನನ್ನ ಕೆರಿಯರ್‌ನ ಬಿಗ್ ಬಜೆಟ್ ಚಿತ್ರ “ಕೃಷ್ಣಂ ಪ್ರಣಯ ಸಖಿ” ಬಗ್ಗೆ ಗಣೇಶ್ ಮಾತು
ಪುಟಿನ್ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ(ಜುಲೈ 08) ರಾತ್ರಿ ನಡೆದ ಭೋಜನ ಕೂಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯರ ಬಿಡುಗಡೆ ಕುರಿತು ಚರ್ಚೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಪ್ರಧಾನಿ ಮೋದಿ ಅವರು ಸೋಮವಾರ ಸಂಜೆ ರಷ್ಯಾ ತಲುಪಿದ್ದರು. ಎರಡು ದಿನಗಳ ರಷ್ಯಾ ಭೇಟಿಗಾಗಿ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಭಾರತೀಯ ಸಮುದಾಯ ಗಾರ್ಬಾ ನೃತ್ಯದ ಮೂಲಕ ಸ್ವಾಗತಿಸಿತ್ತು.
ರಷ್ಯಾ ಮತ್ತು ಉಕ್ರೈನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿರುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾ ಸೇನೆಯಲ್ಲಿ ನೇಮಕ ಮಾಡಿಕೊಂಡಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಬಿಡುಗಡೆಗೊಳಿಸುವಂತೆ ವಿಷಯ ಪ್ರಸ್ತಾಪಿಸಲು ಭಾರತ ನಿರ್ಧರಿಸಿತ್ತು.