ಬ್ರುಸೆಲ್ಸ್: ರಷ್ಯಾ ಮೇಲಿನ ನಿರ್ಬಂಧವು ಜಾಗತಿಕ ಆಹಾರ ಮತ್ತು ರಸಗೊಬ್ಬರ ಪೂರೈಕೆಯ ಮೇಲೆ ದೊಡ್ಡ ಹೊಡೆತ ನೀಡಿರುವ ಹಿನ್ನೆಲೆಯಲ್ಲಿ ಈಗ ಐರೋಪ್ಯ ಒಕ್ಕೂಟವು ಈ ನಿರ್ಬಂಧವನ್ನು ಸಡಿಲಿಸಲು ಚಿಂತನೆ ನಡೆಸಿದೆ.
ಬುಧವಾರ ಐರೋಪ್ಯ ಒಕ್ಕೂಟವು ರಷ್ಯಾದ ಪ್ರಮುಖ ಬ್ಯಾಂಕುಗಳಲ್ಲಿರುವ ಮೊತ್ತದ ಸ್ತಂಭನವನ್ನು ವಾಪಸ್ ಪಡೆಯಲು ಅನುಮತಿ ನೀಡಲಿದೆ. ಆ ಮೂಲಕ ಜಾಗತಿಕ ಆಹಾರ, ರಸಗೊಬ್ಬರಗಳ ಪೂರೈಕೆಗಿರುವ ಅಡೆತಡೆಯನ್ನು ನಿವಾರಿಸಲಿದೆ.
ವ್ಯಾಪಾರದ ಮೇಲಿನ ನಿರ್ಬಂಧದಿಂದಾಗಿ ಆಗುತ್ತಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಆಫ್ರಿಕಾದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
“ರಷ್ಯಾದ ಬ್ಯಾಂಕುಗಳು ಕೃಷಿ ಮತ್ತು ಆಹಾರ ಉತ್ಪನ್ನಗಳ ಖರೀದಿ, ಆಮದು ಅಥವಾ ಸಾಗಣೆಗೆ ಇಂತಿಷ್ಟು ಮೊತ್ತ ಅಥವಾ ಆರ್ಥಿಕ ಸಂಪನ್ಮೂಲದ ಅಗತ್ಯವಿದೆ ಎಂದು ಮಾಹಿತಿ ನೀಡಿದ ಬಳಿಕ, ಅದನ್ನು ಖಾತ್ರಿಪಡಿಸಿಕೊಂಡ ಬಳಿಕವಷ್ಟೇ ಹಣವನ್ನು ಬಿಡುಗಡೆ ಮಾಡಲಾಗುವುದು’ ಎಂದು ಐರೋಪ್ಯ ಒಕ್ಕೂಟದ ಕರಡು ದಾಖಲೆ ತಿಳಿಸಿದೆ.
ಜತೆಗೆ, ರಷ್ಯಾದ ಬಂದರುಗಳಿಂದ ಆಹಾರ ವಸ್ತುಗಳ ರಫ್ತಿಗೂ ಅವಕಾಶ ಸಿಗಲಿದೆ.