ಮಾಸ್ಕೋ: ಗುಜರಾತ್ ಗಲಭೆ ಕುರಿತಾಗಿ ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ನಡುವೆ ರಷ್ಯಾವು ಭಾರತದ ಬೆಂಬಲಕ್ಕೆ ನಿಂತಿದೆ. ಮಾಸ್ಕೋ ವಿರುದ್ಧ ಮಾತ್ರವಲ್ಲದೆ ಸ್ವತಂತ್ರ ನೀತಿಯನ್ನು ಅನುಸರಿಸುವ ಇತರ ಜಾಗತಿಕ ಶಕ್ತಿ ಕೇಂದ್ರಗಳ ವಿರುದ್ಧವೂ ಬಿಬಿಸಿ ವಿವಿಧ ರಂಗಗಳಲ್ಲಿ “ಮಾಹಿತಿ ಯುದ್ಧವನ್ನು ನಡೆಸುತ್ತಿದೆ” ಎಂದು ರಷ್ಯಾ ಆರೋಪಿಸಿದೆ.
“ನಮ್ಮ ಭಾರತೀಯ ಸ್ನೇಹಿತರು ಈ ಪರಿಸ್ಥಿತಿಯ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಬಿಬಿಸಿಯು ರಷ್ಯಾದ ವಿರುದ್ಧ ಮಾತ್ರವಲ್ಲದೆ ಇತರ ಜಾಗತಿಕ ಕೇಂದ್ರಗಳ ವಿರುದ್ಧವೂ ವಿವಿಧ ರಂಗಗಳಲ್ಲಿ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ ಎಂಬ ಅಂಶವನ್ನು ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ” ಎಂದು ರಷ್ಯಾ ವಿದೇಶಾಂಗ ಖಾತೆಯ ವಕ್ತಾರೆ ಮರಿಯಾ ಜಖರೋವಾ ಸುದ್ದಿಗಾರರಿಗೆ ತಿಳಿಸಿದರು.
2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದೆ. ಕೇಂದ್ರ ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಮತ್ತು ಯುಟ್ಯೂಬ್ ಗಳಿಂದ ಲಿಂಕ್ ತೆಗೆಸಲಾಗಿದೆ. ಆದರೂ ಕೆಲವು ಕಡೆ ಈ ಡಾಕ್ಯುಮೆಂಟರಿಯ ಸ್ಕ್ರೀನಿಂಗ್ ನಡೆಸಲಾಗುತ್ತಿದೆ.
ಇದನ್ನೂ ಓದಿ:ಅಂಡರ್ 19: ಅರ್ಚನಾ ಕುಟುಂಬ ಫೈನಲ್ ನೋಡಲು ನೆರವು ನೀಡಿದ ಪೊಲೀಸ್ ಅಧಿಕಾರಿ
ಕಾರ್ಯಕ್ರಮವನ್ನು “ಉನ್ನತ ಸಂಪಾದಕೀಯ ಮಾನದಂಡಗಳ ಪ್ರಕಾರ ತೀವ್ರ ಸಂಶೋಧನೆಯಿಂದ ಮಾಡಲಾಗಿದೆ” ಎಂದು ಬಿಬಿಸಿ ಸಮರ್ಥಿಸಿಕೊಂಡಿದೆ. ಆದರೆ ಬ್ರಿಟಿಷ್ ಪ್ರಧಾನಿ ರಿಷಿ ಸುನಾಕ್ ಅವರು ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಪ್ರಧಾನಿ ಮೋದಿಯವರನ್ನು ಸಮರ್ಥಿಸಿಕೊಂಡಿದ್ದಾರೆ.