ಉಕ್ರೇನ್‌ನ ಮರಿಯುಪೋಲ್ ಈಗ ರಷ್ಯಾ ಪಡೆಗಳ ಪ್ರಮುಖ ಟಾರ್ಗೆಟ್ ಆಗಿದ್ದು, ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದಾಗಿ ಅಲ್ಲಿನ ಜನರು ಭೂಲೋಕದಲ್ಲೇ ನರಕವನ್ನು ಕಾಣುವಂತಾಗಿದೆ.
ಶೆಲ್‌ಗಳು, ಗ್ರ್ಯಾಡ್-ಸ್ಮರ್ಚ್ ರಾಕೆಟ್‌ಗಳು, ಕ್ಷಿಪಣಿಗಳು ಇಲ್ಲಿನ ಪ್ರತಿಯೊಂದು ಕಟ್ಟಡಗಳಿಗೂ ಅಪ್ಪಳಿಸುತ್ತಲೇ ಇವೆ. ರಾತ್ರಿ-ಹಗಲೆನ್ನದೇ ವೈಮಾನಿಕ ದಾಳಿಗಳು ನಡೆಯುತ್ತಿವೆ. ಇಲ್ಲಿರುವ ಪ್ರತಿಯೊಂದು ಐತಿಹಾಸಿಕ ಕೇಂದ್ರಗಳೂ ನಾಮಾವಶೇಷಗೊಂಡಿವೆ.
1.35 ಲಕ್ಷ ಮಂದಿ ನೆಲೆಸಿರುವ ಮರಿಯುಪೋಲ್ ಲೆಫ್ಟ್ ಬ್ಯಾಂಕ್ ಎಷ್ಟರಮಟ್ಟಿಗೆ ಹಾನಿಗೀಡಾಗಿದೆಯೆಂದರೆ, ಇನ್ನು ಮುಂದೆ ಅಲ್ಲಿ ಯಾರೂ ಬದುಕಲು ಅಸಾಧ್ಯವಾದಂಥ ಸ್ಥಿತಿಗೆ ತಲುಪಿದೆ.
ಮೃತದೇಹಗಳೆಲ್ಲ ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿವೆ. 1200ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.
ನಗರದ ಹೊರವಲಯದಲ್ಲಿ ಸಾಮೂಹಿಕ ಸಮಾಧಿಗಾಗಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಲಾಗಿದೆ. ಮರಿಯುಪೋಲ್ ನಗರದಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ. ಕುಡಿಯಲು ನೀರೂ ಇಲ್ಲ, ಅಡುಗೆ ಮಾಡಲು ಗ್ಯಾಸ್ ಕೂಡ ಸಿಗುತ್ತಿಲ್ಲ. ರಷ್ಯಾದ ಪಡೆಯು ಸುಮಾರು 3.50 ಲಕ್ಷ ಮಂದಿಯನ್ನು ಒತ್ತೆಯಲ್ಲಿಟ್ಟುಕೊಂಡಿದೆ. 5 ದಿನಗಳ ಹಿಂದೆಯೇ ಅಂಗಡಿಗಳು, ಫಾರ್ಮಸಿಗಳನ್ನು ಲೂಟಿ ಮಾಡಲಾಗಿದೆ. ರಷ್ಯಾದ ಆಕ್ರಮಣವು ಸುಂದರ ನಗರವೊಂದರಲ್ಲಿ ಅರಾಜಕತೆ ಸೃಷ್ಟಿಸಿದೆ.
ಜನರು ಆಹಾರಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಮತ್ತೂಬ್ಬರ ಕಾರಿನ ಗಾಜನ್ನು ಒಡೆದು ಪೆಟ್ರೋಲ್ ಕದಿಯುತ್ತಿದ್ದಾರೆ. ಧ್ವಂಸಗೊಂಡ ಮನೆಗಳಿಗೆ ನುಗ್ಗಿ ಕಟ್ಟಿಗೆಗಳೇನಾದರೂ ಇದೆಯೇ ಎಂದು ಹುಡುಕಾಡುತ್ತಿದ್ದಾರೆ. ಸಿಕ್ಕರೆ ಅದನ್ನು ತಂದು, ಬೆಂಕಿ ಕಾಯಿಸಿ ಮಂಜುಗಡ್ಡೆಗಳನ್ನು ಕರಗಿಸಿ ಕುಡಿಯಲು ಬಳಸುತ್ತಿದ್ದಾರೆ.