ಮಾಸ್ಕೋ: ಪಾಶ್ಚಿಮಾತ್ಯ ಆರ್ಥಿಕ ದಿಗ್ಬಂಧನದ ಬಿಸಿ ರಷ್ಯಾಗೆ ಜೋರಾಗಿಯೇ ತಟ್ಟುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ, ಶತಮಾನದಲ್ಲೇ ಮೊದಲ ಬಾರಿಗೆ ರಷ್ಯಾ ತನ್ನ ವಿದೇಶಿ-ಕರೆನ್ಸಿ ಸವರೈನ್ ಸಾಲದ ಸುಸ್ತಿದಾರನಾಗಿದೆ.
ನಿರ್ಬಂಧದಿಂದಾಗಿ ಸಾಗರೋತ್ತರ ಸಾಲಗಾರರಿಗೆ ಪಾವತಿ ಮಾರ್ಗವು ಮುಚ್ಚಿಹೋಗಿದೆ. ಸುಮಾರು 100 ದಶಲಕ್ಷ ಡಾಲರ್ ಮೊತ್ತದ ಬಡ್ಡಿ ಪಾವತಿಗೆ ನೀಡಲಾಗಿದ್ದ ಗ್ರೇಸ್ ಅವಧಿಯು ಮೇ 27ರಂದು ಕೊನೆಗೊಂಡಿರುವ ಕಾರಣ, ರಷ್ಯಾ ಈಗ ಸುಸ್ತಿದಾರನ ಪಟ್ಟ ಹೊತ್ತುಕೊಳ್ಳುವಂತಾಗಿದೆ.
ಮಾರ್ಚ್ ಆರಂಭದಿಂದಲೂ ದೇಶದ ಯೂರೋಬಾಂಡ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಕೇಂದ್ರ ಬ್ಯಾಂಕ್‌ನ ವಿದೇಶಿ ಮೀಸಲು ನಿಧಿಯೂ ಸ್ತಂಭನಗೊಂಡಿದೆ.
ರಷ್ಯಾದ ದೊಡ್ಡ ದೊಡ್ಡ ಬ್ಯಾಂಕುಗಳು ಕೂಡ ಜಾಗತಿಕ ಆರ್ಥಿಕ ವ್ಯವಸ್ಥೆಯ ಸಂಪರ್ಕ ಕಡಿದುಕೊಂಡಿವೆ. ಒಟ್ಟಿನಲ್ಲಿ ರಷ್ಯಾದ ಆರ್ಥಿಕತೆಯು ಪತನದಂಚಿಗೆ ತಳ್ಳಲ್ಪಡುತ್ತಿದೆ.
ಈ ಹಿಂದೆ 1998ರಲ್ಲಿ ರಷ್ಯಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ರೂಬಲ್ ಕೂಡ ಪತನಗೊಂಡ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ಬೋರಿಸ್ ಯೆಲ್‌ಸ್ಟಿನ್‌ರ ಸರ್ಕಾರವೂ ತನ್ನ ಸ್ಥಳೀಯ ಸಾಲದ ಮೊತ್ತ 40 ಶತಕೋಟಿ ಡಾಲರ್ ಪಾವತಿಸಲಾಗದೇ ಸುಸ್ತಿದಾರನಾಗಿತ್ತು. ಅದಕ್ಕೂ ಮುನ್ನ 1918ರಲ್ಲಿ ರಷ್ಯಾವು ವಿದೇಶಿ ಸಾಲಗಾರರಿಗೆ ಸುಸ್ತಿದಾರನಾಗಿತ್ತು.