ಮಾಸ್ಕೋ/ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗ ಭೀಕರ ಹಂತಕ್ಕೆ ತಲುಪಿದ್ದು, ಏತನ್ಮಧ್ಯೆ ಉಕ್ರೇನ್ ನ 2ನೇ ಅತಿದೊಡ್ಡ ನಗರ ಖಾರ್ಕಿವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾ ಸೇನೆಯ ಪ್ರಯತ್ನ ವಿಫಲಗೋಲಸಿದ್ದು, ಖಾರ್ಕಿವ್ ತಮ್ಮ ವಶದಲ್ಲಿರುವುದಾಗಿ ಉಕ್ರೇನ್ ಸೋಮವಾರ (ಫೆ.28) ಘೋಷಿಸಿದೆ.
ಇದನ್ನೂ ಓದಿ:ನೆಲಮಂಗಲ: ಬಿಜೆಪಿ ಪ್ರತಿಭಟನೆ ವೇಳೆ ಕಾಂಗ್ರೆಸ್ ಬಾವುಟ ಹಾರಿಸಿದ ಏಕಾಂಗಿ!
ರಷ್ಯಾ ಶಾಂತಿ ಮಾತುಕತೆಯ ಹಾದಿಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ ಎಂದು ಆರೋಪಿಸಿರುವ ಉಕ್ರೇನ್ ಸೇನಾ ಮೂಲಗಳು, ರಷ್ಯಾ ಸೇನೆ ನಮ್ಮ ನಾಗರಿಕ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಆದರೆ ರಷ್ಯಾ ಸೇನೆಯ ಎಲ್ಲಾ ಕಾರ್ಯಾಚರಣೆಯನ್ನು ವಿಫಲಗೊಳಿಸಿರುವುದಾಗಿ ಉಕ್ರೇನ್ ತಿರುಗೇಟು ನೀಡಿದೆ.
ಇಂದು ಉಕ್ರೇನ್ ಸೇನೆಯ ಆರ್ಟಿಲ್ಲರಿ ದಾಳಿಗೆ ರಷ್ಯಾ ಸೇನೆಯ ಯುದ್ಧೋಪಕರಣ ನಾಶಗೊಂಡಿದ್ದು, ಹಲವು ಸೈನಿಕರು ಜೀವ ಕಳೆದುಕೊಂಡಿರುವುದಾಗಿ ಆರೋಪಿಸಿದೆ. ಶತ್ರುದೇಶ(ರಷ್ಯಾ)ಕ್ಕೆ ಈಗ ಮನವರಿಕೆಯಾಗಿದೆ, ನಮ್ಮ ತಿರುಗೇಟು ವಿಭಿನ್ನ ರೀತಿಯಲ್ಲಿತ್ತು. ಈ ನಿಟ್ಟಿನಲ್ಲಿ ರಷ್ಯಾ ಭಯಕ್ಕೊಳಗಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಯುದ್ಧದ ಬಿಕ್ಕಟ್ಟಿನ ನಡುವೆಯೇ ಉಕ್ರೇನ್ ವಾರದ ಕರ್ಫ್ಯೂವನ್ನು ರದ್ದುಗೊಳಿಸಿದ್ದು, ಎಲ್ಲಾ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣಕ್ಕೆ ತೆರಳುವ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಮರಳುವಂತೆ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಸ್ಥಳಾಂತರಕ್ಕಾಗಿ ಉಕ್ರೇನ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿರುವುದಾಗಿ ವಿವರಿಸಿದೆ.
ಉಕ್ರೇನ್ ನಾಗರಿಕರು ಕೀವ್ ತೊರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಮದು ರಷ್ಯಾ ಸೇನೆ ತಿಳಿಸಿರುವುದಾಗಿ ನ್ಯೂಸ್ ಏಜೆನ್ಸಿ ವಿವರ ನೀಡಿದೆ. ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆ ಇಂದು ಸಂಜೆ 3.30ಕ್ಕೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಉಕ್ರೇನ್ ನ ಕೀವ್ ಮತ್ತು ಖಾರ್ಕಿವ್ ನಗರವನ್ನು ತನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಈ ಮೊದಲು ರಷ್ಯಾ ಸೇನೆ ತಿಳಿಸಿತ್ತು. ಆದರೆ ಖಾರ್ಕಿವ್ ತಮ್ಮ ವಶದಲ್ಲಿಯೇ ಇದ್ದು, ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಿರುವುದಾಗಿ ಉಕ್ರೇನ್ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದೆ.