Advertisement

ಮುಂದಿನ ವಾರದಿಂದ ಕಾನ್ಪುರದಲ್ಲಿ “ಸ್ಪುಟ್ನಿಕ್‌-5′ಲಸಿಕೆ ಪ್ರಯೋಗ ಶುರು

08:38 PM Nov 15, 2020 | sudhir |

ಕಾನ್ಪುರ/ನವದೆಹಲಿ: ರಷ್ಯಾ ಸರ್ಕಾರ ಅಭಿವೃದ್ಧಿಪಡಿಸಿರುವ “ಸ್ಪುಟ್ನಿಕ್‌-5′ ಕೊರೊನಾ ಲಸಿಕೆ ಪ್ರಯೋಗದ 2, 3ನೇ ಹಂತ ಭಾರತದಲ್ಲಿ ನಡೆಯಲಿದೆ. ಕಾನ್ಪುರದಲ್ಲಿರುವ ವೈದ್ಯಕೀಯ ಕಾಲೇಜಿಗೆ ಮುಂದಿನ ವಾರ ಪ್ರಯೋಗಕ್ಕಿರುವ ಲಸಿಕೆಗಳು ಬರುವ ಸಾಧ್ಯತೆ ಇದೆ. ದೇಶದಲ್ಲಿ ಲಸಿಕೆಯ ಪ್ರಯೋಗ ಮತ್ತು ವಿತರಣೆಯ ಹೊಣೆ ಹೊತ್ತುಕೊಂಡಿರುವ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ಗೆ ಭಾರತದ ಔಷಧ ನಿಯಂತ್ರಣ ಮಹಾನಿದೇಶನಾಲಯ (ಡಿಸಿಜಿಐ) ಅನುಮತಿ ನೀಡಿದ ಬಳಿಕ ವೈದ್ಯಕೀಯ ಕಾಲೇಜಿನಲ್ಲಿ ಮಾನವರ ಮೇಲೆ ಪ್ರಯೋಗ ನಡೆಸಲು ತೀರ್ಮಾನಿಸಲಾಗಿದೆ.

Advertisement

ಗಣೇಶ ಶಂಕರ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಆರ್‌.ಬಿ.ಕಮಲ್‌ ಪ್ರತಿಕ್ರಿಯೆ ನೀಡಿ “180 ಮಂದಿ ಲಸಿಕೆಯ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಬಂದಿದ್ದಾರೆ. ಮುಂದಿನ ವಾರದಿಂದ ಅದರ ಪ್ರಯೋಗ ಶುರುವಾಗಲಿದೆ. ಪ್ರತಿಯೊಬ್ಬರಿಗೂ ಒಂದು ಡೋಸ್‌ ನೀಡಲಾಗುತ್ತದೆ. ಅದಕ್ಕೆ ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುತ್ತದೆ’ ಎಂದರು.

ಐಸಿಯುಗೆ ಅಹ್ಮದ್‌ ಪಟೇಲ್‌ ದಾಖಲು
ಕೆಲವು ವಾರಗಳ ಹಿಂದೆ ಸೋಂಕು ದೃಢಪಟ್ಟಿದ್ದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ (71 )ಅವರನ್ನು ಮೇದಾಂತ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಟೇಲ್‌ ಪುತ್ರ ಫೈಸಲ್‌ “ಕೆಲವು ವಾರಗಳ ಹಿಂದೆ ಅಹ್ಮದ್‌ ಪಟೇಲ್‌ಗೆ ಸೋಂಕು ದೃಢಪಟ್ಟಿತ್ತು. ಅವರನ್ನು ಈಗ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಸ್ಥಿತಿಯನ್ನು ವೈದ್ಯರ ತಂಡ ಗಮನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಪ್ರಮುಖರು ಪಟೇಲ್‌ ಶೀಘ್ರ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.

ಶೇ.93 ಗುಣ ಪ್ರಮಾಣ: ದೇಶದಲ್ಲಿ ಸೋಂಕಿನಿಂದ ಗುಣವಾಗುವ ಪ್ರಮಾಣ ಶೇ.93.09 ಆಗಿದೆ. ಶನಿವಾರದಿಂದ ಭಾನುವಾರದ ಅವಧಿಯಲ್ಲಿ ಹೊಸತಾಗಿ 41, 100 ಹೊಸ ಸೋಂಕು ಪ್ರಕರಣ ದೃಢಪಟ್ಟಿದೆ. ಇದೇ ಅವಧಿಯಲ್ಲಿ 477 ಮಂದಿ ಅಸುನೀಗಿದ್ದಾರೆ. ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲೀಗ 4,79, 216 ಸಕ್ರಿಯ ಕೇಸುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next