Advertisement

DAM ಮೇಲೆ ರಷ್ಯಾ ದಾಳಿ? ಉಕ್ರೇನ್‌ಗೆ ಪ್ರವಾಹ ಭೀತಿ

10:49 PM Jun 06, 2023 | Team Udayavani |

ಕೀವ್‌: ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಈಗ ದಕ್ಷಿಣ ಉಕ್ರೇನ್‌ನಲ್ಲಿರುವ ಬೃಹತ್‌ ನೋವಾ ಕಖೋವ್ಕಾ ಅಣೆಕಟ್ಟು ಬಲಿಯಾಗಿದೆ. ಮಂಗಳವಾರ ಈ ಡ್ಯಾಂ ಮೇಲೆ ದಾಳಿ ನಡೆದಿದ್ದು, ಇದರ ಒಂದು ಪಾರ್ಶ್ವವೇ ಕುಸಿದುಬಿದ್ದಿದೆ. ಪರಿಣಾಮ ಜಲಾಶಯದಲ್ಲಿನ ನೀರು ಒಂದೇ ಸಮನೆ ಹರಿಯಲಾರಂಭಿಸಿದ್ದು, ಸಾವಿರಾರು ಹಳ್ಳಿಗಳು ಜಲಾವೃತಗೊಳ್ಳುವ ಭೀತಿ ಆವರಿಸಿದೆ. ಜತೆಗೆ ದೊಡ್ಡ ಮಟ್ಟದ ಪರಿಸರೀಯ ವಿಪತ್ತಿನ ಸುಳಿವನ್ನು ನೀಡಿದೆ.

Advertisement

ಈ ಅಣೆಕಟ್ಟು ರಷ್ಯಾದ ವಶದಲ್ಲಿರುವ ಪ್ರದೇಶದಲ್ಲಿದ್ದು, ಅಣೆಕಟ್ಟೆಯ ಮೇಲೆ ರಷ್ಯಾ ಪಡೆಗಳೇ ದಾಳಿ ನಡೆಸಿವೆ ಎಂದು ಉಕ್ರೇನ್‌ ಆರೋಪಿಸಿದರೆ, ಇದು ಉಕ್ರೇನ್‌ ಪಡೆಗಳ ಕೃತ್ಯ ಎಂದು ರಷ್ಯಾ ಹೇಳಿದೆ. ಡ್ಯಾಂ ಕುಸಿದಿರುವ ಸುದ್ದಿ ತಿಳಿಯುತ್ತಲೇ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರು ರಾಷ್ಟ್ರೀಯ ಭದ್ರತ ಮಂಡಳಿಯೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಜತೆಗೆ  ಜಲಾಶಯದ ನೀರಿನಿಂದಾಗಿ ಜಲಾವೃತಗೊಳ್ಳಬಹುದಾದ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವೂ ಭರದಿಂದ ಸಾಗಿದೆ. ಈ ಪ್ರದೇಶಗಳಲ್ಲಿ ಸುಮಾರು 16 ಸಾವಿರ ಮಂದಿ ವಾಸಿಸುತ್ತಿದ್ದಾರೆ.

ಪರಿಣಾಮ ಏನು?

ಅಣೆಕಟ್ಟು ಒಡೆದು ಹೋಗಿರುವ ಕಾರಣ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ದಿಢೀರ್‌ ಪ್ರವಾಹ ಉಂಟಾಗಬಹುದು, ನೀರಿನ ಮಟ್ಟ ತಗ್ಗುವ ಕಾರಣ ಝಪೋರ್‌ಝಿಯಾ ಅಣು ವಿದ್ಯುತ್‌ ಸ್ಥಾವರವನ್ನು ತಣ್ಣಗಿಡಲು ನೀರಿನ ಕೊರತೆ ಉಂಟಾಗಬಹುದು, ಕ್ರಿಮಿಯಾ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಬಹುದು.

ಅಣೆಕಟ್ಟೆಯ ಕುರಿತು…

Advertisement

– ಸೋವಿಯತ್‌ ಯುಗದಲ್ಲಿ ಡಿನಿಪ್ರೊ ನದಿಗೆ ನಿರ್ಮಿಸಲಾದ ಅಣೆಕಟ್ಟು. ಖೆರ್ಸಾನ್‌ ನಗರದಿಂದ 30 ಕಿ.ಮೀ. ಪೂರ್ವದಲ್ಲಿದೆ.

– 30 ಮೀಟರ್‌ ಎತ್ತರ, 3.2 ಕಿ.ಮೀ. ಉದ್ದವಿದೆ. ಕಖೋವ್ಕಾ ಜಲವಿದ್ಯುತ್‌ ಸ್ಥಾವರದ ಭಾಗವಾಗಿ 1956ರಲ್ಲಿ ಇದನ್ನು ನಿರ್ಮಿಸಲಾಯಿತು.

–  ಯುರೋಪ್‌ನ ಅತೀದೊಡ್ಡ ಅಣು ವಿದ್ಯುತ್‌ ಸ್ಥಾವರ ಝಪೋರ್‌ಝಿಯಾಗೆ ಕೂಲಿಂಗ್‌ ವಾಟರ್‌ ಅನ್ನು ಈ ಜಲಾಶಯದಿಂದಲೇ ಬಳಸಲಾಗುತ್ತದೆ.

–  ಉಟಾಹ್‌ನಲ್ಲಿನ ಗ್ರೇಟ್‌ ಸಾಲ್ಟ್ ಲೇಕ್‌ನಲ್ಲಿ ಎಷ್ಟು ನೀರಿದೆಯೋ ಅಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಜಲಾಶಯದ್ದಾಗಿದೆ.

– ರಷ್ಯಾದ ವಶದಲ್ಲಿರುವ ಕ್ರಿಮಿಯಾ ಪರ್ಯಾಯ ದ್ವೀಪ ಪ್ರದೇಶದ ಜನರಿಗೆ ನೀರನ್ನು ಈ ಜಲಾಶಯದಿಂದಲೇ ಪೂರೈಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next