Advertisement

ಹಾಸನಾಂಬೆ ದರ್ಶನಕ್ಕೆ ನೂಕು ನುಗ್ಗಲು: ಎಸಿಗೆ ಹೊಡೆದ ಡಿ.ಸಿ.

12:12 AM Nov 12, 2023 | Team Udayavani |

ಹಾಸನ: ಹಾಸನಾಂಬೆ ದರ್ಶನದ 9ನೇ ದಿನವಾದ ಶನಿವಾರ ದೇವರ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದು, ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಹಾಗೂ ಸಿಬಂದಿ ಹರ ಸಾಹಸಪಟ್ಟರು.
ಶುಕ್ರವಾರ ಭಕ್ತರೊಬ್ಬರಿಗೆ ಕರೆಂಟ್‌ ಶಾಕ್‌ ಹೊಡೆದು ಸಂಭವಿಸಿದ ಅವಘಡದ ನಡುವೆ ಶನಿವಾರ ಭಕ್ತರ ನಿಯಂತ್ರಿಸಲಾಗದೆ ಅಧಿಕಾರಿಗಳೇ ಜಪಾಪಟಿಗಿಳಿಯುವ ಅವ್ಯವಸ್ಥೆ ಸೃಷ್ಟಿಯಾಯಿತು. ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಮುಂಜಾನೆ ಯಿಂದಲೂ ದೇವಾಲಯದ ಆವರಣದಲ್ಲಿಯೇ ಸುತ್ತಾಡುತ್ತಾ ಶಾಂತಿಯಿಂದ ಸಾಲಿನಲ್ಲಿ ಸಾಗಿ ದೇವಿ ದರ್ಶನ ಪಡೆಯಬೇಕೆಂದು ಮನವಿ ಮಾಡುತ್ತಲೇ ಇದ್ದರು. ಆದರೂ ಭಕ್ತರ ನಿಯಂತ್ರಣ ಸಾಧ್ಯವಾಗದೆ ಪರದಾಡಿದರು.

Advertisement

ಎ.ಸಿ.ಗೆ ಹೊಡೆದ ಡಿಸಿ
ದೇವಾಲಯದ ಪ್ರವೇಶ ದ್ವಾರದ ಬಳಿ ಸಕಲೇಶಪುರ ಕ್ಷೇತ್ರದ ಶಾಸಕರ ಕುಟುಂಬದವರು ಪೂಜಾ ಸಾಮಗ್ರಿಯೊಂದಿಗೆ ದೇವಾಲಯ ಪ್ರವೇಶಿಸುತ್ತಿದ್ದರು. ಅಲ್ಲಿಗೆ ಬಂದ ಜಿಲ್ಲಾಧಿಕಾರಿ, ಇವರನ್ನು ಬಿಟ್ಟವರ್ಯಾರು ಎಂದು ಅಲ್ಲಿದ್ದ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಶ್ರುತಿ ಅವರು ಶಾಸಕರ ಕಡೆಯವರು ಎಂದು ಹೇಳಲು ಮುಂದಾದಾಗ ಸಿಟ್ಟಾದ ಜಿಲ್ಲಾಧಿಕಾರಿ‌ು, ಸುಮ್ಮನಿರ್ರೀ, ಬೆಳಗ್ಗಿನಿಂದ ಭಕ್ತರು ಬರುತ್ತಿಲ್ಲವಾ, ಈಗ ದಿಢೀರನೆ ಬಿಟ್ಟರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಆಗ ಶ್ರುತಿ ಅವರು ಏನೋ ಹೇಳಲು ಪ್ರಯತ್ನಿಸಿ ಕೈ ಚಾಚಿದಾಗ ಅವರ ಕೈಗೇ ಸತ್ಯಭಾಮ ಅವರು ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನಾಂಬ ಜಾತ್ರೋತ್ಸವ ಆರಂಭವಾದ ಬಳಿಕ ಜಿಲ್ಲಾಧಿಕಾರಿ ಸತ್ಯಭಾಮ ಅವರು ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಹಾಸನಾಂಬ ದೇವಾಲಯದ ಕಳಶ ಪುನರ್‌ ಪ್ರತಿಷ್ಠಾಪನೆಗೆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಹಾಸನ ಶಾಸಕ ಸ್ವರೂಪ್‌ ಪ್ರಕಾಶ್‌ ಅವರನ್ನು ಆಹ್ವಾನಿಸದೆ ತಮ್ಮ ಪತಿಯೊಂದಿಗೆ ಸತ್ಯಭಾಮಾ ಅವರೇ ಪೂಜೆ ಸಲ್ಲಿಸಿ ಶಿಷ್ಟಾಚಾರ ಉಲ್ಲಂ ಸಿ ವಿವಾದಕ್ಕೀಡಾಗಿದ್ದರು. ಈಗ ಉಪ ವಿಭಾಗಾಧಿಕಾರಿಗೇ ಬಹಿರಂಗವಾಗಿಯೇ ಹೊಡೆದು ಮತ್ತೂಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಆದೇಶಕ್ಕೆ ಬೆಲೆ ಇಲ್ಲವೇ ?
ದೇವಿಯ ದರ್ಶನಕ್ಕೆ ಬೆಳಗ್ಗಿನಿಂದ ರಾತ್ರಿವರೆಗೂ ಸಾವಿರಾರು ಭಕ್ತರು ಬರುತ್ತಿರುವುದರಿಂದ ಅತಿ ಗಣ್ಯರನ್ನು ದೇವಾಲಯದ ಗರ್ಭಗುಡಿ ಪ್ರವೇಶಿಸಿ ದೇವಿ ದರ್ಶನ ಮಾಡುವ ಶಿಷ್ಟಾಚಾರದ ದರ್ಶನವನ್ನು ನಿಷೇಧಿಸಿ ಹಾಸನ ಉಪ ವಿಭಾಗಾಧಿಕಾರಿಯೂ ಆದ ದೇವಾಲಯದ ಆಡಳಿತಾಧಿಕಾರಿ ಮಾರುತಿ ಅವರು ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದರು. ಆದರೆ ದೇವಿಯ ದರ್ಶನಕ್ಕೆ ಬಂದ ಅಬಕಾರಿ ಸಚಿವ ಆರ್‌. ಬಿ.ತಿಮ್ಮಾಪುರ ಹಾಗೂ ಪಶುಸಂಗೋಪನೆ ಸಚಿವ ವೆಂಕಟೇಶ್‌ ಅವರನ್ನು ಗರ್ಭಗುಡಿಗೆ ಕರೆದೊಯ್ದು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಅಧಿಕಾರಿಗಳು ಹೊರಡಿಸಿದ ಆದೇಶವನ್ನು ಅಧಿಕಾರಿಗಳೇ ಉಲ್ಲಂ ಸಿದ್ದರ ಬಗ್ಗೆ ಭಕ್ತರು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next