Advertisement

“ಕೊರಿಯಾ ಮಾದರಿ’ಉಕ್ರೇನ್‌ ಅನ್ನು 2 ಭಾಗಗಳಾಗಿ ವಿಭಜಿಸಲು ರಷ್ಯಾ ಪ್ಲ್ಯಾನ್

10:55 PM Mar 27, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ಆರಂಭಿಸಿ ತಿಂಗಳು ಕಳೆದರೂ ಇಡೀ ದೇಶವನ್ನು ಆಕ್ರಮಿಸಿಕೊಳ್ಳಲು ರಷ್ಯಾ ವಿಫ‌ಲವಾಗಿದೆ. ಹೀಗಾಗಿ “ಕೊರಿಯಾ ಮಾದರಿ’ಯಲ್ಲಿ ಉಕ್ರೇನ್‌ ಅನ್ನು ಎರಡು ಹೋಳುಗಳಾಗಿ ಒಡೆಯಲು ಪುಟಿನ್‌ ಚಿಂತನೆ ನಡೆಸಿದ್ದಾರೆ ಎಂದು ಉಕ್ರೇನ್‌ನ ಸೇನಾ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ.

Advertisement

ಕೊರಿಯಾವು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎಂದು ಎರಡು ದೇಶಗಳಾಗಿ ವಿಭಜನೆಯಾದಂತೆ, ಉಕ್ರೇನ್‌ನಲ್ಲಿ ತನ್ನ ವಶಕ್ಕೆ ಬಂದಿರುವ ನಗರಗಳನ್ನು ಸೇರಿಸಿಕೊಂಡು ಪ್ರತ್ಯೇಕ ಪ್ರಾಂತ್ಯವೆಂದು ಘೋಷಿಸಲು ರಷ್ಯಾ ಸಿದ್ಧತೆ ನಡೆಸಿದೆ. ಇಲ್ಲಿ ಪರ್ಯಾಯ ಸರ್ಕಾರಗಳನ್ನು ರೂಪಿಸಿ, ಜನರು ಉಕ್ರೇನ್‌ ಕರೆನ್ಸಿಯನ್ನು ಬಳಸದಂತೆ ನಿಷೇಧ ಹೇರುವುದು ಕೂಡ ಪುಟಿನ್‌ ಕಾರ್ಯತಂತ್ರವಾಗಿದೆ ಎಂದೂ ಸೇನಾ ಗುಪ್ತಚರ ಮುಖ್ಯಸ್ಥ ಕಿರ್ಲೋ ಬುಡನೋವ್‌ ಹೇಳಿದ್ದಾರೆ.

ವಿಶೇಷವೆಂದರೆ, ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಲುಗಾಂಸ್ಕ್ ಪ್ರದೇಶವನ್ನು ರಷ್ಯಾದೊಂದಿಗೆ ವಿಲೀನಗೊಳಿಸಲು ಬಂಡುಕೋರರು ಸಿದ್ಧತೆ ನಡೆಸಿರುವುದು ಕಿರ್ಲೋ ಅವರ ಹೇಳಿಕೆಗೆ ಪುಷ್ಟಿ ನೀಡಿದೆ.

ಆದಷ್ಟು ಬೇಗ ನಾವು ರಷ್ಯಾದೊಂದಿಗೆ ವಿಲೀನಗೊಳ್ಳುವ ಕುರಿತು ಜನಮತಗಣನೆ ನಡೆಸಲಿದ್ದೇವೆ. ಈ ಪ್ರಸ್ತಾಪಕ್ಕೆ ಬೆಂಬಲ ದೊರೆತರೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಲುಹಾಂಸ್ಕ್ ಪೀಪಲ್ಸ್‌ ರಿಪಬ್ಲಿಕ್‌ನ ಸ್ವಘೋಷಿತ ಮುಖ್ಯಸ್ಥ ಲಿಯೋನಿಟ್‌ ಪ್ಯಾಸೆನಿಕ್‌ ಭಾನುವಾರ ಹೇಳಿದ್ದಾರೆ.

ಲುಗಾಂಸ್ಕ್ ಮತ್ತು ನೆರೆಯ ಡಾನೆಸ್ಕ್ ಪ್ರದೇಶದಲ್ಲಿರುವ ಬಂಡುಕೋರರಿಗೆ 2014ರಿಂದಲೂ ರಷ್ಯಾ ನೆರವು ನೀಡುತ್ತಾ ಬಂದಿದೆ. ಇದೇ ಫೆ.21ರಂದು ರಷ್ಯಾ ಈ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಿತ್ತು.

Advertisement

ಇದನ್ನೂ ಓದಿ:ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಮತ್ತೆ ಆರಂಭ

ಶೆಲ್‌, ಕ್ಷಿಪಣಿ ದಾಳಿ ತೀವ್ರ:
ಭಾನುವಾರ ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ಅಣುಸ್ಥಾವರದ ಮೇಲೆ ರಷ್ಯಾ ಮತ್ತೊಮ್ಮೆ ಶೆಲ್‌ ದಾಳಿ ನಡೆಸಿದೆ. ಇದರಿಂದ ಸ್ಥಾವರದ ಕಟ್ಟಡಕ್ಕೆ ಹಾನಿಯಾಗಿದ್ದರೂ, ವಿಕಿರಣ ಸೋರಿಕೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಲ್ವಿವ್‌ ನಗರದ ಮೇಲೆ ಭಾನುವಾರ ಅಧಿಕ ನಿಖರತೆಯುಳ್ಳ ಕ್ರೂಸ್‌ ಕ್ಷಿಪಣಿಗಳು ಅಪ್ಪಳಿಸಿವೆ. ಇದರಿಂದಾಗಿ ಉಕ್ರೇನ್‌ ಸೇನೆ ಬಳಸುತ್ತಿರುವ ಇಂಧನ ಡಿಪೋವೊಂದು ಸಂಪೂರ್ಣವಾಗಿ ನಾಶವಾಗಿದೆ.

ಪುಟಿನ್‌ ಒಬ್ಬ ಕಟುಕ: ಬೈಡೆನ್‌
ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ವಿರುದ್ಧ ಕೆಂಡಕಾರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, “ರಷ್ಯಾ ಅಧ್ಯಕ್ಷ ಪುಟಿನ್‌ ಒಬ್ಬ ಕಟುಕು. ಅವರಿಗೆ ಅಧಿಕಾರದಲ್ಲಿ ಉಳಿಯುವ ಅರ್ಹತೆಯಿಲ್ಲ’ ಎಂದಿದ್ದಾರೆ. ಉಕ್ರೇನ್‌ ಸಂಘರ್ಷವು ರಷ್ಯಾದ ವ್ಯೂಹಾತ್ಮಕ ವೈಫ‌ಲ್ಯವಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ.

ಸಮರಾಂಗಣದಲ್ಲಿ
– ಉಕ್ರೇನ್‌ಗೆ ಯುದ್ಧ ವಿಮಾನ, ಟ್ಯಾಂಕ್‌ಗಳನ್ನು ಒದಗಿಸುವ ಮೂಲಕ ಪಾಶ್ಚಿಮಾತ್ಯ ದೇಶಗಳು ನೆರವಾಗಲಿ ಎಂದ ಅಧ್ಯಕ್ಷ ಝೆಲೆನ್‌ಸ್ಕಿ
– ಉಕ್ರೇನ್‌ ಯುದ್ಧದಿಂದಾಗಿ ಹಲವು ಬಡ ರಾಷ್ಟ್ರಗಳಲ್ಲಿ ಆಹಾರಕ್ಕಾಗಿ ಹೊಡೆದಾಟ ಆರಂಭವಾಗಬಹುದು- ವಿಶ್ವ ವ್ಯಾಪಾರ ಸಂಸ್ಥೆ ಆತಂಕ
– ಈ ಸಂವೇದನಾರಹಿತ ಯುದ್ಧವನ್ನು ಕೂಡಲೇ ನಿಲ್ಲಿಸಿ ಎಂದು ಪೋಪ್‌ ಫ್ರಾನ್ಸಿಸ್‌ ಕರೆ
– ಖೇರ್ಸಾನ್‌ನಲ್ಲಿ ಯುದ್ಧ ಖಂಡಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಸ್ಮೋಕ್‌ ಗ್ರೆನೇಡ್‌ ಎಸೆದ ರಷ್ಯಾ ಸೈನಿಕರು
– ಮರಿಯುಪೋಲ್‌ನಲ್ಲಿ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಂದಿಯ ಸ್ಥಳಾಂತರ ಪೂರ್ಣ: ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next