Advertisement

ಭಾರತೀಯರು ಸೇರಿ ವಿದೇಶಿಗರ ಸ್ಥಳಾಂತರಕ್ಕೆ ಪೂರ್ಣ ನೆರವು : ರಷ್ಯಾ ಸ್ಪಷ್ಟನೆ

06:30 PM Mar 05, 2022 | Team Udayavani |

ಮಾಸ್ಕೋ : ಯುದ್ಧದ ಮಧ್ಯೆ, ಭಾರತೀಯ ವಿದ್ಯಾರ್ಥಿಗಳು ಮತ್ತು ಅಲ್ಲಿ ಸಿಲುಕಿರುವ ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್ ಮತ್ತು ಸುಮಿಗೆ ಹೋಗಲು ರಷ್ಯಾದ ಬಸ್ಸುಗಳು ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಸಿದ್ಧವಾಗಿವೆ ಎಂದು ರಷ್ಯಾ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.

Advertisement

15 ರಾಷ್ಟ್ರಗಳ ಕೌನ್ಸಿಲ್ ಶುಕ್ರವಾರ ತುರ್ತು ಅಧಿವೇಶನವನ್ನು ನಡೆಸಿದ್ದು, ಅಲ್ಬೇನಿಯಾ, ಫ್ರಾನ್ಸ್, ಐರ್ಲೆಂಡ್, ನಾರ್ವೆ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕಾ ಸಭೆಯಲ್ಲಿ ಸೇರಿದ್ದವು.

ಯುರೋಪ್‌ನ ಅತಿದೊಡ್ಡ ಉಕ್ರೇನ್‌ನ ಪರಮಾಣು ಸ್ಥಾವರದ ಮೇಲೆ ರಷ್ಯಾದ ದಾಳಿಯ ನಂತರ ನಡೆದ ಸಭೆಯಲ್ಲಿ, ವಿಶ್ವ ಸಂಸ್ಥೆಯ ರಾಯಭಾರಿಗಾಗಿ ರಷ್ಯಾದ ಖಾಯಂ ಪ್ರತಿನಿಧಿ ವಾಸಿಲಿ ನೆಬೆಂಜಿಯಾ ಅವರು, ಉಕ್ರೇನ್‌ನಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳನ್ನು ಶಾಂತಿಯುತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಮಿಲಿಟರಿ ಎಲ್ಲವನ್ನೂ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದೆ ವೇಳೆ ಪೂರ್ವ ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಉಕ್ರೇನ್ ರಾಷ್ಟ್ರೀಯತಾವಾದಿಗಳು 3,700 ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು “ಬಲವಂತವಾಗಿ” ಇರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಭಯೋತ್ಪಾದಕರು ನಾಗರಿಕರನ್ನು ನಗರಗಳನ್ನು ತೊರೆಯಲು ಬಿಡುವುದಿಲ್ಲ. ಇದು ಉಕ್ರೇನಿಯನ್ನರಿಗೆ ಮಾತ್ರವಲ್ಲದೆ ವಿದೇಶಿಯರ ಮೇಲೂ ಪರಿಣಾಮ ಬೀರುತ್ತದೆ. ಉಕ್ರೇನಿಯನ್ ಪ್ರಜೆಗಳು ಬಲವಂತವಾಗಿ ಇಟ್ಟುಕೊಂಡಿರುವ ವಿದೇಶಿ ಪ್ರಜೆಗಳ ಸಂಖ್ಯೆ ಆಘಾತಕಾರಿಯಾಗಿದ್ದು, ಖಾರ್ಕಿವ್ ನಲ್ಲಿ ಭಾರತದ 3,189 ಪ್ರಜೆಗಳು, ವಿಯೆಟ್ನಾಂನ 2,700 ಪ್ರಜೆಗಳು, 202 ಚೀನಾದ ಪ್ರಜೆಗಳು. ಸುಮಿ ನಗರದಲ್ಲಿ ಭಾರತದ 576 ಪ್ರಜೆಗಳು, ಘಾನಾದ 101 ಪ್ರಜೆಗಳು, 121 ಚೀನಾದ ಪ್ರಜೆಗಳು ಸೇರಿದ್ದಾರೆ”ಎಂದು ನೆಬೆಂಜಿಯಾ ಕೌನ್ಸಿಲ್‌ಗೆ ತಿಳಿಸಿದ್ದಾರೆ.

Advertisement

ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ, ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಖಾರ್ಕಿವ್ ಮತ್ತು ಸುಮಿಗೆ ಹೋಗಲು ಸಿದ್ಧವಾಗಿರುವ ‘ನೆಖೋಟೀವ್ಕಾ’ ಮತ್ತು ‘ಸುಡ್ಜಾ’ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಇಂದು ಬೆಳಿಗ್ಗೆ 6.00 ರಿಂದ 130 ಬಸ್‌ಗಳು ಸಿದ್ಧವಾಗಿ ನಿಂತಿವೆ ಎಂದು ತಿಳಿಸಿದ್ದಾರೆ.

ಚೆಕ್‌ಪೋಸ್ಟ್‌ಗಳು ತಾತ್ಕಾಲಿಕ ವಸತಿ, ವಿಶ್ರಾಂತಿಗಾಗಿ ಸ್ಥಳ ಮತ್ತು ಬಿಸಿ ಆಹಾರವನ್ನು ಒದಗಿಸಲು ಸಜ್ಜುಗೊಂಡಿವೆ ಎಂದು ರಷ್ಯಾದ ರಾಯಭಾರಿ ಹೇಳಿದ್ದಾರೆ.. ಔಷಧಿಗಳ ದಾಸ್ತಾನು ಹೊಂದಿರುವ ಮೊಬೈಲ್ ವೈದ್ಯಕೀಯ ಕೇಂದ್ರಗಳೂ ಇವೆ ಎಂದು ತಿಳಿಸಿದ್ದಾರೆ.

ತೆರವುಗೊಂಡ ಪ್ರತಿಯೊಬ್ಬರನ್ನು ಬೆಲ್ಗೊರೊಡ್‌ಗೆ ಕರೆದೊಯ್ಯಲಾಗುತ್ತದೆ ಮತ್ತು ಅಲ್ಲಿಂದ ವಿಮಾನದ ಮೂಲಕ ಅವರೆಲ್ಲರನ್ನೂ ತಾಯ್ನಾಡಿಗೆ ಕಳುಹಿಸಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಯಾವುದೇ ವರದಿಗಳು ಬಂದಿಲ್ಲ

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಒತ್ತೆಯಾಳು ಪರಿಸ್ಥಿತಿ ಎದುರಾಗಿರುವ ಬಗ್ಗೆ ಭಾರತಕ್ಕೆ ಯಾವುದೇ ವರದಿಗಳು ಬಂದಿಲ್ಲ ಎಂದು ಹೇಳಿದ್ದಾರೆ.

“ಯಾವುದೇ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಯಾವುದೇ ಒತ್ತೆಯಾಳು ಪರಿಸ್ಥಿತಿಯ ಯಾವುದೇ ವರದಿಗಳನ್ನು ನಾವು ಸ್ವೀಕರಿಸಿಲ್ಲ. ಖಾರ್ಕಿವ್ ಮತ್ತು ನೆರೆಯ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವಲ್ಲಿ ನಾವು ಉಕ್ರೇನಿಯನ್ ಅಧಿಕಾರಿಗಳ ಬೆಂಬಲವನ್ನು ಕೋರಿದ್ದೇವೆ,”ಎಂದು ಬಾಗ್ಚಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next